ಅಪ್ಪನ ಮರೆಯದ ಮಾತು

ಶನಿವಾರ, ಜೂಲೈ 20, 2019
25 °C

ಅಪ್ಪನ ಮರೆಯದ ಮಾತು

Published:
Updated:
Prajavani

ಬಾಲ್ಯದ ಗುರು ನನ್ನ ‘ಅಪ್ಪ’

ನನ್ನ ಅಪ್ಪ ನನ್ನ ಬಾಲ್ಯದ ಗುರು. ಶಿಕ್ಷಣಕ್ಕೆ ಆತ ಮಹತ್ವ ಕೊಟ್ಟಿದ್ದರಿಂದ ನನ್ನ ಬದುಕು ಹಸನಾಗಿದೆ. ನಿನ್ನನ್ನು ಜನ ಗುರುತಿಸಬೇಕಾದರೆ ನೀನು ಏನಾದರೂ ಸಾಧನೆ ಮಾಡಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾವಂತರಿಗೆ ಸಮಾಜ ಗೌರವ ಕೊಡುತ್ತದೆ ಎಂದು ನನ್ನ ಅಪ್ಪ ಹೇಳಿದ ಮಾತನ್ನು ಎಂದಿಗೂ ಮರೆಯಲಾರೆ. ನನ್ನ ಓದಿನ ಹಿಂದೆ, ಅಪ್ಪನ ತ್ಯಾಗ, ಪ್ರೀತಿ ಇದೆ.
ಪ್ರವೀಣ ಎಂ.ಹೊಸಮನಿ, ನಾಗಠಾಣ

ಬದುಕಿಗೆ ಅರ್ಥಕೊಟ್ಟ ಅಪ್ಪ

ಅರ್ಥವೇ ಇರದ ಬದುಕಿಗೆ ಅರ್ಥ, ಸಮಾಜದೊಳಗೆ ಅಸ್ತಿತ್ವವನ್ನು ಕೊಟ್ಟವ ಅಪ್ಪ. ಈ ಅಪ್ಪ ಎಂಬ ಅಪರೂಪದ ಮನುಷ್ಯ ಅಮ್ಮಂದಿರಂತೆ ಸಲುಗೆಯಿಂದಿರುವುದು ಕಡಿಮೆ. ಹೀಗಾಗಿ ಎಲ್ಲ ಅಪ್ಪಂದಿರಿಗೆ ಸಲ್ಲಬೇಕಾದ ಬಹುಪಾಲು ಪ್ರೀತಿಯನ್ನ ಅಮ್ಮನೇ ಕಸಿದುಕೊಂಡು ಬಿಡುತ್ತಾಳೆ. ಆದರೆ, ನನ್ನ ವಿಷಯದಲ್ಲಿ ಹಾಗೇನಿಲ್ಲ. ‘ನಿಮ್ಮ ಬದುಕಿನ ಅತ್ಯಂತ ಸಂತೋಷದ ದಿನ ಯಾವುದು’ ಎಂದು ನನ್ನಪ್ಪನಿಗೆ ಕೇಳಿದರೆ, ‘ನನ್ನ ಮಗಳು ಹುಟ್ಟಿದ ದಿನವೇ ನನ್ನ ಬದುಕಿನ ಅತ್ಯಂತ ಸಂತೋಷದ ದಿನ’ ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದರೆ ನನ್ನ ಅಪ್ಪನಿಗೆ ನನ್ನಿಂದ ಏನೆಲ್ಲ ಕೊಡಲು ಸಾಧ್ಯವೋ ಎಲ್ಲವನ್ನೂ ಕೊಡಬೇಕು ಎಂದೆನಿಸುತ್ತದೆ. ಪ್ರಪಂಚಕ್ಕೆ ನನ್ನನ್ನ, ನನಗೆ ಪ್ರಪಂಚವನ್ನು ಪರಿಚಯಿಸಿದ ನನ್ನಪ್ಪನ ಪ್ರಪಂಚವೇ ನಾನು.ಇಂತಹ ಅಪ್ಪನಿಗೆ ನಾವು ಹೇಳುವ ಥ್ಯಾಂಕೂ ತೀರಾ ಅನ್ನುವಷ್ಟು ಸಣ್ಣದಾಗಿ ಬಿಡುತ್ತದೆ. -
–ಸುಕೃತಾ ಜಗದೀಶ ಪಟ್ಟಣಶೆಟ್ಟಿ, ಸಿಂದಗಿ

ತ್ಯಾಗಮಯಿ ತಂದೆ..

ನನ್ನ ಪ್ರೀತಿಯ ತಂದೆ ಅಂದ ತಕ್ಷಣವೇ ನೆನಪಾಗುವ ಮೊದಲ ಪದವೇ ತ್ಯಾಗಮಯಿ. ತಮ್ಮ ಜೀವನವನ್ನೆಲ್ಲ ನಮಗೋಸ್ಕರ ಬಿಸಿಲು, ಮಳೆ, ಚಳಿ ಯಾವುದಕ್ಕೂ ಬಗ್ಗದೇ ಹಗಲು-ಇರುಳು ಎನ್ನದೆ ದುಡಿದ ಅಪ್ಪ ನನ್ನ ಪಾಲಿಗೆ ಸರ್ವಸ್ವ. ತನಗೇನು ಬೇಕು ಎನ್ನುವುದಕ್ಕಿಂತ ತನ್ನ ಮಗಳಿಗೆ ಏನು ಬೇಕು ಅಂತ ಯೋಚಿಸುತ್ತ, ಅಮ್ಮನಿಗಿಂತ ಜಾಸ್ತಿ ಪ್ರೀತಿ ಕೊಡುವ ಶ್ರಮಜೀವಿ. ತನ್ನ ಜೀವನದಲ್ಲಿ ಕಲ್ಲು-ಮುಳ್ಳು ಏನೇ ಬಂದರೂ ಅದನ್ನು ಸಹಿಸಿಕೊಂಡು ನನ್ನ ಭವಿಷ್ಯವನ್ನು ಚಿನ್ನದಂತೆ ನಿರ್ಮಿಸಲು ಹೊರಟಿರುವ ತಂದೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

–ಅಶ್ವಿನಿ ಸಾಯಬಣ್ಣ ಮುರುಡಿ, ತಿಳಗೂಳ, ಸಿಂದಗಿ

ಅಪ್ಪ ಎಂಬ ಮಮತೆಯ ಗೂಡು

ಅಪ್ಪ ಎಂಬ ಎರಡಕ್ಷರ ನನ್ನ ಪಾಲಿಗೆ ಪುಟಾಣಿ ಮರಿಗಳನ್ನು ಮತ್ತು ಅಮ್ಮ ಎಂಬ ಜೀವವನ್ನು ರಕ್ಷಿಸುತ್ತಿರುವ ಹಕ್ಕಿಗೂಡು. ಶಿಕ್ಷಕರಾದ ನನ್ನ ಅಪ್ಪ ಮಕ್ಕಳಿಗೆ ಮುದ್ದು ಮೇಷ್ಟ್ರು. ನನಗೆ ಜೀವನದ ಪಾಠ ಕಲಿಸಿಕೊಟ್ಟ ಮರೆಯಲಾರದ ಗುರು. ಅಪ್ಪ ವಿಜಯಪುರದಲ್ಲಿ ಹೋಟೆಲ್ ಕ್ಲೀನರ್ ಆಗಿ ದುಡಿದು, ಕಷ್ಟಪಟ್ಟು ಓದಿದ್ದರಿಂದ ನಾನು ಇವತ್ತು ಈ ಹಂತದಲ್ಲಿದ್ದೇನೆ. ‘ಜೀವನದಲ್ಲಿ ಬೇಸರ ಮಾಡಿಕೊಳ್ಳದೇ ಸಾಧಿಸುವ ಛಲ ಇದ್ದರೆ ಸಾಕು ಸುಖ ಹುಡುಕಿಕೊಂಡು ಬರುತ್ತದೆ’ ಎಂಬ ಅಪ್ಪನ ಮಾತು ನನ್ನ ಜೀವನವನ್ನೇ ಬದಲಿಸಿತು.

–ಯಶಸ್ವಿ ದೇವಾಡಿಗ, ವಿಜಯಪುರ

ಅಪ್ಪನ ಬುತ್ತಿ ಮರೆಯಲಾಗದು

ಸಿಂದಗಿಯಲ್ಲಿ ಪಿಯು ಶಿಕ್ಷಣ ಮುಗಿಸಿಕೊಂಡು ವಿಜಯಪುರದ ಸರ್ಕಾರಿ ಶಿಕ್ಷರ ತರಬೇತಿಗೆ ಆಯ್ಕೆಗೊಂಡಿದ್ದೆ. ಸ್ನೇಹಿತರೊಂದಿಗೆ ಕೋಣೆಯಲ್ಲಿ ಇರುವಾಗ ನನ್ನ ಅಪ್ಪ ಬುತ್ತಿ ಕಟ್ಟಿಕೊಂಡು ಬಂದಿದ್ದ. ನನ್ನ ಸ್ನೇಹಿತರ ಪರಿಯಚಯ ಮಾಡಿಕೊಂಡು, ‘ಎಲ್ಲರೂ ಉತ್ತಮರ ಸಂಘ ಬೆಳೆಸಬೇಕು. ಶ್ರದ್ಧೆಯಿಂದ ಓದಬೇಕು. ಮುಂದೆ ನೀವೆಲ್ಲರೂ ಉತ್ತಮ ಶಿಕ್ಷಕರಾಗುತ್ತೀರಿ ಎಂದು ಹೇಳಿದ್ದ. ಅದೇ ತೆರನಾಗಿ ನನ್ನ ಸ್ನೇಹಿತರೆಲ್ಲರೂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನನ್ನ ಅಪ್ಪನ ಮಾತು ಇಂದಿಗೂ ಪ್ರೇರಣೆಯಾಗಿದೆ .

–ಬಸವರಾಜ ರಾಮಲಿಂಗಪ್ಪ ಅಗಸರ, ಚಿಕ್ಕ ಸಿಂದಗಿ

ಪ್ರೇರಣೆಯ ಬೆಳಕು ನನ್ನಪ್ಪ

ನನ್ನ ಸಾಧನೆಗೆ ನೀವೆ ಸ್ಫೂರ್ತಿ. ನೀವು ಬಾಲ್ಯದಲ್ಲಿ ಹೇಳಿದ ನೀತಿ ಕಥೆಗಳು ನನ್ನ ಜೀವನದ ಪಥವನ್ನೇ ಬದಲಿಸಿವೆ. ಪ್ರತಿ ಹಂತದಲ್ಲೂ ನನ್ನಲ್ಲಿರುವ ಅಂಕು–ಡೊಂಕುಗಳನ್ನು ತಿದ್ದುವ ಗುರು. ಇಂದು ನಾನು ಸರಿ ದಾರಿಯಲ್ಲಿ ಮುನ್ನಡೆಯಲು ನೀವು ನೀಡಿರುವ ಸಲಹೆ, ಸೂಚನೆ, ಮಾರ್ಗದರ್ಶನ ನಾನೆಂದೂ ಮರೆಯಲಾರೆ. ನನ್ನ ಬದುಕಿನುದ್ದಕ್ಕೂ ಸ್ಮರಿಸುವಂತಹ ಮಾತುಗಳು ನನ್ನಲ್ಲಿ ಇನ್ನೂ ಮಾಸಿಲ್ಲ. ಪ್ರತಿ ಕ್ಷಣ ಕ್ಷಣಕ್ಕೂ ಬಡಿದೆಬ್ಬಿಸುತ್ತಿವೆ. ಮಾನವೀಯತೆ, ನೈತಿಕತೆಯಿಂದ ಬದುಕಲು ಕಲಿಸಿದ ನಿನ್ನ ಸಂತೋಷವೇ ನನ್ನ ಸಂತೋಷ ಅಪ್ಪ.

–ಮಲಿಕ್‌ ಲಾಲಸಾಬ್ ಜಮಾದಾರ, ಚಡಚಣ

ದುಗುಡ ದೂರ ಮಾಡಿದ ತಂದೆ

ನಾನು 5ನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಶಿಕ್ಷಕರು ಹೊಡೆಯುತ್ತಾರೆ ಎಂದು ಭಯಭೀತನಾಗಿ ಶಾಲೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಆಗ ನಮ್ಮ ತಂದೆ ನನ್ನ ಮನಸ್ಸಿನಲ್ಲಿರುವ ದುಗುಡವನ್ನು ದೂರ ಮಾಡಿದರು. ನನ್ನಲ್ಲಿ ಆತ್ಮಸ್ಥೈರ್ಯ ತುಂಬಿ, ಪದವಿ ಮುಗಿಸಿ ವೃತ್ತಿಪರ ಶಿಕ್ಷಣದವರೆಗೂ ಕಲಿಯುವಂತೆ ಮಾಡಿದರು. ಅಪ್ಪನ ಆ ಆತ್ಮಸ್ಥೈರ್ಯದ ಮಾತುಗಳು ನನ್ನ ಜೀವನವನ್ನೇ ಬದಲಿಸಿದವು.
–ರವಿಕಿರಣ ಜಗದೇವಪ್ಪ ಚೌಡಿಹಾಳ, ಇಂಡಿ

ನನ್ನ ಪಾಲಿನ ದೇವರು

ಅಪ್ಪ ನನ್ನ ಪಾಲಿನ ದೇವರು ಮತ್ತು ಸರ್ವಸ್ವ. ಅವ್ವ ಭಾವನಾತ್ಮಕತೆ ಕಡೆಗೆ ಒಲವು ತೋರಿದರೆ, ಅಪ್ಪ ವಾಸ್ತವದ ಕಡೆ ಕರೆದುಕೊಂಡು ಹೋಗುತ್ತಾರೆ. ಅಪ್ಪ ನನ್ನ ಪಾಲಿನ ನಿಜವಾದ ಹೀರೋ. ಅಪ್ಪ ಒರಟ ಆದರೂ ಅವರ ಮನಸ್ಸು ಮೃದು. ಅಪ್ಪನ ಬುದ್ಧಿ ಮಾತು ಸಾಧನೆಗೆ ಪ್ರೇರಣೆ. ಅಪ್ಪನ ಪ್ರತಿಯೊಂದು ಬುದ್ಧಿವಾದ ಮಾತು ಇಂದು ಒಳ್ಳೆಯ ದಾರಿಯಲ್ಲಿ ನಡೆಯಲು ಸಹಾಯಕವಾಗಿದೆ. ಇಡೀ ಮನೆಯ ರಕ್ಷಣೆಗಾರ ನನ್ನ ಅಪ್ಪ.

–ಜಗದೀಶ ಹಟ್ಟಿ, ನಾಲತವಾಡ

ಅಪ್ಪನ ಮಾತು ಮರೆಯಲಾಗದು

ನನ್ನ ಅಪ್ಪನ ಆ ಒಂದು ಮಾತಿನಿಂದ ನನ್ನ ಜೀವನ ಬದಲಾದುದ್ದಲ್ಲ. ನನ್ನ ಅಪ್ಪನ ಪ್ರತಿಯೊಂದು ಮಾತುಗಳೂ ನನ್ನ ಬದಲಾವಣೆಗೆ ಕಾರಣವಾಗಿವೆ, ಇಂದಿಗೂ ನನ್ನಲ್ಲಿ ಗಟ್ಟಿಯಾಗಿ ಉಳಿದಿವೆ. ನನ್ನ ಉಸಿರ ಬಡಿತ, ನನ್ನ ಹೆಜ್ಜೆಯ ಪ್ರತಿರೂಪ, ನನ್ನ ನಗುವ ನಯನ ನಮ್ಮಪ್ಪ. ನಂಬಿಕೆಯ ನರನಾಡಿಗಳಿಗೆ ಸ್ಫೂರ್ತಿಯ ಚಿಲುಮೆ, ಆತ್ಮಸ್ಥೈರ್ಯ ತುಂಬಿದ ಅಪ್ಪನ ಮಾತುಗಳನ್ನು ಮರೆಯಲಾಗದು. ಯಾರಿಲ್ಲದ ಈ ದಾರಿಗೆ ನೀನೆ ಎಲ್ಲ ಅಪ್ಪ.

–ಶಶಿಕಾಂತ ಬಂಡಪ್ಪ ಅಣಕಲ್, ವಿಜಯಪುರ

ನನ್ನ ಅಪ್ಪ ಮಿತ ಭಾಷಿ

ಅಪ್ಪ ಮಿತ ಭಾಷಿ. ಆದರೆ, ಅವರ ಆ ಒಂದು ನೋಟ ನನ್ನ ಈ ಜೀವನವನ್ನೇ ಬದಲಾಯಿಸಿದೆ ಎಂದರೆ ತಪ್ಪಾಗದು. ನನ್ನ ಅಪ್ಪನ ಗೌರವ, ಆತ್ಮಾಭಿಮಾನ, ಸ್ವಾಭಿಮಾನ ನನ್ನಲ್ಲಿ ಅಡಕವಾಗಿವೆ. ನನ್ನ ಅಪ್ಪ ನನ್ನ ಆಸೆಗಳಿಗೆ ಕಡಿವಾಣ ಹಾಕದೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನ್ನ ಯಾವುದೇ ನಿರ್ಧಾರಕ್ಕೂ ಸೈ ಎನ್ನುವ ನನ್ನ ಅಪ್ಪನ ಕಣ್ಣಲ್ಲಿ ತನ್ನ ಮಗಳ ಬದಕು ಹಾಳಾಗದಿರಲಿ ಎನ್ನುವ ನೋಟವೇ ಗುರಿ ಬಿಟ್ಟು ಬೇರೆಡೆ ಗಮನ ಹರಿಸದಂತೆ ತಡೆದಿದೆ.

–ನಿವೇದಿತಾ ಸುರೇಶ ಸೋಲಾಪುರ, ವಿಜಯಪುರ

ಆತ್ಮವಿಶ್ವಾಸ ಹೆಚ್ಚಿಸಿದ ಮಾತುಗಳು

ದ್ವೀತಿಯ ಪಿಯು ಓದುವಾಗ ಜೀವನದಲ್ಲಾದ ನಿರಾಸೆಗಳಿಂದ ಬೇಸತ್ತು, ನನ್ನ ಬಗ್ಗೆಯೇ ಕೀಳರಿಮೆ ಉಂಟಾಗುತ್ತಿತ್ತು. ಖಿನ್ನತೆಗೆ ಒಳಗಾದೆ. ಕಾಲೇಜಿಗೂ ಹೋಗಲಿಲ್ಲ. ಆ ಸಂದರ್ಭದಲ್ಲಿ ಅನೇಕರು ‘ಇವನು ಉದ್ಧಾರ ಆಗಲ್ಲ’ ಎಂದು ನಗಾಡಿದರು. ಇದೇ ಸಮಕ್ಕೆ ಪರೀಕ್ಷೆ ಬಂದವು, ಬರೆಯದಿರಲು ನಿರ್ಧರಿಸಿದೆ. ನಮ್ಮ ತಂದೆಯವರಿಗೆ ಈ ವಿಷಯ ಹೇಗೊ ಗೊತ್ತಾಗಿ ‘ನೀನು ಪಾಸ್ ಆಗೇ ಆಗ್ತೀಯ ಚಿಂತೆ ಬೇಡ. ಧೈರ್ಯವಾಗಿ ಪರೀಕ್ಷೆ ಬರೆ’ ಎಂದು ಹುರಿದುಂಬಿಸಿ ಕೆಲ ಪುಸ್ತಕಗಳನ್ನು ತಂದುಕೊಟ್ಟರು. ಅಪ್ಪನ ಮಾತುಗಳು ಆತ್ಮವಿಶ್ವಾಸ ಹೆಚ್ಚಿಸಿದವು. ಧೈರ್ಯವಾಗಿ ಪರೀಕ್ಷೆ ಬರೆದೆ. ಉತ್ತಮ ಅಂಕಗಳೊಂದಿಗೆ ಪಾಸಾದೆ.

–ಶ್ರೀರಂಗ ಪುರಾಣಿಕ, ವಿಜಯಪುರ

ತಂದೆ ಪರಿಪೂರ್ಣ ಶಕ್ತಿ

ತಂದೆ ಎಂದರೆ ಜೀವನದ ಪರಿಪೂರ್ಣ ಶಕ್ತಿ. ತಾಯಿ ಜ್ಞಾನ ಕಲಿಸಿದರೆ ತಂದೆ ನಡೆಯುವುದನ್ನು, ಜೀವನದ ಮೌಲ್ಯಗಳನ್ನು ಕಲಿಸಿದ್ದಾರೆ. ತನ್ನೆಲ್ಲ ಚಿಕ್ಕ ಚಿಕ್ಕ ಆಸೆಗಳನ್ನು ತ್ಯಾಗ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ಅವರು ಹೇಳಿದ ಒಂದು ಮಾತು, ‘ಜೀವನದಲ್ಲಿ ಮೊದಲು ಸಾಧಿಸು ನಂತರ ಹಣ ಗಳಿಸು’ ಎಂಬುದನ್ನು ಈಗಲೂ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ನ್ನ ಜೀವನದ ರಿಯಲ್ ಹೀರೋ ನಮ್ಮಪ್ಪನೇ.

–ಚನ್ನಬಸಯ್ಯ ವಿರುಪಾಕ್ಷಯ್ಯ

ಅಪ್ಪ ಎಲೆಮರೆಯ ಕಾಯಿ

ಅಪ್ಪನು ಯಾವಾಗಲೂ ಎಲೆ ಮರೆಯ ಕಾಯಿಯಂತೆ ಮಕ್ಕಳ ಪ್ರಗತಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಅಪ್ಪ ಎಂದರೆ ನಮ್ಮ ಎಲ್ಲ ಕುತೂಹಲ, ಆಸೆ, ಕನಸು, ಉತ್ಸಾಹಗಳಿಗೆ ಪ್ರೋತ್ಸಾಹಕ. ನಮ್ಮ ಜೀವನ್ನಕ್ಕೆ ಒಂದು ದಿಕ್ಕು ತೋರಿಸಿ, ಉತ್ಕೃಷ್ಟವಾದ ದಾರಿಯಲ್ಲಿ ನಡೆಯುವಂತೆ ಸಾಗಲು ಮಾರ್ಗದರ್ಶನ ಮಾಡುವವ. ನನ್ನ ಜೀವನದ ಆದರ್ಶ, ನನ್ನ ಮೊದಲ ದೈವ, ನನ್ನ ಯಶಸ್ಸಿನ ಆಶಾ ಕಿರಣ, ನನ್ನ ಕನಸುಗಳಿಗೆ ಬೆಲೆ ಕೊಟ್ಟ ಸಹನಾಮೂರ್ತಿ ನಮ್ಮ ಅಪ್ಪ.

–ಮಹಾಂತೇಶ ಎನ್.ನೂಲಾನವರ, ಸಿಂದಗಿ

ಅಪ್ಪನ ಮಾತು ಮಾಣಿಕ್ಯ

ಅದೇ ತಾನೇ ಎಸ್ಸೆಸ್ಸೆಲ್ಸಿ ಮುಗಿಸಿದ್ದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮುಂದೆ ಕಲಿಯಲು ಸಿದ್ಧಗಂಗೆಗೆ ಹೊರಟು ನಿಂತಾಗ ಅಪ್ಪ ಹೇಳಿದ್ದು ಒಂದೇ ಮಾತು ‘ನಾವು ಒಂದು ಹೊತ್ತು ಉಪವಾಸ ಬಿದ್ದಾದರೂ ಓದಿಸುತ್ತೇವೆ, ನೀನು ಚೆನ್ನಾಗಿ ಓದಿ ದೊಡ್ಡ ಸಾಹೇಬ್ ಆಗಬೇಕು’ ಎಂದು. ಆ ಒಂದು ಮಾತು ನನ್ನ ದಿಕ್ಕನ್ನೇ ಬದಲಿಸಿತು. ತಂದೆಯ ಆಸೆಯಂತೆ ನಾನೀಗ ಐಎಎಸ್ ಸಿದ್ಧತೆ ನಡೆಸಿದ್ದೇನೆ. ಇಂದಲ್ಲ ನಾಳೆ ದೊಡ್ಡ ಸಾಹೇಬ್ ಆಗಿ, ಅಪ್ಪನ ಆಸೆಯನ್ನು ಈಡೇರಿಸುತ್ತೇನೆ.

–ರಾಜಶೇಖರ ಎಸ್.ಗುಬ್ಬಿ, ಮನಗೂಳಿ

ನನ್ನ ಪಾಲಿನ ದೇವರು

ನನ್ನ ಪ್ರೀತಿಯ ಅಪ್ಪ ನನ್ನ ಪಾಲಿನ ದೇವರು. ನನ್ನೆಲ್ಲ ಬೇಡಿಕೆಗಳನ್ನು ಈಡೇರಿಸುವವನು. ತಾನು ಕಷ್ಟಪಟ್ಟು ದುಡಿದು, ತನಗಾಗಿ ಏನನ್ನೂ ಬಯಸದವನು. ಅಪ್ಪನಿರಲು ನನ್ನ ಜೊತೆ ಛಲವು ನನ್ನಲ್ಲಿ ಜಿನುಗುವುದು. ‘ಮಗು ನೀನು ಎಲ್ಲವನ್ನು ಸಾಧಿಸಬಲ್ಲೆ’ ಎಂದು ಪ್ರೋತ್ಸಾಹಿಸುವನು. ನನ್ನ ಖುಷಿಯು ಅವನಿಗೆ ದಣಿವನ್ನು ಮರೆಸುವುದು ಎಂದು ಹೇಳುವನು. ಅಪ್ಪನ ಈ ಮಾತುಗಳೇ ನನ್ನ ಜೀವನಕ್ಕೆ ಸ್ಫೂರ್ತಿ. ಐ ಲವ್ ಯು ಅಪ್ಪ.

–ಶ್ರುತಿ ಚವ್ಹಾಣ, ಇಂಡಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !