67 ವರ್ಷಗಳ ಇತಿಹಾಸದಲ್ಲಿ 1 8 ಚುನಾವಣೆ

ಬುಧವಾರ, ಏಪ್ರಿಲ್ 24, 2019
32 °C
ಶಿವಮೊಗ್ಗ ಲೋಕಸಭಾ ಕ್ಷೇತ್ರ: 16 ಸಾರ್ವತ್ರಿಕ, 2 ಉಪ ಚುನಾವಣೆ

67 ವರ್ಷಗಳ ಇತಿಹಾಸದಲ್ಲಿ 1 8 ಚುನಾವಣೆ

Published:
Updated:
Prajavani

ಶಿವಮೊಗ್ಗ: 67 ವರ್ಷಗಳ ಶಿವಮೊಗ್ಗ ಲೋಕಸಭಾ ಇತಿಹಾಸದಲ್ಲಿ 16 ಸಾರ್ವತ್ರಿಕ ಚುನಾವಣೆ, 2 ಉಪ ಚುನಾವಣೆಗಳು ನಡೆದಿವೆ.

1952ರಿಂದ 2018ರವರೆಗೆ ನಡೆದ 18 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಗೆಲುವು ಕಂಡಿದೆ. ಬಿಜೆಪಿ 5 ಬಾರಿ, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಎಸ್‌ಪಿ ತಲಾ ಒಂದು ಬಾರಿ ಪ್ರಭುತ್ವ ಸ್ಥಾಪಿಸಿವೆ.

ಮೊದಲ 10 ಅವಧಿ ಕಾಂಗ್ರೆಸ್ ಅಧಿಪತ್ಯ: 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಿ.ಒಡೆಯರ್ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದು ಸಾಬೀತು ಮಾಡಿದ್ದರು. 1957ರಲ್ಲೂ ಅವರೇ ಪುನರಾಯ್ಕೆಯಾಗಿದ್ದರು. 1962ರಲ್ಲಿ ಕಾಂಗ್ರೆಸ್ ಟಿಕೆಟ್‌ ಗಿಟ್ಟಿಸಿಕೊಂಡಿದ್ದ ಎಸ್‌.ವಿ. ಕೃಷ್ಣಮೂರ್ತಿ ಲೋಕಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಿದವರು ಸಮಾಜವಾದಿ ಜೆ.ಎಚ್. ಪಟೇಲ್‌. 1967ರ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮತ್ತೆ 6 ಅವಧಿ ಕಾಂಗ್ರೆಸ್‌ದೇ ಅಧಿಪತ್ಯ. 1971ರಿಂದ 1996ವರೆಗೂ ಕಾಂಗ್ರೆಸ್ ಬೇರುಗಳು ಗಟ್ಟಿಗೊಂಡಿದ್ದವು. ಈ ಅವಧಿಯಲ್ಲಿ ಮೂರು ಬಾರಿ ಟಿ.ವಿ. ಚಂದ್ರಶೇಖರಪ್ಪ, ತಲಾ ಒಂದು ಬಾರಿ ಎ.ಆರ್. ಬದರಿ ನಾರಾಯಣ, ಎಸ್.ಟಿ ಖಾದ್ರಿ, ಕೆ.ಜಿ.ಶಿವಪ್ಪ ಸಂಸದರಾಗಿ ಆಯ್ಕೆಯಾಗಿದ್ದರು.

ಸಾರೆಕೊಪ್ಪ ಬಂಗಾರಪ್ಪ ಅಧಿಪತ್ಯ

1996ರಿಂದ 2009ರವರೆಗೂ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪ ಅವರದೇ ಅಧಿಪತ್ಯ. 1996, 1999, 2004 ಹಾಗೂ 2005ರಲ್ಲಿ ನಾಲ್ಕುಬಾರಿಯೂ ಬೇರೆಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. 1998ರಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಆಯ್ಕೆಯಾಗಿದ್ದರು.

ಮೂರು ಬಾರಿಯೂ ಬಿಜೆಪಿ ಹಿಡಿತ: 2009ರಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ. ಎಸ್‌. ಬಂಗಾರಪ್ಪ ಅವರನ್ನು ಮಣಿಸಿದ್ದರು. 2014ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಐತಿಹಾಸಿಕ ವಿಜಯ ದಾಖಲಿಸಿದ್ದರು. 2018ರ ಉಪ ಚುನಾವಣೆಯಲ್ಲೂ ಬಿಜೆಪಿ ಸ್ಥಾನ ಉಳಿಸಿಕೊಂಡಿತ್ತು.

ಎರಡು ಉಪ ಚುನಾವಣೆ: ಕ್ಷೇತ್ರದಲ್ಲಿ ಇದುವರೆಗೆ ಎರಡು ಉಪ ಚುನಾವಣೆಗಳು ನಡೆದಿವೆ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್‌. ಬಂಗಾರಪ್ಪ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸಾಂಪ್ರಾದಾಯಿಕ ಎದುರಾಳಿ ಆಯನೂರು ಮಂಜುನಾಥ್ ಅವರನ್ನು ಮಣಿಸಿದ್ದರು. ನಂತರ ಆರೇ ತಿಂಗಳಿಗೆ ಆ ಪಕ್ಷದ ವರಿಷ್ಠರ ವಿರುದ್ಧ ಕೋಪಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2005ರಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು. ಆಗ ನಂತರ ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲದ ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿ ಚುನಾವಣೆ ಎದುರಿಸಿದರೂ ಗೆಲುವಿನ ದಡ ಸೇರಿದ್ದರು.

2014ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯ ಗೆಲುವು ಬರೆದಿದ್ದ ಬಿ.ಎಸ್. ಯಡಿಯೂರಪ್ಪ ಅವರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ನಂತರ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಂಡಿತ್ತು.

ಯಶ ಕಾಣದ ಸಮಾಜವಾದಿಗಳು: ಶಿವಮೊಗ್ಗ ಜಿಲ್ಲೆ ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೂ ಸಮಾಜವಾದಿ ನೆಲೆ. ಆದರೆ, ಇದುವರೆಗೂ ನಡೆದ 18 ಚುನಾವಣೆಗಳಲ್ಲಿ ಸಮಾಜವಾದಿ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಒಬ್ಬರು ಮಾತ್ರ. ಜೆ.ಎಚ್. ಪಟೇಲ್ ಹೊರತುಪಡಿದಿರೆ ಇದುವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಯದೇ ಅಧಿಪತ್ಯ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !