ಆಶ್ರಮದಲ್ಲಿ ಉತ್ಸವ ಇಂದು; ಭಕ್ತರ ಮಹಾಪೂರ..!

7
ಸರ್ವಧರ್ಮ ಸಮನ್ವಯತೆಯ ತಾಣ; ಮನಗೂಳಿ ಸೂಫಿ ಸಂತರ ಆಶ್ರಮ

ಆಶ್ರಮದಲ್ಲಿ ಉತ್ಸವ ಇಂದು; ಭಕ್ತರ ಮಹಾಪೂರ..!

Published:
Updated:
Deccan Herald

ಬಸವನಬಾಗೇವಾಡಿ: ಬದುಕಿನ ಅರ್ಥ, ಸಾಮಾಜಿಕ ಜವಾಬ್ದಾರಿ, ಸತ್ಯದ ಮಾರ್ಗದಿಂದ ನಡೆಯಲು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಬೇಕು. ಮಾನವ ಕುಲ ಒಂದೇ ಎಂಬ ಭಾವನೆಯನ್ನು ಎಲ್ಲೆಡೆ ಹರಡುತ್ತಿರುವ ತಾಲ್ಲೂಕಿನ ಮನಗೂಳಿಯ ಪೀರೆ ತರೀಕತ್‌ ಹಜರತ್‌ ಸೈಯ್ಯದ್‌ ಶಾಹ ಹುಸೇನ ಪೀರ್‌ ಖಾದ್ರಿ–ಚಿಸ್ತಿ ಸೂಫಿ ಸಂತರ ಆಶ್ರಮ 17 ವರ್ಷಗಳಿಂದ ಸರ್ವ ಧರ್ಮ ಸಮನ್ವಯತೆ ಸಾರುತ್ತಿದೆ.

ಆಶ್ರಮದ ಗುರುಗಳಾದ ಸೂಫಿ ಸಂತ ಡಾ.ಎಫ್.ಎಚ್‌.ಇನಾಮದಾರ ತಂದೆಯನ್ನೇ ಆಧ್ಯಾತ್ಮಿಕ ಗುರುವನ್ನಾಗಿ ಸ್ವೀಕರಿಸಿದವರು. ಆಯುರ್ವೇದಿಕ್‌ ವೈದ್ಯಕೀಯ (ಬಿಎಎಂಎಸ್‌) ಪದವೀಧರರಾಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡು, ರೋಗಿಗಳಿಗೆ ಉಚಿತ ಸೇವೆ ನೀಡುತ್ತಿದ್ದಾರೆ.

ವಿವಿಧ ಗಿಡಮೂಲಿಕೆಗಳಿಂದ ತಾವೇ ಸಿದ್ಧಪಡಿಸಿದ್ದ 17 ಆಯುರ್ವೇದಿಕ್ ಔಷಧಿಗಳಿಗೆ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವುದು ವಿಶೇಷ. ಕ್ಷಯ, ಚರ್ಮ ರೋಗ, ಮಲಬದ್ಧತೆ, ಕ್ಯಾನ್ಸರ್‌ ಸೇರಿದಂತೆ ವಿವಿಧ ದೈಹಿಕ ಕಾಯಿಲೆಗಳಿಗೆ ಔಷಧಿ ತಯಾರಿಸಿದ್ದಾರೆ.

ಇನಾಮದಾರ ಸಿದ್ಧಪಡಿಸಿದ ಔಷಧಿಗಳ ಮಾರಾಟ ಹಾಗೂ ಸ್ವಯಾರ್ಜಿತ ಗಳಿಕೆಯಿಂದ ಮನಗೂಳಿ ಪಟ್ಟಣದಲ್ಲಿ ಆಶ್ರಮ ನಿರ್ಮಿಸಿ, ಭಕ್ತರಿಗೆ ಆಧ್ಮಾತ್ಮಿಕ ಚಿಂತನೆಗಾಗಿ ಸತ್ಸಂಗದಲ್ಲಿ ತೊಡಗಲು ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ವಿಜಯಪುರದಲ್ಲಿ ಪ್ರತಿ ಶನಿವಾರ ಮಹಿಳೆಯರಿಗೆಗಾಗಿ ಸತ್ಸಂಗ ನಡೆಸಲಾಗುತ್ತಿದೆ. ಭಾನುವಾರ ಮನಗೂಳಿ ಆಶ್ರಮದಲ್ಲಿ ಪುರುಷರಿಗಾಗಿ ಸತ್ಸಂಗ ನಡೆಸುತ್ತಿದ್ದಾರೆ.

ಆಶ್ರಮದಡಿಯಲ್ಲಿನ ಹಜರತ್‌ ಹುಸೇನಪೀರ್‌ ಫೌಂಡೇಷನ್‌ ನೇತೃತ್ವದಲ್ಲಿ ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿಕ್ಷಣದಲ್ಲಿ ಸತ್ಯದ ಅರಿವು ಸೇರಿದಂತೆ ವಿದ್ಯಾರ್ಥಿಗಳು ಸನ್ಮಾರ್ಗದತ್ತ ಸಾಗಬೇಕು ಎಂಬ ಸಂದೇಶ ಸಾರಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಯಲ್ಲಿ ಮನ, ಮನೆ ಬೆಳಗುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಬ್ಬಗಳ ಮಹತ್ವ ಸಾರುವ ಕಾರ್ಯದಲ್ಲಿ ಈ ಫೌಂಡೇಷನ್‌ ತೊಡಗಿಕೊಂಡಿದೆ.

‘ಸೂಫಿ ಸಂತ ಡಾ.ಎಫ್.ಎಚ್‌.ಇನಾಮದಾರ ಸಾನ್ನಿಧ್ಯದಲ್ಲಿ ನಡೆಯುವ ಸತ್ಸಂಗದಲ್ಲಿ ಧ್ಯಾನದ ಮಹತ್ವ, ಆಧ್ಯಾತ್ಮ ವಿಚಾರದಿಂದ ಜೀವನ ಪಾವನ, ಸತ್ಯದ ಮಾರ್ಗದಿಂದ ನಡೆಯುವುದು, ಪ್ರತಿಯೊಬ್ಬರಲ್ಲಿ ಇರಬೇಕಾದ ಸಾಮಾಜಿಕ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚಿಂತನ–ಮಂಥನ ನಡೆಯುತ್ತದೆ’ ಎಂದು ಆಶ್ರಮದ ಭಕ್ತರಲ್ಲಿ ಒಬ್ಬರಾದ ವಿಜಯಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ಯು.ಎನ್‌.ಕುಂಟೋಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ವರ್ಷದಂತೆ ಆಶ್ರಮದಲ್ಲಿ ಆ 4ರ ಶನಿವಾರ ಜರುಗುವ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಅಕ್ಕಲಕೋಟ, ಮೈಂದರಗಿ, ದುದನಿ, ಸೊಲ್ಲಾಪುರ, ಮುಂಬೈ, ಪುಣೆಯ ಅಪಾರ ಭಕ್ತರು ಪಾಲ್ಗೊಳ್ಳಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !