ಗುಣಮಟ್ಟ ಸುಧಾರಣೆಗೆ ಯಂತ್ರ ಸ್ಥಾಪನೆ

7
10 ಸಾವಿರ ಲೀಟರ್ ಹಾಲು ಗುಣಮಟ್ಟ ಮಾಪನ ಸಾಮರ್ಥ್ಯ ಯಂತ್ರಕ್ಕೆ ಚಾಲನೆ

ಗುಣಮಟ್ಟ ಸುಧಾರಣೆಗೆ ಯಂತ್ರ ಸ್ಥಾಪನೆ

Published:
Updated:
Deccan Herald

ರಾಮನಗರ(ಕಸಬಾ): ರೈತರು ಸರಬರಾಜು ಮಾಡುವ ಹಾಲಿನಲ್ಲಿ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ಸುಗ್ಗನಹಳ್ಳಿ ಗ್ರಾಮದಲ್ಲಿ 10 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಯಂತ್ರ ಸ್ಥಾಪಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಹೇಳಿದರು.

ಇಲ್ಲಿನ ಸುಗ್ಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲ ಮಹಡಿ ಮತ್ತು ಬಿಎಂಸಿ ಕೇಂದ್ರದ ನೂತನ ಕಟ್ಟಡ ಹಾಗೂ 10 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಯಂತ್ರ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸಹಕಾರ ಸಂಘಗಳ ಹಾಲನ್ನು ಈಗಾಗಲೇ ಬಿಎಂಸಿ ಯಂತ್ರಗಳ ಮೂಲಕ ಮಾಪನ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ರೈತರು ಸಹಕಾರ ಸಂಘಕ್ಕೆ ಸರಬರಾಜು ಮಾಡಿದ ಹಾಲಿನಲ್ಲಿ ಯಾವುದೇ ರೀತಿಯ ಗುಣಮಟ್ಟ ವ್ಯತ್ಯಯವಾಗದಂತೆ ಕಾಪಾಡಲಾಗುತ್ತಿದೆ ಎಂದರು.

ಇಲ್ಲಿಯವರೆಗೆ ಒಂದು ಸಾವಿರ, ಎರಡು ಸಾವಿರ, ಐದು ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂಬ ನಿಟ್ಟಿನಲ್ಲಿ ಬೆಂಗಳೂರು ಹಾಲು ಒಕ್ಕೂಟ ಮತ್ತು ರಾಷ್ಟ್ರೀಯ ಹೈನು ಅಭಿವೃದ್ಧಿ ಯೋಜನೆಯಡಿಯಲ್ಲಿ ₹25 ಲಕ್ಷ ವೆಚ್ಚದಲ್ಲಿ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಯಂತ್ರ ಪ್ರಾರಂಭಿಸಲಾಗುತ್ತಿದ್ದು, 12 ಹಾಲು ಉತ್ಪಾದಕ ಸಹಕಾರ ಸಂಘಗಳ 8200 ಲೀಟರ್ ಹಾಲು ಸದ್ಯಕ್ಕೆ ಇದರಲ್ಲಿ ಸಂಗ್ರಹಿಸಲಾಗುತ್ತದೆ ಎಂದರು.

ಹಾಲು ಒಕ್ಕೂಟಕ್ಕೆ ಹಾಲು ಸರಬರಾಜಿನಲ್ಲಿ ಹೆಚ್ಚಳವಾಗಿರುವುದರಿಂದ ತಾತ್ಕಾಲಿಕವಾಗಿ ₹2 ಕಡಿತ ಮಾಡಲಾಗಿದೆ. ಸೆ.1 ರಿಂದ ₹1 ಹೆಚ್ಚಳ ಮಾಡಲು ಈಗಾಗಲೇ ಹಾಲು ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಮನಗರ ಮತ್ತು ಕನಕಪುರದಲ್ಲಿ ನಿರ್ಮಾಣವಾಗುತ್ತಿರುವ ಹಾಲಿನ ಉತ್ಪನ್ನಗಳ ಘಟಕ ಮತ್ತು ಪೌಡರ್ ಪ್ಲಾಂಟ್ ಘಟಕಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿದ ನಂತರ ಕೆಎಂಎಫ್ ಆದಾಯ ಗಣನೀಯವಾಗಿ ಹೆಚ್ಚಾಗಲಿದೆ ಎಂದರು.

ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ಮಾತನಾಡಿ, ರೈತರು ಹೈನುಗಾರಿಕೆಯನ್ನು ವೈಜ್ಞಾನಿಕ ದೃಷ್ಠಿಯಿಂದ ನೋಡಬೇಕು. ಇದರಿಂದ ಹಸುಗಳ ಸಾಕಾಣಿಕೆ ಮತ್ತು ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ ಎಂದರು.

ಒಕ್ಕೂಟದ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕಾಲಕಾಲಕ್ಕೆ ರಾಸುಗಳ ಸಾಕಾಣಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುಗ್ಗನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎಸ್.ಬೈರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರಾಮಕೃಷ್ಣಯ್ಯ, ಉಪಾಧ್ಯಕ್ಷ ಲಕ್ಕಸಂದ್ರ ಮಹದೇವ್, ಮುಖಂಡ ಸಿ.ರಾಮಯ್ಯ, ಬಮೂಲ್ ವ್ಯವಸ್ಥಾಪಕ ಡಾ.ರಂಗಸ್ವಾಮಿ, ರಾಮನಗರ ಶಿಬಿರ ಉಪ ವ್ಯವಸ್ಥಾಪಕ ಡಾ.ಶಿವಶಂಕರ್, ಡಾ.ಶ್ರೀನಿವಾಸ್, ವಿಸ್ತರಣಾಧಿಕಾರಿಗಳಾದ ನಂಜಯ್ಯ, ಎಸ್.ಉಮೇಶ್, ನೇತ್ರಾವತಿ, ಕಗ್ಗಲ್ಲಯ್ಯ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಲಿತೇಶ್, ಕೃಷ್ಣಪ್ಪ, ಬಿಎಂಸಿ ವಿಭಾಗದ ಉಪ ವ್ಯವಸ್ಥಾಪಕ ಪಾಪಣ್ಣ, ಭದ್ರಯ್ಯ, ಸಿದ್ಧಲಿಂಗಯ್ಯ, ಸುಗ್ಗನಹಳ್ಳಿ ಎಂಪಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಎಸ್.ಎಚ್. ಪ್ರೇಮ್ ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !