ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲು ಮಳೆ: ಮತದಾರರಿಗೆ ತೊಂದರೆ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಶನಿವಾರ ತಾಸಿಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದರಿಂದ ಮತದಾರರು ಮತ ಕೇಂದ್ರಗಳಿಗೆ ತೆರಳಲು ತೊಂದರೆ ಅನುಭವಿಸಿದರು.

ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ, ಹತ್ತಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮೇಣದಬತ್ತಿ ಬೆಳಕಿನಲ್ಲಿ ಮತದಾನ ಮಾಡಬೇಕಾಯಿತು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌, ಹುಬ್ಬಳ್ಳಿ–ಧಾರವಾಡ ಪೂರ್ವ ಹಾಗೂ ಧಾರವಾಡ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಕತ್ತಲು ಆವರಿಸಿತ್ತು. ಕಾರ್ಯಕರ್ತರೇ ಮೇಣದಬತ್ತಿ ತಂದುಕೊಟ್ಟರು.

ಮಧ್ಯಾಹ್ನ 3.40ರ ಸುಮಾರಿಗೆ ಗುಡುಗು, ಸಿಡಿಲು ಸಹಿತ ಮಳೆ ಆರಂಭವಾಯಿತು. ಕೆಲಕಾಲ ಆಲಿಕಲ್ಲು ಮಳೆ ಸುರಿಯಿತು. ಹಾಗಾಗಿ, ಮತದಾರರು ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಲಿಲ್ಲ.

ಗಲಿಬಿಲಿ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಎಸ್‌.ಬಿ.ಐ. ಸೊಸೈಟಿ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮತಗಟ್ಟೆಗೆ ಮತ ಹಾಕಲು ಹೋದಾಗ, ಮತ ಯಂತ್ರಗಳನ್ನು ಅದಲು–ಬದಲಾಗಿಟ್ಟಿದ್ದನ್ನು ಕಂಡು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಒಂದು ಕ್ಷಣ ಗಲಿಬಿಲಿಗೆ ಒಳಗಾದರು.

ಕ್ಷೇತ್ರದಲ್ಲಿ 26 ಅಭ್ಯರ್ಥಿಗಳಿರುವುದರಿಂದ ಎರಡು ಮತಯಂತ್ರಗಳನ್ನಿಡಲಾಗಿತ್ತು. ಮೊದಲು ಕ್ರಮ ಸಂಖ್ಯೆ 17 ರಿಂದ ಇರುವ ಯಂತ್ರ, ನಂತರದಲ್ಲಿ ಕ್ರಮ ಸಂಖ್ಯೆ  1ರಿಂದ ಇರುವ ಯಂತ್ರವನ್ನು ಜೋಡಿಸಲಾಗಿತ್ತು. ಇದನ್ನು ನೋಡಿದ ಅವರು, ಕ್ರಮ ಸಂಖ್ಯೆ ಒಂದರಿಂದ ಇರುವ ಯಂತ್ರವನ್ನೇಕೆ ಮೊದಲಿಗೆ ಇಟ್ಟಿಲ್ಲ ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೂಡಲೇ ಅಧಿಕಾರಿಗಳು ಅದನ್ನು ಸರಿಪಡಿಸಿದರು. ಅಧಿಕಾರಿಗಳ ಬೇಜವಾಬ್ದಾರಿಗೆ ಶೆಟ್ಟರ್‌ ಅವರು ಮಾಧ್ಯಮಗಳ ಮುಂದೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಬಿರುಗಾಳಿ–ಮಳೆ: ಕಲಬುರ್ಗಿ ನಗರದಲ್ಲಿ ಶನಿವಾರ ಸಂಜೆ ಬಿರುಗಾಳಿ–ಗುಡುಗು ಮಿಶ್ರಿತ ಮಳೆ ಸುರಿಯಿತು. ಹಾಗಾಗಿ ಸಂಜೆ ಮತಗಟ್ಟೆಗಳಿಗೆ ಮತದಾರರು ಬರುವುದು ವಿರಳವಾಯಿತು.

ರಾಯಚೂರು ಜಿಲ್ಲೆಯ ಕವಿತಾಳ, ಮಸ್ಕಿಗಳಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಹಾಗೂ ಬೀದರ್‌ ಜಿಲ್ಲೆ ಭಾಲ್ಕಿಯಲ್ಲಿ ಸಾಧಾರಣ ಮಳೆ ಆಯಿತು.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.

ಪಣಂಬೂರಿನಲ್ಲಿ 7ಸೆಂ.ಮೀ ಮಳೆ: ಪಣಂಬೂರಿನಲ್ಲಿ 7 ಸೆಂ.ಮೀ ಮಳೆ ದಾಖಲಾಗಿದೆ. ಭಾಗಮಂಡಲ 6, ಕೋಟ 5, ಧರ್ಮಸ್ಥಳ 4, ಮಂಗಳೂರು, ಪುತ್ತೂರು, ಬಾಗಲಕೋಟೆ, ನಾಪೋಕ್ಲು, ಬೇಲೂರು, ಮಂಡ್ಯ, ಮಳವಳ್ಳಿ, ಬೆಂಗಳೂರು ನಗರ ತಲಾ 3, ಶಿರಾಲಿ, ಕಡೂರು, ಹಾಸನ, ಯಲಹಂಕ, ಚಿಂತಾಮಣಿ, ರಾಮನಗರ, ಚನ್ನಪಟ್ಟಣ ತಲಾ 2 ಸೆಂ.ಮೀ ಮಳೆ ದಾಖಲಾಗಿದೆ.

ಉತ್ತರ ರಾಜ್ಯಗಳಲ್ಲಿ ಭಾರಿ ಮಳೆ: ಎಚ್ಚರಿಕೆ

ನವದೆಹಲಿ (ಪಿಟಿಐ): ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎರಡು ದಿನ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗಲಿದೆ. ರಾಜಸ್ಥಾನದ ಕೆಲ ಭಾಗಗಳಲ್ಲಿ ದೂಳಿನಿಂದ ಕೂಡಿದ ಬಿರುಗಾಳಿ ಬೀಸುವುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮೆಡಿಟರೇನಿಯನ್‌ ಸಮುದ್ರದಲ್ಲಿ ಉಂಟಾಗುವ ಪ್ರಕ್ಷುಬ್ಧತೆ ದೇಶದ ಪಶ್ಚಿಮ ಭಾಗದ ವಾತಾವರಣದಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಲಿದೆ ಎಂದೂ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಇನ್ನೂ ಮೂರು ದಿನಗಳು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಪೂರ್ವ ಮುಂಗಾರು ಚುರುಕಾಗಿರುವುದರಿಂದ ಮಳೆಯಾಗುತ್ತಿದ್ದು, ತಾಪಮಾನ ಹೆಚ್ಚಾಗಿ ತೇವಾಂಶ ಸಂಗ್ರಹಗೊಳ್ಳು ವುದರಿಂದ ಮಳೆಯಾಗುತ್ತದೆ. ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆಯ ಸಿ.ಪಿ.ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT