ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ; ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ ವಶ

ನಮ್ಮ ಕುಟುಂಬಕ್ಕೆ ಕಿರುಕುಳ: ಡಿಕೆಶಿ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು/ ರಾಮನಗರ: ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ ಅವರ ಆಪ್ತರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಕುಮಾರ್‌ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಕೆಲವೇ ತಿಂಗಳಲ್ಲಿ ಈ ದಾಳಿಯೂ ನಡೆದಿದೆ. ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಶಿವಕುಮಾರ್‌ ಮತ್ತು ಸುರೇಶ್‌ ಅವರ ಹನ್ನೊಂದು ಆಪ್ತರ ಮನೆಗಳನ್ನು ಶೋಧಿಸಲು ಕೇಂದ್ರ ತನಿಖಾ ದಳದ ಅಧಿಕಾರಿಗಳು ಬುಧವಾರ ವಾರೆಂಟ್‌ ಪಡೆದಿದ್ದಾರೆ.

ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಪದ್ಮನಾಭ ಅವರ ಬೆಂಗಳೂರು ಮನೆ, ಕನಕಪುರ ತಾಲೂಕು ಕಚೇರಿಯಲ್ಲಿ  ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ಮನೆಗಳು, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಡಿಕೆಶಿ ಹೊಂದಿದ್ದ ಕಚೇರಿಗಳನ್ನು ಸಿಬಿಐ ಅಧಿಕಾರಿಗಳು ಶೋಧಿಸಿದ್ದಾರೆ.

ಬೆಳಿಗ್ಗೆ ಎರಡು ತಂಡಗಳಲ್ಲಿ ಕನಕಪುರಕ್ಕೆ ಬ‌ಂದ ಸಿಬಿಐನ ಒಂಭತ್ತು ಅಧಿಕಾರಿಗಳು ಶಿವಕುಮಾರ್‌ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌, ಶಿರಸ್ತೇದಾರ್‌ ಶಿವಾನಂದ ಅವರನ್ನು ಸಂಜೆವರೆಗೂ ತೀವ್ರ ವಿಚಾರಣೆಗೊಳಪಡಿಸಿದರು.

ತಾಲೂಕು ಕಚೇರಿಯ ಚುನಾವಣಾ ವಿಭಾಗ, ಕಂದಾಯ ವಿಭಾಗ‌ದ ಕೆಲವು ಸಿಬ್ಬಂದಿಯನ್ನು ಪ್ರಶ್ನಿಸಿದರು. ಕನಕಪುರದಲ್ಲಿ ವಿವಿಧ ಸ್ಥಳಗಳಿಗೆ ಅಧಿಕಾರಿಗಳನ್ನು ಕರೆದೊಯ್ದು ಹಿರಿಯ ಕಾಂಗ್ರೆಸ್‌ ಮುಖಂಡ ಹೊಂದಿದ್ದಾರೆ ಎನ್ನಲಾದ ಆಸ್ತಿಪಾಸ್ತಿಗಳ ಸ್ಥಳ ಪರಿಶೀಲಿಸಿದರು. ತಾಲೂಕು ಕಚೇರಿ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌, ಮತದಾರ ಗುರುತಿನ ಚೀಟಿಗೆ ಬಳಸುವ ಹಾಲೋ ಸ್ಟಿಕರ್‌ಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನೋಟು ಬದಲಾವಣೆ ಪ್ರಕರಣ: ಕೇಂದ್ರ ಸರ್ಕಾರ ₹ 1000 ಹಾಗೂ ₹ 500 ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಕಾರ್ಪೊರೇಷನ್‌ ಬ್ಯಾಂಕ್‌ ರಾಮನಗರ ಶಾಖೆಯಲ್ಲಿ ₹ 10 ಲಕ್ಷ ರೂಪಾಯಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಏಪ್ರಿಲ್‌ 7ರಂದು ಎಫ್‌ಐಆರ್‌ ದಾಖಲಿಸಿತ್ತು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಬಿ. ಪ್ರಕಾಶ್‌ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿತ್ತು.

ಮ್ಯಾನೇಜರ್‌, ಹಳೇ ನೋಟುಗಳ ಬದಲಾವಣೆ ಮಾಡುವ ಸಮಯದಲ್ಲಿ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ್ದ ಮಾನದಂಡಗಳನ್ನು ಪಾಲಿಸಲಿಲ್ಲ. 250 ನಕಲಿ ದಾಖಲೆ ಹಾಗೂ ನಕಲಿ ಮತದಾರರ ಗುರುತಿನ ಪತ್ರ ಸೃಷ್ಟಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ಉದ್ದೇಶಕ್ಕೆ ಸರ್ಚ್‌ ವಾರೆಂಟ್‌ ಪಡೆದಿದ್ದಾರೆ.

ಸಿಬಿಐ, ಸರ್ಚ್‌ ವಾರೆಂಟ್‌ ಪಡೆದಿರುವ ಉಳಿದವರ ಮನೆಗಳ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಇದರಲ್ಲಿ ಶಿವಕುಮಾರ್‌ ಮತ್ತು ಸುರೇಶ್‌ ಅವರ ಹೆಸರಿಲ್ಲ. ‘ಇದು ರಾಜಕೀಯ ಪ್ರೇರಿತ ದಾಳಿ, ನಮ್ಮನ್ನು ರಾಜಕೀಯವಾಗಿ ಮುಗಿಸುವ ಸಂಚು’ ಎಂದು ಸಹೋದರರಿಬ್ಬರು ‍ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆರೋಪಿಸಿದ್ದಾರೆ.

* ಕೇಂದ್ರ ಸರ್ಕಾರ ಸಿಬಿಐ ಬಳಸಿಕೊಂಡು ಕಾಂಗ್ರೆಸ್‌ ನಾಯಕರನ್ನು ಹೆದರಿಸುತ್ತಿದೆ. ಸಿಬಿಐ ಕಾಂಗ್ರೆಸ್‌ ನಾಯಕರನ್ನೇ ಟಾರ್ಗೆಟ್ ಮಾಡಿದೆ.

–ಸಿದ್ದರಾಮಯ್ಯ, ಸಭಾ ನಾಯಕ, ವಿಧಾನಸಭೆ 

ನಮ್ಮ ಕುಟುಂಬಕ್ಕೆ ಕಿರುಕುಳ: ಡಿಕೆಶಿ

ನಮ್ಮ ಕುಟುಂಬಕ್ಕೆ ಚಿತ್ರಹಿಂಸೆ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸರ್ಚ್ ವಾರೆಂಟ್ ಪಡೆದು ನಮಗೆ ಆಪ್ತರಾದ 11 ಮಂದಿ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಆರೋಪಿಸಿದರು.

ಸಿಬಿಐ ಕಾರ್ಯಾಚರಣೆಗೆ ಇಳಿಯುವ ಮೊದಲೇ ಬೆಳಿಗ್ಗೆ ಎಂಟು ಗಂಟೆಗೇ ಶಿವಕುಮಾರ್‌ ಪತ್ರಿಕಾಗೋಷ್ಠಿ ನಡೆಸಿರುವುದು ತನಿಖಾಧಿಕಾರಿಗಳನ್ನು ಚಿಂತೆಗೀಡುಮಾಡಿದ್ದು, ಮಾಹಿತಿ ಸೋರಿಕೆ ಮಾಡಿದವರಿಗಾಗಿ ಹುಡುಕಾಟ ನಡೆಸಿದೆ.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಶಿವಕುಮಾರ್‌, ‘ನಾವು ನ್ಯಾಯಬದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಎಷ್ಟು ಶಕ್ತಿ ಇದೆಯೋ, ಅಷ್ಟರಲ್ಲಿ ಕಾಲು ಚಾಚಿ ಮಲಗುವ ಜಾಯಮಾನ ನಮ್ಮದು’ ಎಂದರು.

‘ನಾಲ್ಕೈದು ತಿಂಗಳಿಂದ ಯಾರು ಯಾರನ್ನು ಕರೆದು ಮಾತನಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಆದರೆ, ಅದನ್ನು ಇಲ್ಲಿ ಬಿಚ್ಚಿಡುವುದಿಲ್ಲ.ನಮ್ಮ ಕುಟುಂಬ ಹಾಗೂ ‌ನನ್ನ ವಿರುದ್ಧ ನಡೆಯುವ ಕುತಂತ್ರಗಳಿಗೆ  ಜಗ್ಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಅಧಿಕಾರ ಶಾಶ್ವತ ಅಲ್ಲ. ನ್ಯಾಯಬದ್ದವಾಗಿ ಕೆಲಸ ಮಾಡಿ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಅನ್ನೋದು ನಿಮ್ಮ ಭ್ರಮೆ’ ಎಂದು ಕೇಂದ್ರ. ಸರಕಾರದ ವಿರುದ್ಧ ಗುಡುಗಿದರು.

‘ನಮಗೆ ಯಾರು ರಕ್ಷಣೆ ಕೊಡ್ತಾರೆ ಎನ್ನುವುದು ಬೇರೆ ವಿಚಾರ. ನಮ್ಮ ಜೊತೆ ದೇವರು, ಜನರಿದ್ದಾರೆ. ಸರ್ಚ್ ವಾರೆಂಟ್ ಸುದ್ದಿ ತಿಳಿದು ಜನರು ನಮ್ಮ ಮನೆ ಬಳಿ ಬರ್ತಿದ್ದಾರೆ. ಈಗಾಗಲೇ ನನಗೆ ಎಲ್ಲಾ ಕಡೆಯಿಂದ ದೂರವಾಣಿ ಕರೆಗಳು ಬರುತ್ತಿವೆ’ ಎಂದರು.

ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮಾತನಾಡಿ, ‘ಮೂರ್ನಾಲ್ಕು ದಿನಗಳಿಂದ ನಮ್ಮ ಮೇಲೆ ಸಿಬಿಐ ದಾಳಿಗೆ ತಂತ್ರ ಮಾಡಲಾಗಿದೆ. 11 ಕಡೆ ದಾಳಿ ಮಾಡಲು ಸರ್ಚ್ ವಾರಂಟ್ ಪಡೆಯಲಾಗಿದೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವು ಕಾನೂನಿಗೆ ತಲೆ ಬಾಗುತ್ತೇವೆ’ ಎಂದರು.

‘ಕೇಂದ್ರ ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ನಾಯಕರು ನಮಗೆ ಆಸೆ–ಆಮಿಷಗಳನ್ನು ಒಡ್ಡಿದ್ರು. ಬೆದರಿಕೆಯನ್ನೂ ಹಾಕಿದ್ರು. ಅದ್ಯಾವುದಕ್ಕೂ ಕಿಮ್ಮತ್ತು ಕೊಡಲಿಲ್ಲ’ ಎಂದು ಸುರೇಶ್‌ ದೂರಿದರು.

‘ಕಾನೂನು ಬದ್ದ ಸಂಸ್ಥೆಗಳಿಗೆ ಸಹಕಾರ ಕೊಡುತ್ತೇವೆ. ನಾವೂ ಕೂಡ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇವೆ’ ಎಂದರು.

ಇದುವರೆಗೂ ಸಿಬಿಐ ನೊಟೀಸ್ ಬಂದಿಲ್ಲ. ವಕೀಲರ ಮೂಲಕ ನ್ಯಾಯಾಲಯದಿಂದ ದೃಢೀಕೃತ ಕಾಪಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದೂ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT