ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನಾಡರ ಚತುರ್ಭಾಷಾ ನಾಟಕೋತ್ಸವ

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಗಿರೀಶ್‌ ಕಾರ್ನಾಡರ ನಾಟಕಗಳೆಂದರೆ ಗಂಭೀರ ನಾಟಕಗಳು. ಅವುಗಳನ್ನು ರಂಗಕ್ಕೆ ತರುವ ತಂಡವೂ ಅಷ್ಟೇ ಗಂಭೀರವಾಗಿರಬೇಕು. ದೇಶದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದಗೊಂಡು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಯೋಗಗೊಂಡಿರುವುದು ಕಾರ್ನಾಡರ ನಾಟಕಗಳ ಹೆಗ್ಗಳಿಕೆ. ಆದರೆ ಬೆಂಗಳೂರಿನಲ್ಲಿ ಅವರ ನಾಟಕಗಳು ಕನ್ನಡದಲ್ಲಷ್ಟೇ ಪ್ರದರ್ಶನಗೊಂಡಿವೆ. ಒಂದೇ ವೇದಿಕೆಯಲ್ಲಿ ನಾಲ್ಕು ದಿನ ಕನ್ನಡ, ಹಿಂದಿ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ಕಾರ್ನಾಡರ ಪ್ರಮುಖ ನಾಟಕಗಳನ್ನು ಸವಿಯುವ ಅವಕಾಶ ಬೆಂಗಳೂರಿಗರಿಗೆ ಒದಗಿಬಂದಿದೆ.

ಕಾರ್ನಾಡರ ಪ್ರಮುಖ ನಾಟಕಗಳಾದ ತಲೆದಂಡ(ಕನ್ನಡ), ನಾಗಮಂಡಲ(ಹಿಂದಿ), ಅಗ್ನಿ ಮತ್ತು ಮಳೆ( ಅಗ್ನಿ ಅಣಿ ಪವುಸ್‌ ಕೊಂಕಣಿ), ತುಘಲಕ್‌ (ಮರಾಠಿ) ನಾಟಕಗಳನ್ನು ಒಂದೇ ವೇದಿಕೆಯಲ್ಲಿ ಪ್ರಯೋಗಿಸುವ ಮೂಲಕ ಗಿರೀಶ್‌ ಕಾರ್ನಾಡರಿಗೆ 80 ವರ್ಷದ ತುಂಬಿದ ಕ್ಷಣವನ್ನು ಅವಿಸ್ಮರಣೀಯಗೊಳಿಸಲು ಮಲ್ಲೇಶ್ವರದ ಕೆನರಾ ಯೂನಿಯನ್‌ ಮುಂದಾಗಿದೆ. ಮೇ 24ರಿಂದ 27ರವರೆಗೆ ಈ ನಾಲ್ಕು ನಾಟಕಗಳು ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಸಂಜೆ 7.30ಕ್ಕೆ ಪ್ರದರ್ಶನ ಕಾಣಲಿವೆ.

ಈ ಕುರಿತು ಕೆನರಾ ಯೂನಿಯನ್‌ನ ಸದಸ್ಯ ಮತ್ತು ನಾಗಮಂಡಲ ಹಿಂದಿ ನಾಟಕದ ನಿರ್ದೇಶಕ ಗೌತಮ್‌ ಉಭಯ್‌ಕರ್‌ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

ಗಿರೀಶ್‌ ಕಾರ್ನಾಡರ ನಾಟಕಗಳನ್ನು ನಾಲ್ಕು ಭಾಷೆಗಳಲ್ಲಿ ಪ್ರದರ್ಶಿಸಬೇಕು ಎಂಬ ಆಲೋಚನೆ ಬಂದಿದ್ದು ಹೇಗೆ?

ಕೆನರಾ ಯೂನಿಯನ್‌ನಲ್ಲಿ ಕೊಂಕಣಿ ಭಾಷಿಗರೇ ಹೆಚ್ಚು. ಹಾಗಾಗಿ ಕೊಂಕಣಿ ನಾಟಕಗಳನ್ನು ಹೆಚ್ಚಾಗಿ ಪ್ರದರ್ಶನ ಮಾಡುತ್ತಿದ್ದೆವು. ಈ ವರ್ಷ ಕಾರ್ನಾಡರಿಗೆ 80 ವರ್ಷ ತುಂಬುತ್ತಿದೆ. ಅವರ ನಾಲ್ಕು ನಾಟಕಗಳನ್ನು ಅವರ ಮಾತೃಭಾಷೆಯಾದ ಕೊಂಕಣಿಯಲ್ಲಿಯೇ ಪ್ರದರ್ಶನ ಮಾಡುವುದು ಎಂದು ಮೊದಲಿಗೆ ಅಂದುಕೊಂಡಿದ್ದೆವು. ಕಾರ್ನಾಡರು ಪದ್ಮಭೂಷಣ ಪಡೆದವರು. ಅವರ ನಾಟಕ ಹಿಂದಿ ಭಾಷಿಗರಿಗೂ ಅಚ್ಚುಮೆಚ್ಚು. ಹಾಗಾಗಿ ಹಿಂದಿಯಲ್ಲಿ ಒಂದು ನಾಟಕ ಇರಲಿ ಎಂದುಕೊಂಡೆವು. ‘ನಾಗಮಂಡಲ’ ಹಿಂದಿ ಅನುವಾದ ಲಭ್ಯವಿದೆ. ‘ಅಗ್ನಿ ಮತ್ತು ಮಳೆ’ಯನ್ನು ನಾನೇ ಕೊಂಕಣಿಗೆ ಅನುವಾದ ಮಾಡಿದ್ದೆ. ‘ತುಘಲಕ್‌’ ಮರಾಠಿಗೆ ಅನುವಾದವಾಗಿದೆ. ಅವರು ಬರೆದಿದ್ದು ಕನ್ನಡದಲ್ಲಿ ಹಾಗಾಗಿ ಕನ್ನಡ ನಾಟಕ ಇಲ್ಲದಿದ್ದರೆ ಹೇಗೆ, ಅದಕ್ಕೆ ‘ತಲೆ ದಂಡ’ ಇರಲಿ ಎಂದುಕೊಂಡೆವು. ಹೀಗೆ ಮೂಡಿದ್ದು ನಾಲ್ಕು ಭಾಷೆಗಳ ನಾಟಕೋತ್ಸವ.

ಈ ತರಹದ ಬಹುಭಾಷಾ ನಾಟಕ ಪ್ರಯೋಗ ಹೊಸತೇ?

ಹೌದು. ಒಬ್ಬರದ್ದೇ ನಾಟಕಗಳು ಮೂರ್ನಾಲ್ಕು ಭಾಷೆಗಳಲ್ಲಿ ಒಂದೇ ಉತ್ಸವದಲ್ಲಿ ಪ್ರಯೋಗಗೊಳ್ಳುವುದು ಅಪರೂಪ. ನಾನು ಈ ಹಿಂದೆ ಎಲ್ಲೂ ನೋಡಿಲ್ಲ.

ನಾಟಕೋತ್ಸವದ ತಯಾರಿ ಹೇಗಿತ್ತು?

ಕಡಿಮೆ ಎಂದರೂ ನಾವೆಲ್ಲರೂ ಐದು ತಿಂಗಳಿನಿಂದ ನಾಟಕೋತ್ಸವದ ತಯಾರಿ ನಡೆಸಿದ್ದೇವೆ. ಗಿರೀಶ್‌ ಕಾರ್ನಾಡರ ನಾಟಕಗಳು ಎಂದರೆ ಜನರ ನಿರೀಕ್ಷೆ ಬಹಳ ಇರುತ್ತದೆ. ಆ ಮಟ್ಟವನ್ನು ತಲುಪಲೇ ಬೇಕು. ಅಲ್ಲದೇ ನಾಲ್ಕೂ ತಂಡಗಳು ಹವ್ಯಾಸಿ ತಂಡಗಳು. ಮೊದ ಮೊದಲು ತಿಂಗಳಲ್ಲಿ ನಾಲ್ಕೈದು ದಿನ ಸೇರುತ್ತಿದ್ದೆವು. ನಾಟಕೋತ್ಸವ ಹತ್ತಿರವಾಗುತ್ತಿದ್ದಂತೆ ಪ್ರತಿ ದಿನವೂ ಸೇರುತ್ತಿದ್ದೇವೆ. ಎಲ್ಲರಿಗೂ ಇದು ಮೊದಲ ನಾಟಕ(ಕಾರ್ನಾಡರ ನಾಟಕ). ಅಗ್ನಿ ಮತ್ತು ಮಳೆ ನಾಟಕದ ತಾಲೀಮು ಜನವರಿಯಲ್ಲಿಯೇ ಶುರುವಾಗಿತ್ತು. ನಾಗಮಂಡಲ ಫೆಬ್ರುವರಿಯಲ್ಲಿ ಶುರುವಾಗಿದೆ. ಒಂದೊಂದು ತಂಡದಲ್ಲಿ 30 ಕಲಾವಿದರಿದ್ದಾರೆ. 120 ರಂಗಕರ್ಮಿಗಳ ಪರಿಶ್ರಮವೇ ಈ ನಾಟಕೋತ್ಸವ.

ಕಾರ್ನಾಡರು ಏನಂದರು?

ನಾಟಕೋತ್ಸವ ಮಾಡುತ್ತಿದ್ದೇವೆ ಎಂದಾಗ ಕಾರ್ನಾಡರು ಬಹಳ ಖುಷಿ ಪಟ್ಟರು. ಬೆಂಬಲ ಸೂಚಿಸಿದರು. ಈ ಸಂಬಂಧ ಮೇಲ್‌ ಮಾಡಿದಾಗ ತಕ್ಷಣ ಪ್ರತಿಕ್ರಿಯೆ ನೀಡುತ್ತಿದ್ದರು. ಹುಟ್ಟುಹಬ್ಬದ ದಿನ ನಾಟಕೋತ್ಸವ ಬೇಡ ಅಂತ ಅವರೇ ಹೇಳಿದರು. ಅನಾರೋಗ್ಯ ಇರುವ ಕಾರಣ ಅವರು ಬರುವುದು ಅಸಾಧ್ಯ. ಆದರೂ ಅವರ ನಿರೀಕ್ಷೆಯಲ್ಲಿದ್ದೇವೆ.

ಜನರ ಪ್ರತಿಕ್ರಿಯೆ ಹೇಗಿದೆ?

ಬೆಂಗಳೂರಿನಲ್ಲಿ ಮರಾಠಿಗರು, ಹಿಂದಿ ಭಾಷಿಗರು ತುಂಬಾ ಜನ ಇದ್ದಾರೆ. ರಂಗಶಂಕರದಂಥ ಸಂಸ್ಥೆಗಳು ಎಲ್ಲಾ ಭಾಷೆಗಳ ನಾಟಕಗಳನ್ನು ಇಲ್ಲಿನ ಜನರಿಗೆ ಪರಿಚಯಿಸಿದೆ. ಹಾಗಾಗಿ ಈ ನಾಟಕೋತ್ಸವಕ್ಕೂ ಜನ ಬರುತ್ತಾರೆ ಎಂಬ ಭರವಸೆಯಿದೆ. www.bookmyshow.com ನಲ್ಲಿ ಅನೇಕರು ಟಿಕೆಟ್‌ ಖರೀದಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಬಯಸುತ್ತೇವೆ.

ಇಲ್ಲಿ ತಯಾರಾದ ನಾಟಕಗಳನ್ನು ಬೇರೆ ರಾಜ್ಯಗಳಿಗೆ ಕೊಂಡೊಯ್ಯುವ ಇರಾದೆ ಇದೆಯೇ?

ಈವರೆಗೂ ಆ ಬಗ್ಗೆ ಯೋಚಿಸಿಲ್ಲ. ಆದರೆ ಮರಾಠಿ, ಕೊಂಕಣಿ ಭಾಷಿಕರು ಇರುವ ಮುಂಬೈ, ಗೋವಾ ಮುಂತಾದ ಕಡೆ ವ್ಯವಸ್ಥಿತವಾಗಿ ನಾಟಕಗಳನ್ನು ಆಯೋಜಿಸಿದರೆ ಪ್ರದರ್ಶನ ನೀಡಲಿದ್ದೇವೆ.

ಕಾರ್ನಾಡರ ನಾಟಕಗಳನ್ನು ರಂಗದ ಮೇಲೆ ತರುವಾಗ ಎದುರಿಸುವ ಸವಾಲೇನು?

ಕಾರ್ನಾಡರ ನಾಟಕಗಳನ್ನು ರಂಗದ ಮೇಲೆ ತರುವಾಗ ಬಹಳಷ್ಟು ಪೂರ್ವ ತಯಾರಿ ಬೇಕಾಗುತ್ತದೆ. ರಂಗಸಜ್ಜಿಕೆ, ಪ್ರಸಾಧನ, ಸಂಗೀತ ಎಲ್ಲೂ ಅಭಾಸವಾಗದಂತೆ ಜನರ ನಿರೀಕ್ಷೆಯ ಮಟ್ಟ ತಲುಪುವುದು ಸವಾಲೇ ಸರಿ. ಈಗಾಗಲೇ ಎಲ್ಲಾ ಭಾಷೆಗಳಿಗೆ ಅನುವಾದವಾಗಿರುವ ಕಾರಣ ಸ್ಕ್ರಿಪ್ಟ್‌ ತಯಾರಿಯ ಕೆಲಸ ಇರುವುದಿಲ್ಲವಷ್ಟೇ. ಮಹಾರಾಷ್ಟ್ರದ ‘ಮಹಾರಾಷ್ಟ್ರ ಮಂಡಲ್‌’ನ ಯುವಕರ ತಂಡ ‘ತುಘಲಕ್‌’(ಮರಾಠಿ) ನಾಟಕ ಪ್ರದರ್ಶಿಸಲಿದೆ. ರಂಗಶ್ರೀ ತಂಡ ‘ತಲೆದಂಡ’ ನಾಟಕ ಪ್ರದರ್ಶಿಸಲಿದೆ. ನಾಗಮಂಡಲ ಮತ್ತು ಅಗ್ನಿ ಮತ್ತು ಮಳೆ ಕೆನರಾ ಯೂನಿಯನ್‌ನ ಅಂಕುರ್ ಮತ್ತು ಭೂಮಿಕಾ ತಂಡ ಪ್ರದರ್ಶಿಸಲಿದೆ.

ಪ್ರದರ್ಶನ ವಿವರ

* ತಲೆದಂಡ: ಮೇ 24

* ನಾಗಮಂಡಲ: ಮೇ 25

* ಅಗ್ನಿ ಅನಿ ಪಾವ್ಸ್‌: ಮೇ 26

* ತುಘಲಕ್‌: ಮೇ27

* ಸಮಯ: ಪ್ರತಿದಿನ ಸಂಜೆ 7.30

* ಸ್ಥಳ: ಚೌಡಯ್ಯ ಮೆಮೋರಿಯಲ್‌ ಹಾಲ್‌, ವೈಯ್ಯಾಲಿಕಾವಲ್‌

* ಸಂಪರ್ಕಕ್ಕೆ: 080 23342625

* ಟಿಕೆಟ್‌ ದರ: ₹150,

* www.bookmyshow.com ನಲ್ಲಿ ಟಿಕೆಟ್‌ ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT