ಮಂಗಳವಾರ, ಅಕ್ಟೋಬರ್ 22, 2019
25 °C

ಬುರಾಣಪುರದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ: ಗೊಂದಲಕ್ಕೆ ತೆರೆ ಎಳೆದ ರಮೇಶ ಜಿಗಜಿಣಗಿ

Published:
Updated:
Prajavani

ವಿಜಯಪುರ: ‘ಈ ಹಿಂದೆ ಸ್ಥಾಪಿಸಲು ಉದ್ದೇಶಿಸಿದ್ದ ಬುರಾಣಪುರದಲ್ಲೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗುವುದು. ಇಷ್ಟೇ ಅಲ್ಲ ಶೀಘ್ರದಲ್ಲೇ ಕಾಮಗಾರಿಯನ್ನೂ ಆರಂಭಿಸಲಾಗುವುದು’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

‘ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ವಿಮಾನಯಾನ ಸಚಿವ ಹರ್‌ದೀಪ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದೇನೆ. ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿದ ಎಲ್ಲ ಗೊಂದಲಗಳೂ ನಿವಾರಣೆಯಾಗಿವೆ. ಈ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೂ ಚರ್ಚಿಸಿದ್ದೇನೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸರ್ಕಾರ ಶೇ 51 ಮತ್ತು ರಾಜ್ಯ ಸರ್ಕಾರ ಶೇ 49ರಷ್ಟು ಅನುದಾನ ಕೊಡಬೇಕಿತ್ತು. ಆದರೆ, ಹಿಂದಿನ ಸರ್ಕಾರ ಅನುದಾನ ಕೊಡಲಿಲ್ಲ. ಹೀಗಾಗಿ, ವಿಮಾನ ನಿಲ್ದಾಣ ಸ್ಥಾಪನೆ ವಿಳಂಬಕ್ಕೆ ನಾನಾಗಲಿ, ನನ್ನ ಸರ್ಕಾರ (ಕೇಂದ್ರ ಸರ್ಕಾರ) ಕಾರಣವಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿಮಾನ ನಿಲ್ದಾಣಕ್ಕೆ 721 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. 2009ರಲ್ಲಿ ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರರು ಜನರಿಗೆ ತಪ್ಪು ಮಾಹಿತಿ ನೀಡಿದರು. ನೆಲ ಸಮತಟ್ಟು ಮಾಡಲು ₹100 ಕೋಟಿ ಅನುದಾನ ಬೇಕು ಎಂದು ಗೊಂದಲ ಸೃಷ್ಟಿಸಿದರು. ವಾಸ್ತವದಲ್ಲಿ ₹100 ಕೋಟಿ ಅಗತ್ಯವಿಲ್ಲ. ಮೊದಲ ಹಂತದಲ್ಲಿ ಕಟ್ಟಡ ಹಾಗೂ ರನ್‌ವೇ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

‘ವಿಜಯಪುರ, ಗುಲಬರ್ಗಾ ವಿಮಾನ ನಿಲ್ದಾಣಗಳು ಏಕಕಾಲಕ್ಕೆ ಮಂಜೂರಾಗಿವೆ. ಗುಲಬರ್ಗಾ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನನ್ನ ಹಣೆಬರಹ ಹೀಗಿದೆ. ಇದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ’ ಎಂದು ಆರೋಪಿಸಿದರು.

ಶಾಶ್ವತ ಯೋಜನೆಗೆ ಮನವಿ: ‘ಜಿಲ್ಲೆಯು ಹಿಂದಿನ 12 ವರ್ಷಗಳಲ್ಲಿ 8 ವರ್ಷ ಬರಗಾಲ ಎದುರಿಸಿದೆ. ಆದ್ದರಿಂದ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.

‘ಕೆರೆ, ಕಾಲುವೆ, ಹಳ್ಳಗಳಿಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಜನ–ಜಾನುವಾರುಗಳಿಗೆ ನೀರು ಒದಗಿಸುವಂತೆ ಸಿಎಂ ಅವರನ್ನು ಖುದ್ದು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ’ ಎಂದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)