ಅಪ್ಪ ಎಂದರೆ ಆಕಾಶ

ಶನಿವಾರ, ಜೂಲೈ 20, 2019
26 °C

ಅಪ್ಪ ಎಂದರೆ ಆಕಾಶ

Published:
Updated:
Prajavani

ಅಪ್ಪ ಎಂದರೆ ಆಕಾಶ. ಅಪ್ಪ ಯಾವತ್ತೂ ಅಮ್ಮನಂತಲ್ಲ. ಆದರೆ, ಮಕ್ಕಳ ಬಾಳು ಹಸನಾಗಿಸಲು ತಾನು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭಿವಿಸುತ್ತಾನೆ. ಮಕ್ಕಳ ಸಾಧನೆ, ಯಶಸ್ಸಿನಲ್ಲಿ ಖುಷಿ ಕಾಣುತ್ತಾನೆ. ಮಕ್ಕಳ ಬದುಕಿಗೆ ಚೈತನ್ಯದ ಚಿಲುಕೆಯಾಗಿರುವ ‘ಅಪ್ಪನ ದಿನ’ದಂದು ಆರೋಗ್ಯ, ಸಾಹಿತ್ಯ, ಸಿನಿಮಾ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳ ಸಾಧಕರು ತಮ್ಮ ಅಪ್ಪಂದಿರ ಒಡನಾಟ, ಆಟ–ಪಾಟ ಕುರಿತು ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ತಂದೆಯೇ ನನಗೆ ಆದರ್ಶ

ಡಾ.ಎಸ್‌.ಎಸ್‌.ಪಾಟೀಲ, ಶಸ್ತ್ರಚಿಕಿತ್ಸಕ, ವಿಜಯಪುರ

ನನ್ನ ತಂದೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಅವರೇ ನನಗೆ ಆದರ್ಶ. ಅವರ ಸಹಾಯ, ಸಹಕಾರದ ಗುಣಗಳಿಂದ ಪ್ರೇರಣೆ ಪಡೆದುಕೊಂಡಿದ್ದೇನೆ.

ವೃತ್ತಿಯಲ್ಲಿ ಕೃಷಿಕರಾರೂ ಅವರಲ್ಲಿನ ಒಳ್ಳೆಯ ಗುಣಗಳಿಂದ ಅವರು ಇತರರಿಗೆ ಮಾದರಿಯಾಗಿದ್ದರು. ಮಗ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. ಎಲ್ಲರಿಗಿಂತ ಎತ್ತರಕ್ಕೆ ಬೆಳೆಯಬೇಕು, ಪ್ರಸಿದ್ಧಿ ಪಡೆಯಬೇಕು’ ಎಂದು ಅವರು ಸದಾ ಕನವರಿಸುತ್ತಿದ್ದರು. ಅವರ ಪ್ರೋತ್ಸಾಹ, ಆತ್ಮಸ್ಥೈರ್ಯದಿಂದ ಇಂದು ನಾನು ವೈದ್ಯನಾಗಿ ಹೊರಹೊಮ್ಮಿದ್ದೇನೆ. ‘ಏನೂ ಮಾಡದಿದ್ದರೂ ಕೆಟ್ಟದ್ದನ್ನು ಎಂದಿಗೂ ಮಾಡಬೇಡ’ ಎಂಬ ಮೌಲ್ಯಯುತ ಆದರ್ಶವನ್ನು ನಮ್ಮ ತಂದೆ ಹೇಳಿಕೊಟ್ಟಿದ್ದಾರೆ.

ಅವರ ನೇರ ನುಡಿ ನನಗೆ ಇಷ್ಟ. ಸುಳ್ಳು, ಮೋಸವನ್ನು ಯಾವತ್ತೂ ಸಹಿಸುತ್ತಿರಲಿಲ್ಲ. ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದರಿಂದ ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮೂರು ಹುನಗುಂದ ತಾಲ್ಲೂಕಿನ ಚಿಕ್ಕ ಗ್ರಾಮ ಕಡೂರ. ಬಸ್‌ ಸೌಕರ್ಯ ಇರಲಿಲ್ಲ. ನಡೆದುಕೊಂಡೇ ಸಂಚರಿಸಬೇಕಿತ್ತು. ತಂದೆ ಜತೆ ನಡೆಯುತ್ತಿದ್ದ ಆ ದಿನಗಳ ಸಂತಸ ಎಂದಿಗೂ ಮರೆಯಲಾಗದು.

*****

ಸ್ನೇಹಿತನಂತೆ ವರ್ತಿಸುತ್ತಿದ್ದ ಅಪ್ಪ

ರಾಜೇಂದ್ರ ಬಿರಾದಾರ, ಉಪನ್ಯಾಸಕ, ವಿಜಯಪುರ

ಟಿ.ವಿಯಲ್ಲಿ ಶಮ್ಮಿ ಕಪೂರ್ ಹಾಡು ಬಂದ್ರೆ ಸಾಕು, ನಾನು ಎಲ್ಲೇ ಇದ್ದರೂ ಅಪ್ಪ ಎಳೆದುಕೊಂಡು ಬಂದು, ‘ನೋಡಲ್ಲಿ ಶಮ್ಮಿ ಕಪೂರ್ ಹಾಡು ಬರುತ್ತಿದೆ’ ಎಂದು ಹೇಳುತ್ತಿದ್ದರು. ಈಗಲೂ ಶಮ್ಮಿ ಕಪೂರ್ ಹಾಡು ಕೇಳಿದರೆ ಸಾಕು ಥಟ್ಟಂತ ಅಪ್ಪನ ನೆನಪಾಗುತ್ತದೆ.

ಕೌಟುಂಬಿಕ ಕಾರಣವೊಂದರಿಂದ ಅವರ ಮನಸ್ಸು ಜರ್ಜರಿತವಾಗಿತ್ತು. ಆದರೂ ಮಗನ ಸುಖಕ್ಕಾಗಿ ಅವರು ಸದಾ ಹಂಬಲಿಸುತ್ತಿದ್ದರು. ತನಗೆ ಇಲ್ಲದಿದ್ದರೂ ಮಗನಿಗೆ ಎಲ್ಲವೂ ಇರಲಿ, ಸಿಗಲಿ ಎಂಬ ಅವರ ತುಡಿತವನ್ನು ನಾನು ಹೆಜ್ಜೆ ಹೆಜ್ಜೆಯಲ್ಲೂ ಗಮನಿಸುತ್ತಿದ್ದೆ. ಚಿಕ್ಕಂದಿನಿಂದಲೂ ನನಗೆ ಯಾವುದನ್ನೂ ಕಡಿಮೆ ಮಾಡಲಿಲ್ಲ. ಹೂವಿನ ಹಾಗೆ ಜೋಪಾನ ಮಾಡಿದರು. ಅವರ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ನನ್ನ ಮೇಲಿಟ್ಟ ನಂಬಿಕೆಯಿಂದ ಉಪನ್ಯಾಸಕ ಹುದ್ದೆಯ ಜತೆಗೆ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

ಕಾಲೇಜು ಹಂತದವರೆಗೂ ತಂದೆ ಆಗಿದ್ದ ಅಪ್ಪ, ನನ್ನ ಮದುವೆ ಬಳಿಕ ಸ್ನೇಹಿತನಂತೆ ನನ್ನ ಜತೆ ಇರುತ್ತಿದ್ದರು. ಅಪಾರ ನಂಬಿಕೆ ಇಟ್ಟಿದ್ದರು. ಒಮ್ಮೆ ಉಪನ್ಯಾಸಕರೊಬ್ಬರು ನಿಮ್ಮ ಮಗ ಸೀಗರೆಟ್‌ ಸೇದುತ್ತಾನೆ ಎಂದು ಸುಳ್ಳು ಆರೋಪ ಮಾಡಿದ್ದರು. ಎಳ್ಳಷ್ಟು ಯೋಚಿಸದೆ ಅವರಿಗೆ ಬೈದು, ಹೊಡೆದಿದ್ದರು!. ‘ನನ್ನ ಮಗನ ಮೇಲೆ ನಂಬಿಕೆ ಐತಿ; ಅವನು ಅಂತವನಲ್ಲ’ ಅಂದಿದ್ದರು.

*****

ಅಪ್ಪ ಎಂದರೆ ಎತ್ತುಗಳ ನೆನಪು!

ಶಿವಾನಂದ ಸಿಂದಗಿ, ‘ಸೂಜಿದಾರ’ ಚಿತ್ರದ ನಟ, ಸಿಂದಗಿ

ಅಪ್ಪ ಅಂದರೆ ಎರಡು ಎತ್ತು ಮತ್ತು ಹೊಲ ನೆನಪಾಗುತ್ತದೆ. ಅಪ್ಪ ಎತ್ತುಗಳನ್ನು ಹೊಡೆದುಕೊಂಡು ಹೊಲದ ಕೆಲಸಕ್ಕೆ ಹೋಗುತ್ತಿದ್ದ. ಅವ್ವನ ರೊಟ್ಟಿ ಸಪ್ಪಳವೇ ನಮಗಾಗ ಅಲಾರ್ಮ್.

ಅಪ್ಪ-ನಾನು ಬುತ್ತಿ ಗಂಟು ನೆತ್ತಿ ಮ್ಯಾಲ ಇಟಗೊಂಡು ಹೊಲಕ್ಕ ಹೋಗೋದೇ ಒಂದು ಖುಷಿ. ಅಪ್ಪನಿಗೆ ಯಾವತ್ತೂ ಗೆಳೆಯರು ಬೇಕು ಅಂತ ಅನ್ನಿಸಿಲ್ಲ. ಅವನ ಎತ್ತುಗಳೇ ಆತನ ಗೆಳೆಯರು.

ಯಾವಾಗಲೂ ಅವುಗಳ ಜೊತೆ ಮಾತಾಡ್ತಾ ಇರುತ್ತಿದ್ದ. ಹೊಲಕ್ಕ ಹೋಗಿ ಹತ್ತರಕಿ ಪಲ್ಯ ಕಿತಗೊಂಡು ಅವನ ಜೋಡಿ ಊಟ ಮಾಡಕೊಂತ ಕುಂತ್ರ ನಾನು ಇನ್ನು ಒಂದು ರೊಟ್ಟಿ ಜಾಸ್ತಿ ತಿಂತಿದ್ದೆ. ಅಪ್ಪ ಅತ್ತಿದ್ದು ನೋಡಿರಲಿಲ್ಲ. ಅವತ್ತು ಅವನ ಜೋಡೆತ್ತಿನಲ್ಲಿ ಒಂದು ಎತ್ತು ತೀರಿಕೊಂಡಾಗ ಅವನು ಮನೆ ಮಗನೆ ತೀರಿಕೊಂಡ ಹಾಗೆ ಬಿಕ್ಕಿ, ಬಿಕ್ಕಿ ಅತ್ತ. ಆ ಚಿತ್ರ ಇನ್ನೂ ಕಣ್ಮುಂದೆ ಇದೆ.

‘ಕೈ ಮುರದ್ರ ಕಟ್ಟಬಹುದು. ಕಾಲು ಮುರದ್ರೂ ಕಟ್ಟಬಹುದು, ಮನ ಮುರದ್ರ ಯಾರು ಕಟ್ಟೋರು? ಹಾಗೇ ಯಾರ ಮನ್ಸಿಗೂ ಬ್ಯಾಸರ ಮಾಡಬ್ಯಾಡ ಒಂದು ತುತ್ತನ್ಯಾಗ ನಾಕ ಮಂದಿ ಹಂಚಗೊಂಡ ತಿನ್ರಿ... ಎಲ್ರಿಗೂ ಒಳ್ಳೆಯದ ಬಯಸ್ರಿ.. ಒಳ್ಳೆದಾತದ, ಕೆಟ್ಟದ್ದು ಮಾಡೋರಗಿ ಕೆಟ್ಟದ್ದೆ ಆತದ’ ಅಂತ ಹೇಳಿದ್ದು ಇನ್ನೂ ಮರಿಯಕ್ಕೆ ಆಗ್ತಿಲ್ಲ. ಇವತ್ತೂ ಅಪ್ಪ ಹೇಳಿರೋ ಆ ಮಾತುಗಳನ್ನು ಪಾಲಿಸತಾ ಹೋಗ್ತಾಯಿದೀನಿ.

*****

ಆತ್ಮವಿಶ್ವಾಸ ತುಂಬಿದ ಕರುಣಾಮಯಿ

ನೀಲಪ್ಪ ಅಂಗಡಿ, ಶಿಕ್ಷಣಪ್ರೇಮಿ, ಬಸವನಬಾಗೇವಾಡಿ

ನಾನು 10 ವರ್ಷದವನಿದ್ದಾಗ ತಾಯಿ ತಿರಿಹೋದರು. ತಂದೆ ನಾಗಪ್ಪ ಅವರ ಒಡನಾಟದಲ್ಲಿಯೇ ಬೆಳೆದೆ. ತಂದೆ ಮಾಡಿಕೊಡುತ್ತಿದ್ದ ರೊಟ್ಟಿ, ಪಲ್ಲೆ ಸೇರಿದಂತೆ ವಿವಿಧ ಖಾದ್ಯಗಳು ನನಗೆ ಅಚ್ಚು ಮೆಚ್ಚು.

ಬಾಲ್ಯದಲ್ಲಿ ಗೆಳೆಯೊರೊಂದಿಗೆ ಆಟ, ತುಂಟಾಟಿಕೆ ಇತ್ತು. ತಂದೆ ಹೇಳುತಿದ್ದ ಬದುಕಿನ ಪಾಠ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿತು. ಪಿಯು ನಂತರ ಮನೆ ಪಾಠ ಆರಂಭಿಸಿದ ವೇಳೆ ಚಿಕ್ಕ ವಿಷಯಕ್ಕಾಗಿ ತಂದೆ ನನಗೆ ಬೈದಿದ್ದರು. ಆದರೆ ಅವರ ಪ್ರೀತಿ, ವಾತ್ಸಲ್ಯವೇ ನನಗೆ ಪ್ರೇರಣೆಯಾಗಿದೆ.

ನರಗಳ ದೌರ್ಬಲ್ಯದಿಂದಾಗಿ ಎರಡೂ ಕಾಲುಗಳಲ್ಲಿನ ಶಕ್ತಿ ಕಳೆದುಕೊಂಡಾಗ ನನ್ನ ತಂದೆ ಆತ್ಮ ವಿಶ್ವಾಸ ತುಂಬಿದರು. ನನ್ನಲ್ಲಿನ ಇಂಗ್ಲಿಷ್ ಭಾಷಾ ಜ್ಞಾನದಿಂದ ಮನೆ ಪಾಠ ಆರಂಭಿಸಿದೆ. ಪದವಿ ನಂತರ ಕೆಲ ವರ್ಷ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದೆ. ನಂತರ ನಮ್ಮದೇಯಾದ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಿದೆ. ತಂದೆಯ ತ್ಯಾಗಮಯ ಆದರ್ಶ ಬದುಕು, ಅವರ ಕಷ್ಟದಾಯಕ ಬದುಕೇ ನನಗೆ ಆದರ್ಶವಾಗಿದೆ.

*****

ಸರಳತೆ ತಂದೆಯ ಬಳುವಳಿ

ಸಂಗರಾಜ ದೇಸಾಯಿ, ಯುವ ರಾಜಕಾರಣಿ, ಕೊಲ್ಹಾರ

ನಮ್ಮದು ದೇಸಗತಿ ಮನೆತನ. ನಮ್ಮ ತಂದೆಗೆ ನಾನೊಬ್ಬನೇ ಗಂಡು ಮಗ. ಇಬ್ಬರು ಸಹೋದರಿಯರು. ನಿತ್ಯವೂ ಮನೆ, ಜಮೀನಿನಲ್ಲಿ ನೂರಾರು ಜನ ಕೆಲಸ ಮಾಡುವವರ ಮಧ್ಯೆ ಸರಳತೆಯಿಂದ ಬೆಳೆಯಲು ಆಂತರಿಕವಾಗಿ ಪ್ರೇರೇಪಿಸಿದವರೇ ನಮ್ಮ ತಂದೆ ಕೊಲ್ಹಾರ ಪಟ್ಟಣದ ಅಣ್ಣಾಸಾಹೇಬ ದೇಸಾಯಿ.

ನೂರಾರು ಜನ ನಮ್ಮ ಕೈಕೆಳಗೆ ದುಡಿಯುತ್ತಿದ್ದರೂ, ಅವರ ಜತೆ ಕುಟುಂಬದ ಸದಸ್ಯರಂತೆ ಅವರೊಂದಿಗೆ ಬೆರೆತು, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ತಂದೆಯವರ ಗುಣಗಳಿಂದ ಪ್ರೇರಿತನಾದ ನಾನು ಬದುಕಿನಲ್ಲಿ ಸರಳತೆ ಮೈಗೂಡಿಸಿಕೊಂಡಿದ್ದೇನೆ.

ನಾನು ನನ್ನ ಸುತ್ತಮುತ್ತಲಿನ ಜೀವಿಗಳ, ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ, ಅವರನ್ನು ಪ್ರೀತಿಸುವ ಗುಣವನ್ನು ತಂದೆಯವರಿಂದ ಕಲಿತುಕೊಂಡಿದ್ದೇನೆ. ಇದೇ ಗುಣದಿಂದ ನಾನು ಸ್ವಂತವಾಗಿ ಆರಂಭಿಸಿದ ಉದ್ದಿಮೆ ಬೆಳೆದಿದೆ. ಸದ್ಯ ಬಿಜೆಪಿ ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿ ಆಗಿದ್ದೇನೆ.

ನಮ್ಮ ತಂದೆ ತಮ್ಮ 70ರ ಇಳಿವಯಸ್ಸಿನಲ್ಲಿಯೂ ಆಸ್ಟ್ರೇಲಿಯಾದಲ್ಲಿ ನಡೆದ ವಯೋವೃದ್ಧರ ವಾಕ್‌ಥಾನ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರ ನಿತ್ಯ ಕ್ರಮಬದ್ಧ ಜೀವನನ್ನು ನಾನು ಅಳವಡಿಸಿಕೊಂಡಿದ್ದು, ದೈಹಿಕ, ಮಾನಸಿಕವಾಗಿ ಸದೃಢವಾಗಿದ್ದೇನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !