ಕುಟುಂಬದ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಅಗತ್ಯ: ಕೆ. ಶಿವರಾಮೇಗೌಡ

7

ಕುಟುಂಬದ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಅಗತ್ಯ: ಕೆ. ಶಿವರಾಮೇಗೌಡ

Published:
Updated:
Deccan Herald

ಶಿವಮೊಗ್ಗ: ಕುಟುಂಬದ ಸರ್ವಾಂಗೀಣ ವಿಕಾಸಕ್ಕೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಶಿವರಾಮೇಗೌಡ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರು ಹೊಂದಿರುವ ಅನುಭವದ ಪಾಠ ಅಪರೂಪವಾದುದು. ಅವರು ಮನೆಯಲ್ಲಿದ್ದರೆ ಭದ್ರತೆಯ ಭಾವನೆ ಎಲ್ಲರಲ್ಲೂ ಇರುತ್ತದೆ. ಹಿರಿಯರನ್ನು ಗೌರವಿಸುವುದು ಕೂಡ ನಮ್ಮ ಸಂಸ್ಕೃತಿಯಾಗಿದೆ. ಹಾಗಾಗಿ ಜೀವನದಲ್ಲಿ ನೋವು–ನಲಿವು, ಸೋಲು–ಗೆಲುವುಗಳನ್ನು ಕಂಡ ಹಿರಿಯರು ಪ್ರತಿ ಮನೆಯಲ್ಲೂ ಇದ್ದಾಗ ಆ ಕುಟುಂಬ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದರು.

ಕುಟುಂಬದ ಸದಸ್ಯರು ಅವರಿಂದ ಅಗತ್ಯ ಹಾಗೂ ಸಕಾಲಿಕ ಮಾರ್ಗದರ್ಶನ ಪಡೆದು ಉನ್ನತಿ ಸಾಧಿಸಬೇಕು. ಹಿಂದೆ ಅವಿಭಕ್ತ ಕುಟುಂಬ ಪದ್ಧತಿ ಇತ್ತು. ಅದು ನಮ್ಮ ಸಂಸ್ಕೃತಿಯ ಭಾಗವೂ ಹೌದು. 60 ವರ್ಷ ಮೀರಿದ ಹಿರಿಯರು ಕೀಳರಿಮೆ ಬೆಳೆಸಿಕೊಳ್ಳುವುದು ತರವಲ್ಲ. ಬದಲಾಗಿ ತಮ್ಮ ಅನುಭವದ ಸಾರವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ನೀಡುವಂತಾಗಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಮಾತನಾಡಿ, ‘ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಕಾಯ್ದೆಗಳು ಬಂದಿರುವುದು ವಿಪರ್ಯಾಸ. ಹಿರಿಯರನ್ನು ಸಂರಕ್ಷಿಸುವಲ್ಲಿ ಮನಸ್ಸುಗಳು ಬದಲಾಗಬೇಕು. ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು, ಸೌಲಭ್ಯಗಳನ್ನು ದೊರೆಕಿಸಿಕೊಡುವಲ್ಲಿ ಅಧಿಕಾರಿಗಳು ಶ್ರಮಿಸಬೇಕು’ ಎಂದರು.

ಮಕ್ಕಳ ದೌರ್ಜನ್ಯ ಹಾಗೂ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಹಿರಿಯರು ನೇರವಾಗಿ ಉಪವಿಭಾಗಾಧಿಕಾರಿಗಳಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಿರಿಯರು ಮಾನಸಿಕವಾಗಿ ಕುಬ್ಜರಾಗದೇ ಸದಾ ಉಲ್ಲಾಸದ ಮನಸ್ಸಿನಿಂದರಬೇಕು ಎಂದು ಹೇಳಿದರು.

 ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪಾ ಎಂ.ದೊಡ್ಮನಿ ಇದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರನ್ನು ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದ ಹಿರಿಯರನ್ನು ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !