ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಕ್ಕೆ ಸೂಚನೆ

7

ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಕ್ಕೆ ಸೂಚನೆ

Published:
Updated:
29-ಸಿಪಿಟಿ-03: ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ರಾಜಣ್ಣ ವಹಿಸಿದ್ದರು

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿರುವ ಕಾರಣ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ, ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಬೇಕಾಗುವಷ್ಟು ದಾಸ್ತಾನನ್ನು ಕೃಷಿ ಇಲಾಖೆ ಸಂಗ್ರಹ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬೀಜಗಳ ಜೊತೆಗೆ ರಸಗೊಬ್ಬರವನ್ನೂ ಸಹ ದಾಸ್ತಾನು ಮಾಡಬೇಕು. ಹಾಗೆಯೇ ಗ್ರಾಮೀಣ ಭಾಗದಲ್ಲಿ ರಸಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಅಂಥವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೃಷಿ ಇಲಾಖೆ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿ, ರಾಗಿ, ಭತ್ತ, ಅವರೆ, ತೊಗರಿ, ಜೋಳ ಹಾಗೂ ಕಡಲೆಕಾಯಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಸಗೊಬ್ಬರವೂ ಸಾಕಷ್ಟು ದಾಸ್ತಾನಿದೆ. ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದರು.

ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ: ಚರಂಡಿ ಸ್ವಚ್ಚತೆಗಾಗಿ ಯಂತ್ರಗಳನ್ನು ಬಳಸುವುದರಿಂದ ಹೆಚ್ಚಿನ ಹಣ ವ್ಯಯವಾಗುತ್ತದೆ. ಇದರ ಬದಲು ಖಾಯಂ ನೌಕರನ್ನು ನೇಮಿಸಿಕೊಂಡರೆ ಆಗಾಗ ಅವರನ್ನು ಬಳಸಿಕೊಂಡು ಸ್ವಚ್ಚಗೊಳಿಸುವುದು ಸುಲಭವಾಗುತ್ತದೆ ಎಂದರು.

ಚರಂಡಿ ಸ್ವಚ್ಚತೆ ಹಾಗೂ ನೈರ್ಮಲ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳು ವರ್ಷಕ್ಕೆ ರೂ. 7 ಲಕ್ಷ ಹಣ ವ್ಯಯ ಮಾಡುತ್ತಿವೆ. ಸ್ವಚ್ಛತೆಗೆ ಯಂತ್ರಗಳನ್ನು ಬಳಸುತ್ತಿರುವುದರಿಂದ ಈ ಹೊರೆ ಬರುತ್ತಿದೆ. ಇದರ ಬದಲಾಗಿ ಖಾಯಂ ಆಗಿ ಸ್ವಚ್ಚ ಮಾಡುವವರನ್ನು ನೇಮಿಸಿಕೊಂಡರೆ ಹಣದ ಉಳಿತಾಯವಾಗುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿನಲ್ಲಿ ವರದಿ ಮಂಡಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ಸವಲತ್ತುಗಳ ಬಗ್ಗೆ ಸದಸ್ಯರಿಗೆ ತಿಳಿಸಿ: ತಾಲ್ಲೂಕು ಪಂಚಾಯಿತಿಯ ಅನುದಾನದಲ್ಲಿ ಇಲಾಖೆಗಳು ನೀಡುವ ಸವಲತ್ತುಗಳ ಬಗ್ಗೆ ಮೊದಲು ಸದಸ್ಯರಿಗೆ ತಿಳಿಸುವಂತೆ ಅಧ್ಯಕ್ಷರು ತಾಕೀತು ಮಾಡಿದರು.

ಸವಲತ್ತುಗಳ ಬಗ್ಗೆ ಸದಸ್ಯರ ಸಲಹೆ ಪಡೆದು ಆನಂತರ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಕೆಲವೊಮ್ಮೆ ಸೌಲಭ್ಯ ಪಡೆಯುವವರೇ ಮತ್ತೆ ಮತ್ತೆ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿದೆ. ಅರ್ಹರಿಗೆ ಸವಲತ್ತುಗಳು ಸಿಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷೆ ಸಾಕಮಾದಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೇಶ್, ಇಒ ರಾಮಕೃಷ್ಣಪ್ಪ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !