ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಅಂತ್ಯ: ಜನವರಿ 4ಕ್ಕೆ ಫಲಿತಾಂಶ

ಕಲ್ಕೆರೆದೊಡ್ಡಿ ಗ್ರಾಮದಲ್ಲಿ ಪಂಚಾಯಿತಿ ಉಪ ಚುನಾವಣೆ
Last Updated 2 ಜನವರಿ 2019, 13:24 IST
ಅಕ್ಷರ ಗಾತ್ರ

ಕನಕಪುರ: ಕಸಬಾ ಹೋಬಳಿ ನಾರಾಯಣಪುರ ಗ್ರಾಮ ಪಂಚಾಯಿತಿಯ ಕಲ್ಕೆರೆದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿಯ ಉಪ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆಯಿತು.

ಕಲ್ಕೆರೆದೊಡ್ಡಿ ಗ್ರಾಮದ ಸದಸ್ಯ ರಮೇಶ್‌.ಜಿ. ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್‌ ಅವರ ಪತ್ನಿ ಸುಶೀಲ ಮತ್ತು ಅದೇ ಗ್ರಾಮದ ಕೃಷ್ಣಮೂರ್ತಿ ಕೆ.ಜಿ. ಸ್ಪರ್ಧಿಸಿದ್ದರು.

ಈ ಮತಗಟ್ಟೆಗೆ ಕಲ್ಕೆರೆದೊಡ್ಡಿ, ಗೊಲ್ಲರದೊಡ್ಡಿ, ಕುಮಣಿದೊಡ್ಡಿ, ನಿಡಗಲ್ಲಿನ ಜನತಾಕಲೋನಿ ಗ್ರಾಮಗಳು ಸೇರಿವೆ. ನಾಲ್ಕು ಗ್ರಾಮಗಳಿಂದ ಒಟ್ಟು 494 ಮತದಾರರಿದ್ದಾರೆ.

ಇಲ್ಲಿ ಸಮಬಲದ ಹೋರಾಟ ಏರ್ಪಟ್ಟಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಮತದಾನ ಬಿರುಸಿನಿಂದ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಪ್ರಾರಂಭಗೊಂಡ ಮತದಾನ ಸಂಜೆ 5 ಗಂಟೆವರೆಗೂ ನಡೆಯಿತು. ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮತದಾನ ಕೇಂದ್ರದಿಂದ 100 ಮೀಟರ್‌ ಒಳಗೆ ಯಾರು ಬರದಂತೆ ಸಬ್‌ ಇನ್‌ಸ್ಪೆಕ್ಟರ್‌ ನಟರಾಜು ಕ್ರಮ ವಹಿಸಿದ್ದರು.

ಕಾಂಗ್ರೆಸ್‌ನ ಪ್ರಮುಖ ಮುಖಂಡರಾದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ಕಸಬಾ ಬ್ಲಾಕ್‌ ಅಧ್ಯಕ್ಷ ವರಳ್‌ಗಲ್‌ ರಮೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಶಾಂತಕುಮಾರ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್‌, ಜಗದೀಶ್‌, ಮುಖಂಡರಾದ ಚೀರಣಕುಪ್ಪೆ ರವಿ, ಮುತ್ತುರಾಜು, ನಾಗ ಮೊದಲಾದವರು ಚುನಾವಣೆಯ ನೇತೃತ್ವ ವಹಿಸಿ ಚುನಾವಣೆ ನಡೆಸಿದರು.

ಸಿ.ಎಸ್. ರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಗಂಗಾಧರಯ್ಯ ಸಿ., ಸತೀಶ್‌ ಕೆ.ಆರ್‌., ಉಮಾಕಾಂತ, ರಮೇಶ್‌ ಚುನಾವಣಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.

ಚುನಾವಣೆ ನಡೆದ ಮೇಲೆ ಮತಪೆಟ್ಟಿಗೆಗಳನ್ನು ನಗರದಲ್ಲಿನ ಉಪ ಖಜಾನೆಯಲ್ಲಿ ಇಡಲಾಗಿದ್ದು ಜ.4 ರಂದು ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT