ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಆನೆಗಳು ಆಡಿದ ಕ್ರಿಕೆಟ್‌... ಚೆಲ್ಲಾಟ...

ಕ್ರೀಡೆಯಲ್ಲಿ ಹತ್ತು ಆನೆಗಳು ಭಾಗಿ, ಮಕ್ಕಳ ಮನ ಗೆದ್ದ ಪುಟಾಣಿ ಆನೆ ಶಾರದಾ
Last Updated 13 ಅಕ್ಟೋಬರ್ 2018, 13:50 IST
ಅಕ್ಷರ ಗಾತ್ರ

ಶಿವಮೊಗ್ಗ: ಸೂರ್ಯಬ್ಯಾಟ್‌ನಿಂದ ತನ್ನತ್ತ ವೇಗವಾಗಿ ಬಂದ ಚೆಂಡನ್ನು ಪ್ರೇಕ್ಷಕರಿದ್ದ ಗ್ಯಾಲರಿಯತ್ತ ಬೀಸಿದ್ದಾನೆ.., ಓಹ್.. ಈಗಮತ್ತೊಮ್ಮೆ ಬೌಂಡರಿ ಬಾರಿಸಲು ಅಣಿಯಾಗುತ್ತಿದ್ದಾನೆ. ಓ.. ಮತ್ತೊಮ್ಮೆ ಬೌಂಡರಿ ಬಾರಿಸಿದ್ದಾನೆ.

ಅರೇ.. ಇದೇನು ಕ್ರಿಕೆಟ್ ಕಮೆಂಟರಿಎಂದು ಯೋಚಿಸುತ್ತಿದ್ದೀರಾ? ಹೌದು..ಇದು ಕ್ರಿಕೆಟ್ ಕಮೆಂಟರಿಯೇ. ಆದರೆ,ಕ್ರೀಡಾಪಟುಗಳು ಆಡಿದ ಕ್ರಿಕೆಟ್‌ಗೆ ಹೇಳಿದ ಕಮೆಂಟರಿ ಅಲ್ಲ. ಬದಲಿಗೆಆನೆಗಳು ಆಡಿದ ಕ್ರಿಕೆಟ್‌ಗೆ ಹೇಳಿದ್ದು.

ಸಕ್ರೆಬೈಲು ಆನೆ ಬಿಡಾರದಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ಶನಿವಾರ ನಡೆಸಿದ 64ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಆನೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದವು.

ಸಾಗರ(28), ಆಲೆ(12), ಅರ್ಜುನ(7), ಸೂರ್ಯ(7), ಗಂಗೆ(80), ಗೀತಾ(75), ಹೇಮಾವತಿ(3), ಶಾರದಾ(2), ಸುಭದ್ರಾ(23), ಶಿವ(4) ಒಟ್ಟು 10 ಆನೆಗಳು ಅಲಂಕಾರಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಮೊದಲಿಗೆ ಎಲ್ಲಾ ಆನೆಗಳು ಪ್ರೇಕ್ಷಕರಿಗೆ ಕುಳಿತುಕೊಂಡು ತಮ್ಮದೇ ಶೈಲಿಯಲ್ಲಿ ಸೊಂಡಿಲು ಎತ್ತಿ ನಮಸ್ಕಾರ ಮಾಡುವ ಮೂಲಕ ಸ್ವಾಗತಿಸಿದವು. ನಂತರ ಎರಡು ಬಾರಿ ಪಥ ಸಂಚಲನ ಮಾಡಿದವು. ಹಾಗೆಯೇ ಒಂದರ ಬಾಲವನ್ನು ಮತ್ತೊಂದು ಆನೆ ಹಿಡಿದು ಸುತ್ತು ಹಾಕಿದರೆ, ಹೇಮಾವತಿ ಹಾಗೂ ಶಿವ ಒಬ್ಬರ ಸೊಂಡಿಲು ಮತ್ತೊಬ್ಬರು ಹಿಡಿದು ಸುತ್ತು ಹಾಕಿದವು.

ಕ್ರಿಕೆಟ್‌ನಲ್ಲಿ ಸೂರ್ಯ ಹಾಗೂ ಆಲೆ ಆನೆಗಳು ಯಾವುದೇ ಕ್ರಿಕೆಟ್ ಆಟಗಾರರಿಗೂ ಕಡಿಮೆ ಇಲ್ಲ ಎಂಬಂತೆಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರೆ, ಪುಟ್ಟಮಕ್ಕಳುಕುಣಿದು ಕುಪ್ಪಳಿಸಿದರು. ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಅವುಗಳನ್ನು ಹುರಿದುಂಬಿಸುತ್ತಿದ್ದರು.

ಹೇಮಾವತಿ ಮತ್ತು ಶಿವ ಆನೆಗಳು ಅತ್ಯಂತ ಚಿಕ್ಕ ಆನೆಶಾರದೆಯ ಕಿವಿ ಹಿಡಿದು ಒಂದು ಸುತ್ತು ಸುತ್ತಿದವು. ಈದೃಶ್ಯವು ಪೋಷಕರು ಹಠ ಮಾಡುವ ಚಿಕ್ಕ ಮಕ್ಕಳನ್ನು ಕಿವಿ ಹಿಂಡಿ ಶಾಲೆಗೆ ಕಳುಹಿಸುವಂತೆ ಭಾಸವಾಗುತ್ತಿತ್ತು. ನಂತರ ಶಾರದಾಆನೆ ಫುಟ್‌ಬಾಲ್‌ಗೆ ಚಾಲನೆ ನೀಡಿದಳು.ಶಾರದೆಗೆ,ಆಲೆ ಮತ್ತು ಸೂರ್ಯ ಸಾಥ್‌ ನೀಡಿದರು.

ಎಲ್ಲಾ ಆನೆಗಳು ಓಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದವು. ಮೊದಲ ಸುತ್ತಿನಲ್ಲಿ ಹೇಮಾವತಿ ಮುಂದಿದ್ದರೆ, ಶಿವ, ಸೂರ್ಯ ಇಬ್ಬರೂ ಸಮವಾಗಿ ಹಿಂದಿದ್ದರು. ಎರಡನೇ ಸುತ್ತಿನಲ್ಲಿ ಹೇಮಾವತಿ ಮೊದಲನೆ ಸ್ಥಾನ, ಸೂರ್ಯ ಎರಡನೆ ಸ್ಥಾನ ಪಡೆದವು.

ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಆಲೆ, ಸೂರ್ಯ, ಅರ್ಜುನ ಆನೆಗಳು ಬಾಸ್ಕೆಟ್ ಬಾಲ್‌ ಆಟವಾಡಿದರೆ, ಗಂಗೆ ಮತ್ತು ಹೇಮಾವತಿ ದಂತದ ಮೇಲೆ ಮಾವುತರನ್ನು ಕುರಿಸಿಕೊಂಡು ಒಂದು ಸುತ್ತು ಸುತ್ತಿದವು. ಅರ್ಜುನ, ಸೂರ್ಯ ಸಾಗರನ ದಂತ ಹಿಡಿದು ಸುತ್ತಿದವು.

ಬಾಳೆ ಹಣ್ಣು ಹಾಗೂ ಕಬ್ಬು ತಿನ್ನುವ ಸ್ಪರ್ಧೆಯಲ್ಲಿ ಸಾಗರ ಮೊದಲ ಸ್ಥಾನ, ಸೂರ್ಯ ಎರಡನೇ ಹಾಗೂ ಶಾರದೆ ಮೂರನೆ ಸ್ಥಾನ ಪಡೆದವು. ನಂತರಆನೆಗಳು ಬಕೆಟ್‌ ಹಿಡಿದು ಪ‍್ರೇಕ್ಷಕರ ಬಳಿ ಬಂದು ತನ್ನ ಸೊಂಡಿಲಿನಿಂದ ನೀರನ್ನು ಪ್ರೋಕ್ಷಣೆ ಮಾಡಿದವು. ಆಗ ಪ್ರೇಕ್ಷಕರು, ಮಕ್ಕಳು ಪುಳಕಿತಗೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT