ಹಳೆಯ ಕೆಲಸಗಳ ತ್ವರಿತ ಅನುಷ್ಠಾನಕ್ಕೆ ಒತ್ತು

7
ನಗರ ಪಾಲಿಕೆ ನೂತನ ಆಯುಕ್ತೆ ಚಾರುಲತಾ ಸೊಮಲ್ ಅಧಿಕಾರ ಸ್ವೀಕಾರ

ಹಳೆಯ ಕೆಲಸಗಳ ತ್ವರಿತ ಅನುಷ್ಠಾನಕ್ಕೆ ಒತ್ತು

Published:
Updated:
Deccan Herald

ಶಿವಮೊಗ್ಗ: ಹೊಸ ಯೋಜನೆಗಳತ್ತ ಗಮನಹರಿಸುವ ಮೊದಲು ಇರುವ ಕೆಲಸಗಳನ್ನೇ ತ್ವರಿತವಾಗಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುವೆ ಎಂದು ನಗರ ಪಾಲಿಕೆ ನೂತನ ಆಯುಕ್ತೆ ಚಾರುಲತಾ ಸೊಮಲ್ ಅಭಿಪ್ರಾಯ ಹಂಚಿಕೊಂಡರು.

ನಗರ ಪಾಲಿಕೆ ಆಯಕ್ತರಾಗಿ ಶುಕ್ರವಾರ ಪ್ರಭಾರ ಆಯುಕ್ತ ಟಿ.ವಿ. ಪ್ರಕಾಶ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕರ್ನಾಟಕ ಕೇಡರ್ ಅಧಿಕಾರಿಯಾಗಿ ಬಂದ ನಂತರ ಕನ್ನಡ ಚೆನ್ನಾಗಿ ಕಲಿತಿರುವೆ. ಶಿವಮೊಗ್ಗ ಜಿಲ್ಲೆಯ ಸಂಸ್ಕೃತಿ, ಹೋರಾಟ, ರಾಜಕಾರಣ, ಮಲೆನಾಡಿನ ಕುರಿತು ಮಾಹಿತಿ ತಿಳಿದುಕೊಂಡಿರುವೆ. ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುವೆ ಎಂದರು.

ಆಯುಕ್ತರ ಸ್ಥಾನದ ಜತೆಗೆ, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನೂ ನಿಭಾಯಿಸುವ ಹೊಣೆಗಾರಿಕೆ ಇದೆ. ಸ್ಮಾರ್ಟ್‌ಸಿಟಿ ಅನುಷ್ಠಾನದ ವಿಳಂಬ ಕೇವಲ ಶಿವಮೊಗ್ಗದ ಸಮಸ್ಯೆಯಲ್ಲ. ಅದು ಇಡೀ ರಾಜ್ಯದ ಸಮಸ್ಯೆ. ಈಗಾಗಲೇ ಅನುಮೋದನೆಯಾಗಿರುವ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವೆ. ಸದಸ್ಯಕ್ಕೆ ಯಾವ ಹೊಸ ಕಾರ್ಯಸೂಚಿಯನ್ನೂ ಸೇರಿಸುವುದಿಲ್ಲ ಎಂದು ಮಾಹಿತಿ ನೀಡಿದರು.

ಹಿಂದೆ ಆಯುಕ್ತರಾಗಿದ್ದ ಮುಲೈಮುಹಿಲನ್‌ ಅವರು ಇಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅವುಗಳನ್ನು ಮುಂದುವರಿಸಲಾಗುವುದು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಎಂದರು.

ಮೂಲತಃ ಮುಂಬೈನಲ್ಲಿ ಹುಟ್ಟಿಬೆಳೆದ ಚಾರುಲತಾ 2012ನೇ ಸಾಲಿನ ಐಎಎಸ್‌ ಬ್ಯಾಚ್‌ ಅಧಿಕಾರಿ. ಕುಂದಾಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ, ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಅವರು ಶಿವಮೊಗ್ಗಕ್ಕೆ ಬರುವ ಮೊದಲು ಮುಖ್ಯಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !