ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಗೆ ತಂದ ಮೆಣಸಿನ ಕಾಯಿ ರಸ್ತೆ ಪಾಲು

ದರ ಕುಸಿತ: ಮಾಡಿದ ಖರ್ಚೂ ಗಿಟ್ಟದ ಸ್ಥಿತಿ
Last Updated 13 ಜೂನ್ 2018, 9:00 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ದರ ಕುಸಿತ ಹಾಗೂ ಗ್ರಾಹಕರ ಕೊರತೆ ಪರಿಣಾಮ ಚಿಲ್ಲರೆ ವ್ಯಾಪಾರಸ್ಥರು ಇಲ್ಲಿನ ಸೋಮವಾರ ಸಂತೆಯಲ್ಲಿ ಹಸಿ ಮೆಣಸಿನಕಾಯಿಯನ್ನು ರಸ್ತೆ ಪಕ್ಕ ಗುಂಪೆ ಹಾಕಿ ಹೋಗಿದ್ದಾರೆ.

‘ಗೊಬ್ಬರ ಹಾಗೂ ಕಳೆ ಆಳಿನ ಖರ್ಚಾದರೂ ಕೈಗೆಟಕೀತು ಎಂದು ನಂಬಿ ಮೆಣಸಿನಕಾಯಿ ಬೆಳೆದ ನಾವು ಕೈಸುಟ್ಟುಕೊಂಡಿ
ದ್ದೇವೆ. ಬೇಸಿಗೆಯ ಸಗಟು ವ್ಯಾಪಾರದಲ್ಲೂ ಒಳ್ಳೆಯ ದರ ನಮಗೆ ಸಿಗದೇ ಕಂಗಾಲಾದೆವು’ ಎಂದು ಅನ್ನದಾತ ಅಳಲು ತೋಡಿಕೊಂಡಿದ್ದಾರೆ.

‘ಅಲ್ಪಾವಧಿ ಬೆಳೆಯಾಗಿರುವ ಮೆಣಸಿನ ಗಿಡ ಹಚ್ಚಿದರೆ ಹಣ ಬಂದೀತು ಎಂದು ಬೀಜ ತಂದು ಸಸಿ ಹಾಕಿ ಎಕರೆಗಟ್ಟಲೆ ನಾಟಿ ಮಾಡಿದೆವು. ವಿಧಾನಸಭೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ನೀತಿ ಸಂಹಿತೆಯ ಬಿಸಿ ತಟ್ಟಿದಂತೆ ರೈತನಿಗೂ ಚುನಾವಣೆ ಕಾವು ಬಡಿಯಿತು. ಆಂಧ್ರ ಸೇರಿದಂತೆ ಹೊರರಾಜ್ಯದ ಮಾರುಕಟ್ಟೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಬರುತ್ತಿತ್ತು. ಚುನಾವಣೆ ನೀತಿ ಸಂಹಿತೆ ಇದ್ದದ್ದರಿಂದ ಹೊರರಾಜ್ಯಕ್ಕೆ ಸಗಟು ವ್ಯಾಪಾರಸ್ಥರು ಪೈರು ತೆಗೆದುಕೊಂಡು ಹೋಗಲು ಮನಸ್ಸು ಮಾಡಲಿಲ್ಲ. ಹೀಗಾಗಿ ಬೆಲೆ ಕುಸಿದಿದ್ದು ಮತ್ತೆ ಏರಿಕೆ ಕಾಣಲೇ ಇಲ್ಲ’ ಎಂದು ಪ್ರಕಾಶ್ ಬೆಳವಡಿ ತಿಳಿಸಿದರು.

‘ಮೆಣಸಿನ ಕಾಯಿ ಕೊಯ್ಯಲು ಒಂದಾಳಿಗೆ ನೂರೈವತ್ತು ರೂಪಾಯಿ ಸಂಬಳ ನೀಡಬೇಕು. ಒಬ್ಬ ಮೂರರಿಂದ ಗರಿಷ್ಠ ನಾಲ್ಕು ಮಣ (ಸುಮಾರು 40ಕೆಜಿ) ಕಾಯಿ ಕೊಯ್ಯುತ್ತಾರೆ. ಒಂದು ಮಣಕ್ಕೆ ಸಗಟು ವ್ಯಾಪಾರಸ್ಥರು ಕೇವಲ ನೂರು ರೂಪಾಯಿ ದರ ನೀಡಿದರು. ಇದರಿಂದಾಗಿ ಬೀಜ, ಗೊಬ್ಬರ, ಹಗಲು- ರಾತ್ರಿ ನಿಂತು ನೀರು ಉಣಿಸಿದ್ದು ಎಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಮಾಡಿದ ಖರ್ಚೂ ಗಿಟ್ಟಲಿಲ್ಲ. ಕೊಯ್ಯದೇ ಕೆಲವರು ಹೊಲದಲ್ಲೇ ಬಿಟ್ಟರು. ಇನ್ನು ಕೆಲವರು ಸಮೀಪದಲ್ಲೇ ಇರುವ ಕಿತ್ತೂರಿನಂತಹ ಸಂತೆಗಳ ಚಿಲ್ಲರೆ ಮಾರುಕಟ್ಟೆಗೆ ಹೊತ್ತುಕೊಂಡು ಹೋದರು. ರೂಪಾಯಿಗೆ ಗುಂಪೆ ಹಾಕಿದರೂ ಕೊಳ್ಳುವವರಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಬೆಳಗಾವಿ ಮಾರುಕಟ್ಟೆಯಲ್ಲಿ ಈಗ ದರ ಏರಿಕೆಯಾಗುತ್ತಿದೆ ಎಂಬ ಮಾಹಿತಿ ಇದೆ. ಆದರೆ, ಕಳೆದೆರಡು ದಿನಗಳಿಂದ ಬಿದ್ದ ಮಳೆಯಿಂದಾಗಿ ಗಿಡಗಳು ಕೊಳೆಯುತ್ತಿವೆ. ಕಾಯಿ ಇಲ್ಲದ್ದರಿಂದ ದರ ಏರುವುದು ಸ್ವಾಭಾವಿಕವಾಗಿದೆ. ಗಿಡಗಳೇ ಹಾಳಾದ ನಂತರ ದರ ತೆಗೆದುಕೊಂಡು ಏನು ಮಾಡುವುದು’ ಎಂದು ಶಂಕರ ಕಮತಗಿ ಪ್ರಶ್ನಿಸಿದರು.

ಒಳ್ಳೆಯ ದರ: ‘ಕೋತಂಬ್ರಿ ಸಿವುಡುಗಳು ಒಳ್ಳೆಯ ದರಕ್ಕೆ ಮಾರಾಟವಾಗುತ್ತಿವೆ. ಸಂತೆ ಯಲ್ಲಿ ಒಂದು ಸಿವುಡು ಕೋತಂಬ್ರಿಗೆ ₹ 18 ಕೊಟ್ಟಿದ್ದೇನೆ. ಸಂಜೆಯ ಹೊತ್ತಿಗೆ ದರ ₹ 40 ತಲುಪಿತ್ತು’ ಎಂದು ಗ್ರಾಹಕ ಗಂಗಪ್ಪ ಕೊಳದೂರು ಹೇಳಿದರು.

‘ಸಗಟು ವ್ಯಾಪರದಲ್ಲಿ ಕೋತಂಬ್ರಿಗೆ ಒಳ್ಳೆಯ ದರವಿದೆ. ನೂರು ಸಿವುಡುಗಳಿಗೆ ₹ 1,800ರಂತೆ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆಯೂ ಮೆಲ್ಲಗೆ ಏರುತ್ತಿದೆ. ಒಂದು ಟ್ರೇ ಬೆಲೆ ₹ 300 ದಾಟಿದೆ’ ಎಂದು ರೈತ ಮಹಾದೇವ ಹೇಳಿದರು.

‘ಕಾಯಿಪಲ್ಲೆ ಬೆಳೆ ಎಂಬುದು ಜೂಜಾಟದಂತಿದೆ. ಒಂದು ತಿಂಗಳು ಒಳ್ಳೆಯ ದರ ಸಿಕ್ಕರೆ ಮತ್ತೊಂದು ತಿಂಗಳು ಮಾರುಕಟ್ಟೆಗೆ ಒಯ್ದು ಎಸೆದು ಬರಬೇಕು. ಬೆಳೆದ ಖರ್ಚಾದರೂ ಕೈಗೆಟಕುವಂತೆ ಸರ್ಕಾರ ಅನ್ನದಾತನ ಹಿತದೃಷ್ಟಿಯಿಂದ ನಿಯಮ ರೂಪಿಸಬೇಕು’ ಎನ್ನುತ್ತಾರೆ ರೈತ ಸಿದ್ಧಲಿಂಗಪ್ಪ.

ರೈತ ಬೆಳೆದ ಯಾವುದೇ ಬೆಳೆಗೆ ಸರ್ಕಾರ ವೈಜ್ಞಾನಿಕ ಧಾರಣೆ ನಿಗದಿ ಪಡಿಸಬೇಕು. ಇಲ್ಲದಿದ್ದರೆ ಆತನ ಗೋಳು ತಪ್ಪಿದ್ದಲ್ಲ
– ಬಸವರಾಜ್ ಅವರಾದಿ, ರೈತ 

ಪ್ರದೀಪ ಮೇಲಿನಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT