ರಾಜ್ಯದ ಪ್ರತಿ ಹಳ್ಳಿಗೂ ಶುದ್ಧ ನೀರು ಪೂರೈಕೆ: ಎಚ್‌.ಡಿ. ಕುಮಾರಸ್ವಾಮಿ

7
₹269 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

ರಾಜ್ಯದ ಪ್ರತಿ ಹಳ್ಳಿಗೂ ಶುದ್ಧ ನೀರು ಪೂರೈಕೆ: ಎಚ್‌.ಡಿ. ಕುಮಾರಸ್ವಾಮಿ

Published:
Updated:
Deccan Herald

ರಾಮನಗರ: ರಾಜ್ಯದ ಪ್ರತಿ ಹಳ್ಳಿಗೂ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಾದ ‘ಜಲಧಾರೆ’ ಅನುಷ್ಟಾನಕ್ಕೆ ಸಿದ್ಧತೆ ನಡೆದಿದೆ. ಇದಕ್ಕಾಗಿ ₨60–70 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ₨269 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ನಾಗಕನಿಗೂ ಶುದ್ಧ ನೀರು ಸಿಗಬೇಕು ಎನ್ನುವ ಆಶಯದೊಂದಿಗೆ ಜಲಧಾರೆ ಯೋಜನೆಯು ಜಾರಿಯಾಗುತ್ತಿದೆ. ಇದರ ಯೋಜನಾ ವರದಿ ತಯಾರಿಕೆಗೆ ಈಗಾಗಲೇ ₨5 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಅಡಿ ರಾಮನಗರ ಜಿಲ್ಲೆಯಲ್ಲಿ ₨1600 ಕೋಟಿ ವೆಚ್ಚದಲ್ಲಿ ವಿವಿಧ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಕಾವೇರಿಯಿಂದ ಇಗ್ಗಲೂರು ಮೂಲಕ ಅಣೆಕಟ್ಟೆಗಳ ಭರ್ತಿ ಹಾಗೂ ಅಲ್ಲಿಂದ ರಾಮನಗರ, ಚನ್ನಪಟ್ಟಣ ತಾಲ್ಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ₨480 ಕೋಟಿ ವೆಚ್ಚದ ಯೋಜನೆಯೂ ಇದರಲ್ಲಿ ಸೇರಿದೆ ಎಂದರು.

‘ರಾಜ್ಯ ಸರ್ಕಾರವು ಈಗಾಗಲೇ 100 ದಿನಗಳ ಕಾಲ ಯಶಸ್ವಿ ಆಡಳಿತ ನೀಡಿದೆ. ಇಂದಿನಿಂದ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಧಿಕೃತ ಚಾಲನೆ ದೊರೆತಿದೆ. ಸಾಲ ಮನ್ನಾ, ಸರ್ಕಾರಿ ನೌಕರರಿಗಾಗಿ ಆರನೇ ವೇತನ ಆಯೋಗ ಶಿಫಾರಸು ಜಾರಿ ಮೊದಲಾದ ಹೊರೆಗಳ ನಡುವೆಯೂ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ತೆಂಗು ಬೆಳೆಗಾರರಿಗೆ ನಷ್ಟವಾಗುವ ಪ್ರತಿ ಗಿಡಕ್ಕೆ ₨500ರಂತೆ ಎಕರೆಗೆ ₨20 ಸಾವಿರ ವರೆಗೂ ಪರಿಹಾರ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಈ ಭಾಗದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ’ ಎಂದರು.

ವೃಷಭಾವತಿ ಕಣಿವೆಯು ಹಿಂದೆಂದಿಗಿಂತ ಹೆಚ್ಚು ಕಲುಷಿತವಾಗಿದ್ದು, ಬೈರಮಂಗಲ ಕೆರೆಯಲ್ಲಿನ ನೊರೆ ಆತಂಕ ಹುಟ್ಟಿಸಿದೆ. ಹೀಗಾಗಿ ಬೆಂಗಳೂರಿನ ಚರಂಡಿ ನೀರಿನ ಶುದ್ಧೀಕರಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು.

ಇದೇ 8ರಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಸಾವಿರಾರು ಯುವಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಬೆಂಗಳೂರು–ಮೈಸೂರು ಎಕ್ಸ್‌ ಪ್ರೆಸ್ ಹೈವೆ ಕಾಮಗಾರಿಗೆ ₨4ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು.

ಇಂಧನ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ ‘ ಜಿಲ್ಲೆಯಲ್ಲಿ ಕನಕಪುರ–ರಾಮನಗರ–ಮಾಗಡಿ ರಸ್ತೆ ಅಭಿವೃದ್ಧಿಗೆ ₨500 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು. ರಾಮನಗರ–ಚನ್ನಪಟ್ಟಣ ಬೈಪಾಸ್ ರಸ್ತೆ ನಿರ್ಮಾಣಕ್ಕೆ ₨400 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದಲ್ಲದೆ ಜಿಲ್ಲೆಯ 100 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕಾಗಿ ₨580 ಕೋಟಿ ವೆಚ್ಚದ ಕಾಮಗಾರಿಗೂ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

ರೇಷ್ಮೆ ಸಚಿವ ಸಾ.ರ. ಮಹೇಶ್‌, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಂಸದ ಡಿ.ಕೆ. ಸುರೇಶ್, ಶಾಸಕ ಎ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್‌, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ನಗರಸಭೆ ಪ್ರಭಾರ ಅಧ್ಯಕ್ಷೆ ಮಂಗಳಾ ಶಂಭುಲಿಂಗಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಎಸ್. ಕೃಷ್ಣಾರೆಡ್ಡಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್ ಇದ್ದರು.

ಕುರ್ಚಿಗಳು ಖಾಲಿ ಖಾಲಿ
ಮುಖ್ಯಮಂತ್ರಿ ಹಾಗೂ ಘಟಾನುಘಟಿ ಸಚಿವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಸಾಕಷ್ಟು ಖಾಲಿಯಾಗಿದ್ದವು.
ಮಹಿಳಾ ಸಂಘಗಳ ಸದಸ್ಯರು, ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಜೆಡಿಎಸ್ ಕಾರ್ಯಕರ್ತರ ಸಂಖ್ಯೆಯೂ ಸಾಕಷ್ಟು ಕಡಿಮೆ ಇತ್ತು.

ಅಹವಾಲು ಸ್ವೀಕಾರ
ಕಾರ್ಯಕ್ರಮದ ಆರಂಭದಲ್ಲಿ ಹಾಗೂ ನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಭೂವ್ಯಾಜ್ಯಗಳು, ಉದ್ಯೋಗ, ಪಿಂಚಣಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಅವುಗಳಲ್ಲಿ ಕೆಲವನ್ನು ಸ್ಥಳದಲ್ಲಿಯೇ ಪರಿಶೀಲಿಸಿದ ಕುಮಾರಸ್ವಾಮಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !