ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದ ನಕ್ಷೆಗಾಗಿ ರೈತ ದಂಪತಿ ಧರಣಿ

ಭೂ ಮಾಪನ ಇಲಾಖೆ ಕಚೇರಿ ಎದುರು ವಿಷದ ಬಾಟಲಿಯಿಟ್ಟುಕೊಂಡು ಪ್ರತಿಭಟನೆ; ಸಿಗದ ಸ್ಪಂದನೆ
Last Updated 18 ಜುಲೈ 2018, 18:10 IST
ಅಕ್ಷರ ಗಾತ್ರ

ಸಿಂದಗಿ:ಜಮೀನು ವಾಟ್ನಿಗೆ ಸಂಬಂಧಿಸಿದಂತೆ ಅತ್ಯಗತ್ಯವಿರುವ ನಕ್ಷೆ ರಚಿಸಿಕೊಡದ ಭೂಮಾಪನ ಇಲಾಖೆಯ ಸರ್ವೇಯರ್‌ ನಿರ್ಲಕ್ಷ್ಯ ಖಂಡಿಸಿ, ತಾಲ್ಲೂಕಿನ ನಾಗಾಂವಿ ಬಿ.ಕೆ. ಗ್ರಾಮದ ರೈತ ದಂಪತಿ ಬುಧವಾರ ಕಚೇರಿ ಮುಂಭಾಗವೇ ವಿಷದ ಬಾಟಲಿಯೊಂದಿಗೆ ಪ್ರತಿಭಟಿಸಿದರು.

ಬೆಳಿಗ್ಗೆಯಿಂದಲೂ ಸಿದ್ದಮ್ಮ ಮುದಗೌಡಪ್ಪ ಬಿರಾದಾರ ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಎದುರು ಧರಣಿ ಕುಳಿತರು, ಆದರೆ ಯಾವೊಬ್ಬ ಸರ್ಕಾರಿ ನೌಕರ ಸೌಜನ್ಯಕ್ಕೂ ಅವರ ಸಮಸ್ಯೆ ಆಲಿಸದಿದ್ದುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು.

ಭೂ ಮಾಪನ ಇಲಾಖೆಯ ರೆಕಾರ್ಡ್‌ ವಿಭಾಗದ ಸಿಬ್ಬಂದಿಯೊಬ್ಬ ಇದೇ ಸಂದರ್ಭ ರೈತ ದಂಪತಿ ಬಗ್ಗೆ ಉಡಾಫೆಯ ಮಾತುಗಳನ್ನಾಡಿದ್ದಕ್ಕೆ ಸಾರ್ವಜನಿಕರು ಆತನನ್ನು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು.

ಸಮಸ್ಯೆ ಪರಿಹರಿಸಿಕೊಡುವಂತೆ ನಿರ್ದೇಶಕರನ್ನು ಮೊಬೈಲ್‌ ಮೂಲಕ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸಂಪರ್ಕಿಸಿದರೆ, ಇಂಡಿ ಕಚೇರಿಗೆ ಕಳುಹಿಸಿಕೊಡಿ ಎಂದಷ್ಟೇ ಉತ್ತರಿಸಿ ಕರೆ ಕಡಿತಗೊಳಿಸಿದರು ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ತಹಶೀಲ್ದಾರ್‌ ಬಸವರಾಜ ಕಡಕಬಾವಿ ಸ್ಥಳಕ್ಕೆ ಬಂದು ರೈತ ದಂಪತಿಗಳಿಂದ ಅರ್ಜಿ ಪಡೆದು, ತಾಂತ್ರಿಕ ತೊಂದರೆಯಿಂದ ವಿಳಂಬವಾಗಿರಬಹುದು ಎಂದಷ್ಟೇ ಹೇಳಿ ಅಲ್ಲಿಂದ ಹೊರಟು ಹೋದರು. ರೈತ ದಂಪತಿ ಬಳಿಯಿದ್ದ ವಿಷದ ಬಾಟಲಿ ಸಹ ಪಡೆಯಲಿಲ್ಲ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಇದು ಸರ್ಕಾರಿ ಅಧಿಕಾರಿಗಳ ದುರಂಹಕಾರದ ವರ್ತನೆ ಪ್ರದರ್ಶಿಸುತ್ತದೆ’ ಎಂದು ಸ್ಥಳದಲ್ಲಿದ್ದ ಗೊರವಗುಂಡಗಿ ಗ್ರಾಮದ ಮಡಿವಾಳ ಕೂಡಿ ಆಕ್ರೋಶ ವ್ಯಕ್ತಪಡಿಸಿದರು.

ಮೂರು ವರ್ಷದ ಅಲೆದಾಟ...

‘ಮೂರು ವರ್ಷದ ಅಲೆದಾಟವಿದು. ಇಂದಿಗೂ ನಕ್ಷೆ ಸಿಗದಿದ್ದರಿಂದ ಬೇಸತ್ತು ವಿಷದ ಬಾಟಲಿಯಿಟ್ಟುಕೊಂಡು ಕೂತಿದ್ದೇವೆ. ಆದರೂ ಯಾರೊಬ್ಬರೂ ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ’ ಎಂದು ನಾಗಾಂವಿ ಬಿ.ಕೆ. ಗ್ರಾಮದ ರೈತ ದಂಪತಿ ಸಿದ್ದಮ್ಮ ಮುದಗೌಡಪ್ಪ ಬಿರಾದಾರ ದೂರಿದರು.

‘ಎರಡು ಎಕರೆ ಜಮೀನಿನ ಖಾತೆಯನ್ನು ಪತ್ನಿ ಹೆಸರಿಗೆ ವರ್ಗಾಯಿಸಬೇಕಿತ್ತು. ಇದಕ್ಕಾಗಿಯೇ 2016ರ ಡಿಸೆಂಬರ್‌ 21ರಂದು ಸರ್ಕಾರಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದೆ. ನಂತರ ಹಲವು ಬಾರಿ ಕಚೇರಿಗೆ ಎಡ ತಾಕಿದರೂ ಸ್ಪಂದನೆ ಸಿಗಲಿಲ್ಲ.

ಕೊನೆಗೆ ಸಂಬಂಧಿಸಿದ ಕೋಟೂರ ಎಂಬ ಸರ್ವೇಯರ್‌ ನಕ್ಷೆ ಮಾಡಿಕೊಡಲು ₨ 6000 ಲಂಚಕ್ಕೆ ಬೇಡಿಕೆಯಿಟ್ಟ. ಆತನ ಸೂಚನೆಯಂತೆ ಹಣ ನೀಡಿದರೂ ಇದೂವರೆಗೂ ಜಮೀನಿನ ನಕ್ಷೆ ನಮ್ಮ ಕೈ ಸೇರಿಲ್ಲ’ ಎಂದು ಮುದಗೌಡಪ್ಪ ಬಿರಾದಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಬಡವರಾದ ನಾವು ವಾರಕ್ಕೊಮ್ಮೆ ಊರಿಂದ ಸಿಂದಗಿಗೆ ಬಂದು ಹೋಗಲು ಕನಿಷ್ಠ ₨ 150 ಖರ್ಚಾಗುತ್ತೆ. ಪ್ರತಿ ವಾರ ಬಂದರೂ ಸಂಬಂಧಿಸಿದ ಅಧಿಕಾರಿ ಕೆಲಸ ಮಾಡಿಕೊಡಲಿಲ್ಲ. ನಮ್ಮ ಅಲೆದಾಟ ನೋಡಿ ಯಾರೊಬ್ಬರ ಮನವೂ ಕರಗಲಿಲ್ಲ. ವಿಧಿಯಿಲ್ಲದೆ ವಿಷದ ಬಾಟಲಿಯಿಟ್ಟುಕೊಂಡು ಕೂತಿದ್ದೇವೆ’ ಎಂದು ದಂಪತಿ ಕಣ್ಣೀರಿಟ್ಟರು.

ಸಣ್ಣ ಮಕ್ಕಳನ್ನು ಮನೆಯಲ್ಲಿ ಉಪಾವಾಸ ಕೆಡವಿ ಇಲ್ಲಿಗೆ ಬಂದು ಹೋಗುತ್ತಿರುವುದು ನಮಗೂ ಸಾಕಾಗಿದೆ. ಲಂಚ ಕೊಟ್ಟರೂ ಕೆಲಸ ಮಾಡಿಕೊಟ್ಟಿಲ್ಲ. ದಿಕ್ಕೇ ತೋಚದಂತಾಗಿದೆ
ಸಿದ್ಧಮ್ಮ ಮುದಗೌಡಪ್ಪ ಬಿರಾದಾರ, ನಾಗಾಂವಿ ಬಿ.ಕೆ ಗ್ರಾಮದ ರೈತ ದಂಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT