ಸಮ್ಮಿಶ್ರ ಸರ್ಕಾರದ ಅನುದಾನ ಯಡಿಯೂರಪ್ಪ ಅವರದೇ?: ಕುಮಾರಸ್ವಾಮಿ ಲೇವಡಿ

ಬುಧವಾರ, ಏಪ್ರಿಲ್ 24, 2019
31 °C
ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರ್‍ಯಾಲಿ

ಸಮ್ಮಿಶ್ರ ಸರ್ಕಾರದ ಅನುದಾನ ಯಡಿಯೂರಪ್ಪ ಅವರದೇ?: ಕುಮಾರಸ್ವಾಮಿ ಲೇವಡಿ

Published:
Updated:
Prajavani

ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನ ದೊರೆತರೂ ಜಿಲ್ಲೆಗೆ ಸೂಕ್ತ ನೀರಾವರಿ ಯೋಜನೆಗಳನ್ನು ರೂಪಿಸದ ಯಡಿಯೂರಪ್ಪ ಈಗ ಸಮ್ಮಿಶ್ರ ಸರ್ಕಾರ ನೀಡಿದ ಅನುದಾನ ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಮೈತ್ರಿ ಕೂಟದ ಅಭ್ಯರ್ಥಿ ಎಸ್‌.ಮಧು ಬಂಗಾರಪ್ಪ ಬುಧವಾರ ನಾಮಪತ್ರ ಸಲ್ಲಿಸುವ ಮೊದಲು ನಡೆದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

ಸೊರಬ ತಾಲ್ಲೂಕಿನ ಮೂಡಿ ಸೇರಿದಂತೆ ಶಿಕಾರಿಪುರ, ಶಿರಾಳಕೊಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗೆ ಅನುದಾನ ನೀಡುವುದಾಗಿ ವಿಧಾನಸಭಾ ಚುನಾವಣೆ ವೇಳೆ ಶಿರಾಳಕೊಪ್ಪದಲ್ಲಿ ನಡೆದ ಸಮಾವೇಶದಲ್ಲಿ ಭರವಸೆ ನೀಡಿದ್ದೆವು. ಮಧು ಬಂಗಾರಪ್ಪ, ಶಾರದಾ ಪೂರ್‍ಯಾನಾಯ್ಕ, ಬಳಿಗಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ನೀರಾವರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಅದಕ್ಕಾಗಿ ಈ ಬಜೆಟ್‌ನಲ್ಲೇ ₨ 195 ಕೋಟಿ ನೀಡಿದ್ದೇವೆ. ಬಿಜೆಪಿ ನಾಯಕರ ಕೋರಿಕೆಗೆ ನೀಡಿದ್ದಲ್ಲ ಎಂದು ಕುಟುಕಿದರು.

ಜಿಲ್ಲೆಯ ಅರಣ್ಯಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಕೇಂದ್ರದ ಕಾಯ್ದೆಗೆ ತಿದ್ದುಪಡಿ ತಾರದೇ ಸಂಪೂರ್ಣ ಸಮಸ್ಯೆ ನಿವಾರಣೆ ಅಸಾಧ್ಯ. ಈ ವಿಷಯದಲ್ಲಿ ಬಿಜೆಪಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ಸಂಸತ್‌ನಲ್ಲೇ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಹೆಚ್ಚಿನ ಬಹುಮತಗಳಿಸಿ ಆಯ್ಕೆಯಾಗುವ ಸಂಪೂರ್ಣ ವಿಶ್ವಾಸವಿದೆ. ಮೈತ್ರಿ ಸರ್ಕಾರ ಈಗಾಗಲೇ ಶಿವಮೊಗ್ಗದ ಹಲವು ಸಮಸ್ಯೆಗಳಿಗೆ ಸ್ಪಂದಿಸಿದೆ. ಸಾಲಮನ್ನಾದ ಕಾರ್ಯಕ್ರಮಗಳು ರೈತರಿಗೆ ತಲುಪಿವೆ. ಹಿಂದಿನ ಸರ್ಕಾರದ ಕಾರ್ಯಕ್ರಮ ಮುಂದುವರಿಸಿದ್ದೇವೆ. ಜನರ ವಿಶ್ವಾಸವೂ ನಮ್ಮ ಮೇಲಿದೆ. ಈ ಬಾರಿ ಖಂಡಿತಾ ಆಶೀರ್ವಾದ ಮಾಡಲಿದ್ದಾರೆ. ಯಾವ ಕುತಂತ್ರ, ಅಪಪ್ರಚಾರ ನಡೆಸಿದರೂ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಕೃಷಿ ನೀತಿ ಶೀಘ್ರ ಪ್ರಕಟ:

ಈ ವರ್ಷ ಮೈತ್ರಿ ಸರ್ಕಾರ ಯಾವ ಕಾರ್ಯಕ್ರಮ ನೀಡುತ್ತದೆ ಎಂದು ವಿಧಾನಸಭೆ ಕಲಾಪದಲ್ಲೇ ಘೋಷಣೆ ಮಾಡಿದ್ದೇವೆ. ಅದಕ್ಕಿಂತ ದೊಡ್ಡಮಟ್ಟದ ಪ್ರಣಾಳಿಕೆ ಆವಶ್ಯಕತೆ ಇಲ್ಲ. ರಾಜ್ಯದ 44 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಸಾಲ ಮನ್ನಾದಿಂದ ಮಾತ್ರ ರೈತರಿಗೆ ನೆಮ್ಮದಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ಹಾಗಾಗಿ, ಹೊಸ ಕೃಷಿ ನೀತಿಗಳು ಜಾರಿಗೆ ತರುತ್ತೇವೆ. ಯುವಕರಿಗೆ ಉದ್ಯೋಗ, ಸಾಮಾಜಿಕ ನ್ಯಾಯ, ಸಮಾಜದ ಎಲ್ಲಾ ಹಿಂದುಳಿದ ವರ್ಗಗಳಿಗೆ ಹಲವು ಯೋಜನೆಗಳು, ಶಿಕ್ಷಣ, ಆರೋಗ್ಯ, ಹಾಗೂ ನಾಡಿನ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ 9 ತಿಂಗಳಿನಿಂದ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಲೇ ಇದೆ. ಶಿವಕುಮಾರ್ ಮತ್ತು ನಾನು ಜೋಡೆತ್ತುಗಳಂತೆ ತಡೆಯುತ್ತಲೇ ಇದ್ದೇವೆ. ಈಶ್ವರಪ್ಪ ಹಳ್ಳಿ ಶೈಲಿಯಲ್ಲಿ ನೆಗೆದು ಬೀಳುತ್ತಾರೆ ಎಂದು ಕನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು.

ರಾಜ್ಯದ 28 ಕ್ಷೇತ್ರದಲ್ಲೂ ನಾವು ಬಿಜೆಪಿಗಿಂತ ಮುಂದೆ ಇದ್ದೇವೆ. ದೇವೇಗೌಡರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ಹಲವು ನಾಯಕರು ಶಿವಮೊಗ್ಗ ಕ್ಷೇತ್ರದ ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಅಚ್ಚೇದಿನ್ ಯಾರಿಗೆ ಬಂದಿದೆ ಎಂದು ಯಡಿಯೂರಪ್ಪ ಉತ್ತರಿಸಬೇಕು. ಯುವಕರಿಗೆ ಉದ್ಯೋಗ, ದೇಶದಲ್ಲಿ ಶಾಂತಿ, ಜನರ ಖಾತೆಗೆ ₨ 15 ಲಕ್ಷ ಹಣ ದೊರಕಿದೆಯಾ? ಐದು ವರ್ಷ ಆಡಳಿತ ನಡೆಸಿದ ಇವರ ಬಳಿ ಕ್ರೆಡಿಟ್‌ ಕಾರ್ಡ್, ಡೆಬಿಟ್ ಕಾರ್ಡ್‌, ಧನಲಕ್ಷ್ಮೀ, ದರಿದ್ರ ಲಕ್ಷ್ಮೀ ಎಲ್ಲವೂ ಇದ್ದವೂ ಮತ್ತೇಕೆ ಯಾವ ಕಾರ್ಯಗಳನ್ನೂ ಅನುಷ್ಠಾನಗೊಳಿಸಲಿಲ್ಲ ಎಂದು ಛೇಡಿಸಿದರು.

‘ಕೊಟ್ಟ ಕುದುರೆ ಏರಲಾರದವನು ಶೂರನೂ ಅಲ್ಲ. ವೀರನೂ ಅಲ್ಲ’ ಎಂಬ ಅಲ್ಲಮಪ್ರಭು ಮಾತಿಗೆ ಯಡಿಯೂರಪ್ಪ ಸೂಕ್ತ ಉದಾಹರಣೆ. ಅಧಿಕಾರ ಇದ್ದರೂ ಏನು ಮಾಡಲಾಗದವರು ಈಗ ಶಿವಮೊಗ್ಗ ನೀರಾವರಿ ಯೋಜನೆಗೆ ನಾವೇ ಹಣ ಬಿಡುಗಡೆ ಮಾಡಿಸಿದ್ದೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಹಣ ಬಿಡುಗಡೆಗೊಳಿಸಲು ಬಜೆಟ್‌ ಏನು ಯಡಿಯೂರಪ್ಪ ಮಂಡಿಸಿದ್ದಾರಾ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !