ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತದಾನ ಆರಂಭಕ್ಕೆ ಕ್ಷಣಗಣನೆ

ಬೆಳಿಗ್ಗೆ 7ರಿಂದ ಆರಂಭ, ಸಂಜೆ 6ಕ್ಕೆ ಮುಕ್ತಾಯ, ಒಂದು ತಿಂಗಳ ನಂತರ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ
Last Updated 22 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಕ್ಷೇತ್ರದ 2,021 ಮತಗಟ್ಟೆಗಳಲ್ಲಿ ಇಂದು (ಏ.23) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

8,31,185 ಪುರುಷರು ಹಾಗೂ 8,44,740 ಮಹಿಳಾ ಮತದಾರರು, 50 ತೃತೀಯ ಲಿಂಗಿಗಳು ಸೇರಿ ಈ ಬಾರಿ 16,75,975 ಮತದಾರರು ಮತದಾನದ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಉಪ ಚುನಾವಣೆ ಬಳಿಕ ಹೊಸದಾಗಿ 28,550 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

2,021 ಮತಗಳಿಗೆ 4,042 ಮತಗಟ್ಟೆ ಅಧಿಕಾರಿಗಳು ಸೇರಿ ಒಟ್ಟು 8,892 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲಾಗಿದೆ. ಈ ಬಾರಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರಿಗೆ ಆರೋಗ್ಯ ಸೌಲಭ್ಯ ಒದಗಿಸಲು ‘ಮೆಡಿಕಲ್ ಕಿಟ್’ ಒದಗಿಸಲಾಗಿದೆ.

ಮತದಾನಕ್ಕಾಗಿಹಸುಗೂಸುಗಳ ಜತೆ ಮತಗಟ್ಟೆಗೆ ಬರುವ ತಾಯಂದಿರಿಗೆ ಮಗು ನೋಡಿಕೊಳ್ಳಲು ನೆರವಾಗುವಂತೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಒಂದಕ್ಕಿಂತ ಹೆಚ್ಚು ಮತದಾನ ಕೇಂದ್ರವಿರುವ ಕಟ್ಟಡಗಳ ಆವರಣದಲ್ಲಿ ಮತದಾರರ ಸಹಾಯಕ್ಕಾಗಿ ಸಹಾಯ ಕೇಂದ್ರ ತೆರೆಯಲಾಗಿದೆ. ಮತದಾನಕ್ಕೆ ಬರುವ ಮತದಾರರಿಗೆ ಅಗತ್ಯ ನೆರವು ಒದಗಿಸಲು ಎನ್‌ಸಿಸಿ, ಎನ್‍ಎಸ್‍ಎಸ್, ಸ್ಕೌಟ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ಪಡೆ ನಿಯೋಜಿಸಲಾಗಿದೆ.

16 ಸಖೀ ಮತಗಟ್ಟೆ:

ಮಹಿಳೆಯರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ಜಿಲ್ಲೆಯಲ್ಲಿ 16 ಸಖೀ ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2 ಸಖೀ ಮತಗಟ್ಟೆ ಸ್ಥಾಪಿಸಲಾಗಿದೆ. ಅದೇ ರೀತಿ ಬುಡಕಟ್ಟು ಜನರನ್ನು ಮತದಾನಕ್ಕೆ ಆಕರ್ಷಿಸಲು 3 ಬುಡಕಟ್ಟು ಮತದಾನ ಕೇಂದ್ರ ತೆರೆಯಲಾಗಿದೆ. ಅಂಗವಿಕಲ ಚುನಾವಣಾ ಅಧಿಕಾರಿ, ಸಿಬ್ಬಂದಿ ಒಳಗೊಂಡ 2 ಅಂಗವಿಕಲ ಮತದಾನ ಕೇಂದ್ರ ಇರುತ್ತವೆ. ಭದ್ರಾವತಿ ಹೊರವಲಯದಲ್ಲಿ ಒಂದು ಮಾದರಿ ಮತಗಟ್ಟೆ ಸ್ಥಾಪಿಸಲಾಗಿದ್ದು, ವಿಶಾಲವಾದ ಜಾಗದಲ್ಲಿ ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ನೋಡುಗರ ಮನ ಸೂರೆಗೊಳ್ಳುತ್ತದೆ.

ಒಂದು ದಾಖಲೆ ತೋರಿಸಿ, ಮತಚಲಾಯಿಸಿ:

ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದರೂ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ, ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಭಾವಚಿತ್ರ ಇರುವ ಗುರುತಿನ ಚೀಟಿ, ಅಂಚೆ ಕಚೇರಿ, ಬ್ಯಾಂಕ್‌ಗಳ ಉಳಿತಾಯ ಖಾತೆಯ ಭಾವಚಿತ್ರವಿರುವ ಪಾಸ್‌ಪುಸ್ತಕ, ಪಾನ್‌ಕಾರ್ಡ್‌, ಸ್ಮಾರ್ಟ್ ಕಾರ್ಡ್, ಉದ್ಯೋಗ ಖಾತ್ರಿ ಜಾಬ್ ಕಾರ್ಡ್, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಆಧಾರ ಕಾರ್ಡ್ ಸೇರಿದಂತೆ ಯಾವುದಾದರೂ ಒಂದು ದಾಖಲೆ ತೋರಿಸಿ ಮತ ಚಲಾಯಿಸಬಹುದು.

299 ಬಸ್‌ಗಳ ನಿಯೋಜನೆ:

ಚುನಾವಣಾ ಸಿಬ್ಬಂದಿ, ಮತಯಂತ್ರ ತೆಗೆದುಕೊಂಡು ಹೋಗಲು 299 ಬಸ್‌ಗಳನ್ನು ನಿಯೋಜಿಸಲಾಗಿದೆ. 14 ಲಾರಿಗಳು, 738 ಜೀಪ್, ಕಾರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಬಿಗಿ ಬಂದೋಬಸ್ತ್‌: ನಕ್ಸಲ್‌ ಪೀಡಿತ ಪ್ರದೇಶಗಳು, ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಎಲ್ಲೆಡೆ ಬಿಗಿ ಬಂದೊಬಸ್ತ್‌ ಕಲ್ಪಿಸಲಾಗಿದೆ. 1,288 ಪೊಲೀಸ್‌ ಸಿಬ್ಬಂದಿ, 1,170 ಗೃಹ ರಕ್ಷಕ ದಳದ ಸಿಬ್ಬಂದಿ, 504 ಅರೆ ಸೇನಾಪಡೆ ಸಿಬ್ಬಂದಿ, 294 ವಿಚಕ್ಷಣ ದಳ ನಿತೋಜಿಸಲಾಗಿದೆ. ಚುನಾವಣಾ ಘಟನೆಗಳನ್ನು ಚಿತ್ರೀಕರಿಸಲು 106 ಸಿಬ್ಬಂದಿ, 23 ವೀಡಿಯೊ ಗ್ರಾಫರ್ಸ್ ನಿಯೋಜಿಸಲಾಗಿದೆ.

ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿ: ಮತಗಟ್ಟೆಗಳಿಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಆಯಾ ಮಸ್ಟರಿಂಗ್ ಕೇಂದ್ರಗಳಿಂದ ಮತಯಂತ್ರ ಪಡೆದು ತೆರಳಿದರು. ಸಂಜೆ 6ಕ್ಕೆ ಮತದಾನ ಮುಗಿದ ನಂತರ ಎಲ್ಲ ಮತಯಂತ್ರಗಳೂ ಸಹ್ಯಾದ್ರಿ ಕಾಲೇಜು ಭದ್ರಾತಾ ಕೊಠಡಿ ಸೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT