ಸ್ವತಂತ್ರ ಸರ್ಕಾರ ನಡೆಸಿದ್ದ ‘ಈಸೂರು’ ಧೀರರು

7

ಸ್ವತಂತ್ರ ಸರ್ಕಾರ ನಡೆಸಿದ್ದ ‘ಈಸೂರು’ ಧೀರರು

Published:
Updated:
Deccan Herald

‘ಏಸೂರು (ಎಷ್ಟು ಊರು) ಕೊಟ್ಟರೂ ಈಸೂರು ಬಿಡೆವು’ ಎಂದು ಘೋಷಣೆ ಕೂಗುತ್ತಾ ಈಸೂರು ಗ್ರಾಮದ ಜನರು 1942ರಲ್ಲಿ ಗಾಂಧೀಜಿ ಕರೆಕೊಟ್ಟ ಭಾರತ ಬಿಟ್ಟು ತೊಲಗಿ ಚಳವಳಿಗೆ ಧುಮುಕ್ಕಿದ್ದರು. ಬ್ರಿಟಿಷ್‌ ಅಧಿಕಾರಿಗಳ ಲಾಠಿ, ಬೂಟಿನ ಏಟಿಗೆ ಬೆನ್ನು ತೋರಿಸದೇ ಎದೆಸೆಟೆಸಿ ನಿಂತು ದೌರ್ಜನ್ಯ ಎದುರಿಸಿದ್ದರು. ಕಂದಾಯ ಕಟ್ಟಲು ನಿರಾಕರಿಸಿ ಇಡೀ ಗ್ರಾಮವನ್ನೇ ಸ್ವತಂತ್ರ ಸರ್ಕಾರ ಎಂದು ಘೋಷಿಸಿಕೊಂಡು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಆಳ್ವಿಕೆ ಆರಂಭಿಸಿದ್ದರು.

ಅದೇ ವರ್ಷದ ಸೆಪ್ಟೆಂಬರ್ 25ರಂದು ಅಹಿಂಸಾ ತತ್ವದ ಅಡಿ ಶಾಂತಿಯುತವಾಗಿ ಆರಂಭವಾದ ಸ್ವತಂತ್ರ ಗ್ರಾಮದ ಆಳ್ವಿಕೆ ಮೂರೇ ದಿನದಲ್ಲಿ ಪತನವಾಗಿತ್ತು.

ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಹಿಷ್ಕರಿಸಿದ್ದರು. ನೌಕರಿಯಲ್ಲಿದ್ದವರು ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ರೈತರು, ಭೂಮಾಲೀಕರು ತೆರಿಗೆ ಕಟ್ಟದೇ ಅಸಹಾಕಾರ ತೋರಿದ್ದರು. ಅಧಿಕಾರಿಗಳ ವಿರುದ್ಧ, ಪೊಲೀಸರ ವಿರುದ್ಧ, ಬ್ರಿಟಿಷರ ಆಳ್ವಿಕೆಯ ವಿರುದ್ಧ ಘೋಷಣೆ ಕೂಗಿದ್ದರು. ಬ್ರಿಟಿಷರು ಆಗಸ್ಟ್ 9ರಂದು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕರನ್ನು ಬಂಧಿಸಿದ್ದರೂ, ಧೃತಿಗೆಡದೆ 46 ದಿನ ನಿರಂತರ ಪ್ರತಿಭಟನೆ ನಡೆಸಿದ್ದರು. ನಂತರ ಮೂರು ದಿನ ಸ್ವತಂತ್ರ ಸರ್ಕಾರ ನಡೆಸಿ, ಬ್ರಿಟಿಷ್‌ ಆಡಳಿತಕ್ಕೆ ಸೆಡ್ಡು ಹೊಡೆದಿದ್ದರು.

ರಣರಂಗವಾಗಿದ್ದ ಈಸೂರು:  ಸೆ. 28ರಂದು ಆ ತಾಲ್ಲೂಕಿನ ಅಮಲ್ದಾರರು, ಪೊಲೀಸರು, ಗ್ರಾಮಕ್ಕೆ ಹೋಗಿ ನಿರಾಯುಧ ಜನತೆಯ ಮೇಲೆ ಮೊದಲು ಲಾಠಿಯಿಂದ ಹೊಡೆದಿದ್ದರು. ಗಾಂಧೀಜಿಯ ಅಹಿಂಸಾ ತತ್ವ ಒಪ್ಪಿಕೊಂಡಿದ್ದ ಆ ಜನರು ನೋವು ಸಹಿಸಿಕೊಂಡರೂ ಪ್ರತಿರೋಧ ತೋರಲಿಲ್ಲ. ತಾಳ್ಮೆ ಕೆಣಕುವಂತೆ ನಡೆದುಕೊಂಡ ಅಧಿಕಾರಿಯೊಬ್ಬ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದ್ದ. ಆಗ ಉದ್ರಿಕ್ತರಾಗಿದ್ದ ಕೆಲವರು ಕೈಗೆ ಸಿಕ್ಕ ಪೊಲೀಸರನ್ನು ಬಡಿದರು. ಗಲಭೆಯಲ್ಲಿ ಅಮಲ್ದಾರ ಚನ್ನಕೃಷ್ಣಪ್ಪ, ಪೊಲೀಸ್ ಅಧಿಕಾರಿ ಕೆಂಚೇಗೌಡ ಮೃತಪಟ್ಟಿದ್ದರು.

ಗಲಭೆ ಪ್ರಕರಣದಿಂದ ಕೆಂಡಾಮಂಡಲವಾದ ಬ್ರಿಟಷ್‌ ಸರ್ಕಾರ ಈಸೂರಿಗೆ ಸೈನ್ಯದ ತುಕಡಿ ನುಗ್ಗಿಸಿತ್ತು. ಪುರುಷರು ಊರು ತೊರೆದಿದ್ದರು. ಕೈಗೆ ಸಿಕ್ಕ ಹೆಂಗಸರು, ಮಕ್ಕಳನ್ನೂ ಚಿತ್ರಹಿಂಸೆಗೆ ಗುರಿ ಮಾಡಲಾಗಿತ್ತು. ಸರ್ಕಾರದ ವಿರುದ್ಧ ಬಂಡಾಯ ಎದಿದ್ದ 50 ಮಂದಿಯ ಮೇಲೆ ಆರೋಪ ಹೊರಿಸಲಾಗಿತ್ತು. ಕೊನೆಗೂ ೪೧ ಮಂದಿ ಸೆರೆ ಸಿಕ್ಕಿದ್ದರು.

ವಿಚಾರಣೆ ನಡೆಸಿದ ಮೈಸೂರು ಹೈಕೋರ್ಟ್‌ ಚಳವಳಿಯ ಮುಂಚೂಣಿ ನಾಯಕರಾದ ಗುರಪ್ಪ, ಮಲ್ಲಪ್ಪ, ಸೂರ್ಯ ನಾರಾಯಣಾಚಾರಿ, ಬಿ. ಹಾಲಪ್ಪ ಮತ್ತು ಜಿ. ಶಂಕರಪ್ಪ ಅವರಿಗೆ ಮರಣದಂಡನೆ ವಿಧಿಸಿ ೧೯೪೩ ಜನವರಿ 9ರಂದು ತೀರ್ಪು ನೀಡಿತ್ತು. ಹಾಲಮ್ಮ, ಸಿದ್ದಮ್ಮ, ಪಾರ್ವತಮ್ಮ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಗಡಿಪಾರು ಮಾಡಲಾಗಿತ್ತು. ಉಳಿದವರಿಗೆ ಹಲವು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಅದೇ ವರ್ಷದ ಮಾರ್ಚ್ 8ರಂದು ಗುರಪ್ಪ ಮತ್ತು ಮಲ್ಲಪ್ಪ, 9ರಂದು ಸೂರ್ಯನಾರಾಯಣಾಚಾರಿ, ಹಾಲಪ್ಪ, ೧೦ರಂದು ಶಂಕರಪ್ಪ ಅವರನ್ನು ಗಲ್ಲಿಗೇರಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಉಳಿದವರನ್ನು ಮೈಸೂರು ಸರ್ಕಾರ ಬಿಡುಗಡೆ ಮಾಡಿತ್ತು.

ಸ್ಮಾರಕ ನಿರ್ಮಾಣ:  ಗಲ್ಲಿಗೇರಿಸಿದ ನಂತರ ಐವರ ಚಿತಾಭಸ್ಮವನ್ನು ಶಿಕಾರಿಪುರ ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೦ಕಿ.ಮೀ ದೂರದಲ್ಲಿ ಇರುವ ಈಸೂರಿಗೆ ತಂದು ಒಂದೇ ಸ್ಥಳದಲ್ಲಿ ಇಟ್ಟು ಅದರ ಮೇಲೆ ಸ್ಮಾರಕ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಗ್ರಾಮದ ಎಲ್ಲರೂ ಸೇರಿ ಪ್ರತಿ ವರ್ಷ ಜನವರಿಯಲ್ಲಿ ಹುತಾತ್ಮರ ಸ್ಮರಣೆ, ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಿಸುತ್ತಾರೆ. ಆದರೆ, ಹುತಾತ್ಮರ ಸ್ಮಾರಕ ಹಾ ಭವನ ಇರುವ ಸ್ಥಳದ ಸ್ವಚ್ಛತೆ, ನಿರ್ವಹಣೆ ಹಾಗೂ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ. ಭವನ ಬಿರುಕುಬಿಟ್ಟು ಸೋರುತ್ತಿದೆ.

ನಮ್ಮೂರಿನ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು ಜಾತಿ, ಭೇದ, ಸ್ಥಾನಮಾನದ ಹಂಗು ತೊರೆದು ಸ್ವತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಐವರು ಹುತಾತ್ಮರಾಗಿದ್ದಾರೆ. ಅವರ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಸ್ಮಾರಕ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಮುಖ್ಯಮಂತ್ರಿ ಇಲ್ಲಿಗೇ ಬಂದು ಸ್ವಾತಂತ್ರ್ಯೋತ್ಸವದ ದಿನ ಧ್ವಜಾರೋಹಣ ನೆರವೇರಿಸಬೇಕು ಎಂದು ವಿನಯದಿಂದ ಆಗ್ರಹಿಸುತ್ತಾರೆ ಜಿಲ್ಲಾ ಪಂಚಾಯಿತಿ ಮಾಹಿ ಸದಸ್ಯ ಈಸೂರು ಬಸವರಾಜ್.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !