ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

Last Updated 26 ಸೆಪ್ಟೆಂಬರ್ 2018, 13:23 IST
ಅಕ್ಷರ ಗಾತ್ರ

ಶಿವಮೊಗ್ಗ: ಬಗರ್‌ಹುಕುಂ ಜಮೀನು ಅಕ್ರಮ ಮಂಜೂರಾತಿ ಮಾಡಿರುವ ಭದ್ರಾವತಿ ತಹಶೀಲ್ದಾರ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆಗ್ರಹಿಸಿದರು.

ಬಗರ್ ಹುಕುಂ ಮಂಜೂರಾತಿ ನಿಯಮ ಗಾಳಿಗೆ ತೂರಿದ್ದಾರೆ. ಇವರ ವಿರುದ್ಧ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಈ ಹಿಂದೆ ಕಾಲ್ನಡಿಗೆ ಜಾಥ ಕೂಡ ಮಾಡಿದೆ. ಜಿಲ್ಲಾಡಳಿತ ತನಿಖೆಗಾಗಿ ಆಂತರಿಕ ಸಮಿತಿ ನೇಮಿಸಿದೆ. ತಕ್ಷಣ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಒತ್ತಾಯಿಸಿದರು.

ಸರ್ಕಾರಿ ಉದ್ಯೋಗಿಗಳಿಗೆ, ಒಂದೇ ಕುಟುಂಬದ ಹಲವರಿಗೆ ಜಮೀನು ನೀಡಲಾಗಿದೆ. ನಗರ ವ್ಯಾಪ್ತಿಯಿಂದ 10 ಕಿ.ಮೀ. ಒಳಗಿನ ಜಮೀನು, ಕೆರೆ ಪ್ರದೇಶ, ಸರ್ಕಾರಿ ಉದ್ದೇಶಕ್ಕೆ ಮೀಸಲಿಟ್ಟ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

20 ಎಕರೆ ಭೂ ಒಡೆತನ ಹೊಂದಿರುವ ಶ್ರೀಮಂತರಿಗೆ ಮತ್ತು 18 ವರ್ಷ ವಯಸ್ಸು ದಾಟಿಲ್ಲದ ಬಾಲಕನಿಗೂ ಕೂಡ ಜಮೀನು ಮಂಜೂರು ಮಾಡಿದ್ದಾರೆ. ಈ ಎಲ್ಲ ಅವ್ಯವಹಾರಗಳಲ್ಲಿ ತಹಶೀಲ್ದಾರ್, ಶಿರಸ್ತೆದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ, ಸರ್ವೆ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ದೂರಿದರು.

ಕೂಡ್ಲಿಗೆರೆ ಹೋಬಳಿ ಅರಳಿಹಳ್ಳಿ ಗ್ರಾಮದ ಮಹಮದ್ ಯೂಸೂಫ್ ಖಾನ್ ಸರ್ವೇ ನಂ. 24 ಮತ್ತು 19ರಲ್ಲಿ 5 ಎಕರೆ ಬಗರ್‌ ಹುಕುಂ ಜಮೀನಿನಲ್ಲಿ 30 ವರ್ಷಗಳಿಂದ ಅಡಿಕೆ ಬೆಳೆದಿದ್ದಾರೆ. ಆ ಜಮೀನು ಚನ್ನಪ್ಪ ಅವರ ಹೆಸರಿಗೆ ಸಾಗುವಳಿ ನೀಡಲಾಗಿದೆ. ಯೂಸೂಫ್ ಖಾನ್ ಚನ್ನಪ್ಪ ಅವರಿಗೆ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಬಗರ್ ಹುಕುಂ ಜಮೀಮು ಮಾರಾಟ ಮಾಡಲು ಸಾಧ್ಯವಿಲ್ಲ. ಮಾರಾಟ ಮಾಡಿದರೆ ಅದು ಸಿಂಧುವೂ ಆಗುವುದಿಲ್ಲ ಎಂದು ಕನಿಷ್ಠ ಪರಿಜ್ಞಾನ ಅಧಿಕಾರಿಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

ಯೂಸೂಫ್ ಖಾನ್ ಅವರ ದೂರು ದಾಖಲಿಸಿಕೊಳ್ಳದೆ ಭದ್ರಾವತಿ ಗ್ರಾಮಾಂತರ ಪಿಎಸ್ಐ ದೌರ್ಜನ್ಯ ಎಸಗಿದ್ದಾರೆ. ಅವರನ್ನೂ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರಾದ ಟಿ.ಎಚ್. ಹಾಲೇಶಪ್ಪ,ಚಿಕ್ಕಮರಡಿ ರಮೇಶ್, ರತನ್ ಜ್ಯೋತಿ, ಜಗ್ಗು, ಸದಾನಂದ್, ಸುವರ್ಣ, ಏಳುಮಲೈ, ವಿನೋದ್, ಪಳನಿರಾಜ್, ಸದಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT