ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕತೆ; ಸವಾಲಾಗಿ ಸ್ವೀಕರಿಸಿ’

Last Updated 4 ಡಿಸೆಂಬರ್ 2019, 8:52 IST
ಅಕ್ಷರ ಗಾತ್ರ

ವಿಜಯಪುರ: ‘ಅಂಗವಿಕಲತೆಯನ್ನು ಸವಾಲಾಗಿ ಸ್ವೀಕರಿಸಿ, ಛಲದಿಂದ ಮುನ್ನಡೆಯಬೇಕು’ ಎಂದು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ ಹೇಳಿದರು.

ಬಿಎಲ್‌ಡಿಇ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲತೆ ಎಂಬುದು ಯಾವುದೇ ಶಾಪ, ಕರ್ಮ, ಪೂರ್ವ ಜನ್ಮದಿಂದ ಬಂದಿದ್ದಲ್ಲ. ಅದು ವೈದ್ಯಕೀಯ ಕಾರಣಗಳಿಂದಾಗಿ ಉಂಟಾಗಿರುವಂತಹದ್ದು. ಅದರ ಬಗ್ಗೆ ಮರುಕ ಪಟ್ಟುಕೊಳ್ಳದೆ ಅಂಗವೈಕಲ್ಯತೆಯನ್ನೇ ಸವಾಲಾಗಿ ಸ್ವೀಕರಿಸಬೇಕು. ಸಮಾಜ ಅಂಗವಿಕಲರಿಗೆ ಅಗತ್ಯ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

‘ದೇಹದ ಎಲ್ಲ ಅವಯವಗಳು ಪರಿಪೂರ್ಣವಾಗಿದ್ದರೂ ಸಾಧಿಸಲಾರದ ಕಾರ್ಯಗಳನ್ನು, ದೈಹಿಕವಾಗಿ ಅಂಗವಿಕಲತೆಯನ್ನು ಹೊಂದಿಯೇ ಅನೇಕರು ಸಾಧಿಸಿದ್ದಾರೆ. ಸರ್ಕಾರ, ಸಮಾಜ ಅವರ ಬಗ್ಗೆ ಕೇವಲ ಅನುಕಂಪ ತೋರದೆ, ಬೆಂಬಲವಾಗಿದ್ದುಕೊಂಡು ಅವರ ಸಾಧನೆಗೆ ವೇದಿಕೆ ಕಲ್ಪಿಸಬೇಕು’ ಎಂದರು.

ನಿರೂಪಕರಿಗೆ ತರಾಟೆ: ‘ಪೂರ್ವಜನ್ಮದ ಪಾಪ, ಕರ್ಮಗಳಿಂದ ಈ ಜನ್ಮದಲ್ಲಿ ಅಂಗವಿಕಲತೆ ಉಂಟಾಗಿರುತ್ತದೆ’ ಎಂಬ ಕಾರ್ಯಕ್ರಮ ನಿರೂಪಕಿಯ ಹೇಳಿಕೆಗೆ ವೇದಿಕೆಯಿಂದಲೇ ತರಾಟೆಗೆ ತೆಗೆದುಕೊಂಡ ಪಾಟೀಲ, ‘ಇಂತಹ ತಪ್ಪು ಸಂದೇಶ ನೀಡಬೇಡಿ, ದೈಹಿಕ ವಿಕಲತೆ ಯಾವುದೇ ಪಾಪ-ಪುಣ್ಯಗಳಿಂದ ಉಂಟಾಗಿರುವುದಿಲ್ಲ. ಇದು ಮಿಥ್ಯೆ. ವೈದ್ಯಕೀಯ ಕಾರಣಗಳಿಂದಾಗಿ ಇಂತಹ ತೊಂದರೆಗಳಾಗಿರುತ್ತವೆ’ ಎಂದು ಹೇಳಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಅನುದಾನದಲ್ಲಿ ಒದಗಿಸಲಾದ ₹5ಲಕ್ಷ ಮೌಲ್ಯದ ಕೃತಕ ಅಂಗಾಂಗಗಳು ಹಾಗೂ ಸಾಧನ ಸಲಕರಣೆಗಳನ್ನು ಜಿಲ್ಲೆಯ 200 ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿ.ಬಿ.ಕುಂಬಾರ, ನಿರ್ಮಲಾ ಸುರುಪುರ, ಡಾ.ಈಶ್ವರ ಬಾಗೋಜಿ, ಡಾ.ಅನ್ನಪೂರ್ಣ ಸಜ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT