ಶಿವಮೊಗ್ಗ: ನಾಲ್ಕು ತಿಂಗಳ ಸಂಸದ ಪಟ್ಟ ಯಾರಿಗೆ?, 6ರಂದು ಮಧ್ಯಾಹ್ನದ ಒಳಗೆ ಫಲಿತಾಂಶ

7
ಮತ ಎಣಿಕೆಗೆ ಸಹ್ಯಾದ್ರಿ ಕಾಲೇಜು ಸಜ್ಜು

ಶಿವಮೊಗ್ಗ: ನಾಲ್ಕು ತಿಂಗಳ ಸಂಸದ ಪಟ್ಟ ಯಾರಿಗೆ?, 6ರಂದು ಮಧ್ಯಾಹ್ನದ ಒಳಗೆ ಫಲಿತಾಂಶ

Published:
Updated:

ಶಿವಮೊಗ್ಗ: ಲೋಕಸಭಾ ಉಪಚುನಾವಣೆಯ ಫಲಿತಾಂಶ ನ.6ರಂದು ಬಹಿರಂಗವಾಗಲಿದ್ದು, ನಾಲ್ಕು ತಿಂಗಳ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ಮಧ್ಯಾಹ್ನದ ಒಳಗೆ ತೆರೆ ಬೀಳಲಿದೆ.

ಕಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧಿಸಿದ್ದರೂ, ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಮಧ್ಯೆ ನೇರ ಹಣಾಹಣಿಗೆ ಉಪಚುನಾವಣೆ ವೇದಿಕೆಯಾಗಿತ್ತು.

ಯಾರೇ ಗೆದ್ದರೂ ಇತಿಹಾಸ

ಸಾಕಷ್ಟು ಪೈಪೋಟಿ ಕಂಡು ಬಂದ ಈ ಚುನಾವಣೆಯಲ್ಲಿ ಮಧು ಹಾಗೂ ರಾಘವೇಂದ್ರ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ. ಮಧು ಗೆದ್ದರೆ ಮೊದಲ ಬಾರಿ ಸಂಸತ್ ಪ್ರವೇಶಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳ ಪುತ್ರರಲ್ಲಿ ಲೋಕಸಭೆ ಪ್ರವೇಶಿಸಿದ ಎರಡನೆಯವರಾಗುತ್ತಾರೆ. ತಂದೆಯ ಸೋಲಿಗೆ ಸೇಡು ತೀರಿಸಿಕೊಂಡ ಕೀರ್ತಿಯೂ ಸಲ್ಲುತ್ತದೆ. ರಾಘವೇಂದ್ರ ಗೆದ್ದರೆ ಎರಡನೇ ಬಾರಿ ಲೋಕಸಭೆಯ ಸದಸ್ಯರಾಗಲಿದ್ದಾರೆ. ತಂದೆ (ಬಂಗಾರಪ್ಪ) ಮತ್ತು ಮಗ ಇಬ್ಬರನ್ನೂ ಸೋಲಿಸಿದ ಅಭ್ಯರ್ಥಿ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾರೆ.

2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಸೋತರೆ ಲೋಕಸಭೆಯಲ್ಲಿ ಒಂದು ಸ್ಥಾನ ನಷ್ಟವಾಗಲಿದೆ. ಜೆಡಿಎಸ್ ಗೆದ್ದರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿದೆ.

ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ

ಉಪಚುನಾವಣೆ ಮತ ಎಣಿಕೆಗೆ ಸಹ್ಯಾದ್ರಿ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಬೆಳಿಗ್ಗೆ 8ಕ್ಕೆ ಸರಿಯಾಗಿ ಆರಂಭವಾಗಲಿದೆ. ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ನಡೆಸಲಾಗುತ್ತಿದೆ. ಬೈಂದೂರು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಎರಡು ಕೊಠಡಿ ಮೀಸಲಿಡಲಾಗಿದೆ. ಪ್ರತಿ ಕೊಠಡಿಗೂ ತಲಾ 7 ಟೇಬಲ್‌ ಜೋಡಿಸಲಾಗಿದೆ. ಪ್ರತಿ ಟೇಬಲ್‌ಗೂ ವೀಕ್ಷಕ ಸೇರಿ ಒಟ್ಟು ಮೂವರು ಸಿಬ್ಬಂದಿ ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 42 ಜನರಂತೆ ಒಟ್ಟು 336 ಸಿಬ್ಬಂದಿ ಭಾಗಿಯಾಗುತ್ತಿದ್ದಾರೆ.

ಮತ ಎಣಿಕೆ ಸಿಬ್ಬಂದಿಗೆ ತರಬೇತಿ

ಮತ ಎಣಿಕೆ ಸಿಬ್ಬಂದಿಗೆ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ತರಬೇತಿ ನೀಡಲಾಯಿತು. ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಮತ ಎಣಿಕೆ ಕಾರ್ಯ 8ಕ್ಕೆ ಸರಿಯಾಗಿ ಆರಂಭವಾಗಬೇಕು. ಎಣಿಕೆ ಕಾರ್ಯಕ್ಕೆ ನಿಯೋಜಿತವಾಗಿರುವ ಸಿಬ್ಬಂದಿ ಕೇಂದ್ರಕ್ಕೆ 6ಕ್ಕೆ ಹಾಜರಿರಬೇಕು. ಪ್ರತಿ ಇವಿಎಂನಲ್ಲಿ ದಾಖಲಾದ ಮತಗಳನ್ನು ನಿಖರವಾಗಿ ದಾಖಲು ಮಾಡಬೇಕು ಎಂದು ಸೂಚಿಸಿದರು.

ಪ್ರತಿ ಎಣಿಕೆ ಸುತ್ತಿನಲ್ಲೂ ನಿಗದಿಪಡಿಸಿದ ಮತಗಟ್ಟೆಯ ಇವಿಎಂ ಎಣಿಕೆಗೆ ಬಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅನವಶ್ಯಕ ಗೊಂದಲಕ್ಕೆ ಹಾಗೂ ವಿಳಂಬಕ್ಕೆ ಆಸ್ಪದ ಕೊಡದೆ ಮೌನವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಎಣಿಕೆ ಕೇಂದ್ರಕ್ಕೆ ಮೊಬೈಲ್ ತರಲು ಅವಕಾಶವಿಲ್ಲ. ಎಣಿಕೆ ಕಾರ್ಯದಲ್ಲಿ ಲೋಪ ಎಸಗುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಚುನಾವಣಾ ವೀಕ್ಷಕ ಸಂಜಯ್ ಕುಮಾರ್ ರಾಕೇಶ್, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !