ದೋಸ್ತಿಗೆ ಎಳ್ಳು-ನೀರು; ಕುಸ್ತಿಗೆ ಸಜ್ಜು..!

7
ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರದ ಚುನಾವಣೆ; ಅಖಾಡದಲ್ಲಿ ಸಂಭವನೀಯ ಕಲಿಗಳು..!

ದೋಸ್ತಿಗೆ ಎಳ್ಳು-ನೀರು; ಕುಸ್ತಿಗೆ ಸಜ್ಜು..!

Published:
Updated:
Deccan Herald

ವಿಜಯಪುರ: ನಾಮಪತ್ರ ಸಲ್ಲಿಕೆಗೂ ಮುನ್ನವೇ, ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ಒಂದು ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ರಂಗೇರಿದೆ.

ಕುತೂಹಲಕ್ಕೆ ಅವಕಾಶ ನೀಡದೆ ಬಿಜೆಪಿ ಗುರುವಾರವೇ ತನ್ನ ಅಭ್ಯರ್ಥಿ ಗೂಳಪ್ಪ ಶಟಗಾರ ಕೈಗೆ ಬಿ ಫಾರ್ಮ್‌ ಕೊಟ್ಟು ಕಳುಹಿಸಿದ್ದರೆ; ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್‌ ಸಹ ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸುವುದು ಖಚಿತಗೊಂಡಿದೆ.

ಕಾಂಗ್ರೆಸ್‌–ಜೆಡಿಎಸ್‌ ದೋಸ್ತಿ ಏರ್ಪಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಮುಖಂಡರಿಗೆ ಇದರಿಂದ ಮರ್ಮಾಘಾತವಾಗಿದೆ. ಮೂರು ಪಕ್ಷಗಳ ಸ್ಥಳೀಯ ಮುಖಂಡರು ಜೆಡಿಎಸ್‌ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಇದೀಗ ತಮ್ಮ ಎಂದಿನ ‘ಹೊಂದಾಣಿಕೆ’ ರಾಜಕಾರಣದ ಮೊರೆಯಿಟ್ಟಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿಯಾದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ ತಮ್ಮ ಹಳೆಯ ಒಡನಾಟ ಬಳಸಿಕೊಂಡು ಶುಭ ಶುಕ್ರವಾರದಂದು ಪಕ್ಷದ ಬಿ ಫಾರ್ಮ್‌ ಪಡೆದಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಐವರು ಆಕಾಂಕ್ಷಿಗಳು ಸ್ಪರ್ಧೆಗೆ ಒಲವು ತೋರಿ ಅರ್ಜಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹಾಂತೇಶ ಉದುಪುಡಿ, ಬಸವರಾಜ ಖೋತ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಆರ್ಥಿಕವಾಗಿ ಬಲಾಢ್ಯರಾಗಿದ್ದರೂ, ಸ್ಥಳೀಯ ಹೊಂದಾಣಿಕೆ ರಾಜಕಾರಣದಲ್ಲಿ ಅವಕಾಶ ಗಿಟ್ಟಿಸುವುದು ಕಷ್ಟವಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲೇ ಕೇಳಿಬಂದಿದೆ.

ಇನ್ನೂ ವಿಜಯಪುರ ಜಿಲ್ಲೆಯಿಂದ ಯಥಾಪ್ರಕಾರ ಮಾಜಿ ಶಾಸಕ ಶರಣಪ್ಪ ಸುಣಗಾರ ಮಲ್ಲಿಕಾರ್ಜುನ ಖರ್ಗೆ ಮೂಲಕ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸಿದ್ದರಾಮಯ್ಯ ಆಪ್ತತೆ, ವಿಜಯಪುರ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಬಣ ರಾಜಕಾರಣ ತನಗೆ ವರವಾಗಬಹುದು ಎಂಬ ನಿರೀಕ್ಷೆಯಲ್ಲೇ ಟಿಕೆಟ್‌ ಲಾಬಿ ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಖಂಡರು ಸಹ ಲೋಣಿ ಬೆಂಬಲಿಸುತ್ತಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ, ಬಿಲ್ಡರ್‌, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಬಿ.ಪಾಟೀಲ ಲೆಕ್ಕಾಚಾರದೊಂದಿಗೆ ಅಖಾಡಕ್ಕಿಳಿಯಲು ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಈಗಾಗಲೇ ಪಕ್ಷದ ಟಿಕೆಟ್‌ ಅಂತಿಮಗೊಳಿಸಿಕೊಂಡಿದ್ದಾರೆ ಎಂಬ ಮಾತುಗಳೇ ಪ್ರಬಲವಾಗಿ ಕೇಳಿ ಬರುತ್ತಿವೆ. ವರಿಷ್ಠರ ಒಲವು ಸುನೀಲಗೌಡ ಪರವಿದ್ದು, ಎಂ.ಬಿ.ಪಾಟೀಲ ನಿರ್ಧಾರವೇ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.

ಬಿಜೆಪಿ ಪಂಚಮಸಾಲಿ ಸಮಾಜದ ಅಭ್ಯರ್ಥಿಯನ್ನು ಘೋಷಿಸಿದ್ದರೆ, ಜೆಡಿಎಸ್‌ ಗಾಣಿಗ ಸಮಾಜದ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ಕಾಂಗ್ರೆಸ್‌ ಇದೀಗ ಈ ಎರಡೂ ಸಮುದಾಯದ ಅಭ್ಯರ್ಥಿಗಳಿಗೆ ಪರ್ಯಾಯವಾಗಿ ಅಭ್ಯರ್ಥಿ ಶೋಧಿಸಬೇಕಿರುವುದು ಸುನೀಲಗೌಡ ಪಾಟೀಲಗೆ ವರವಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ಸಿಗನಿಗೆ ಬಿಜೆಪಿ ಮಣೆ:

ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ಮೂಲತಃ ಕಾಂಗ್ರೆಸ್ಸಿಗ. ಮೂರು ಬಾರಿ ವಿಜಯಪುರ ನಗರಸಭೆ ಸದಸ್ಯರಾಗಿದ್ದು, 2000ದಿಂದ 2002ರವರೆಗೂ ನಗರಸಭೆಯ ಅಧ್ಯಕ್ಷರಾಗಿದ್ದರು. ನಂತರದ ಅವಧಿಯಲ್ಲಿ 2002ರಿಂದ 2004ರವರೆಗೂ ಆಗಿನ ಬಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು.

ಇದೀಗ ವಿಜಯಪುರ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ. ಬರಗಾಲ ನಿವಾರಣಾ ಕೇಂದ್ರದ ಅಧ್ಯಕ್ಷ. ವಿಧಾನಸಭಾ ಚುನಾವಣೆಗೂ ಪೂರ್ವದಲ್ಲೇ ಕಾಂಗ್ರೆಸ್‌ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಹೌದು. ಬಿಜೆಪಿಗೆ ಸೇರ್ಪಡೆಯಾದ ಕಡಿಮೆ ಅವಧಿಯಲ್ಲಿ ವಿಧಾನ ಪರಿಷತ್‌ ಸದಸ್ಯತ್ವದ ಚುನಾವಣೆಗೆ ಟಿಕೆಟ್‌ ಗಿಟ್ಟಿಸಿದ್ದಾರೆ.

ಮತ್ತೊಮ್ಮೆ ಅದೃಷ್ಟ ಪಣಕ್ಕೆ ಹಲಸಂಗಿ

ಪಂಚಾಯ್ತಿ ರಾಜಕಾರಣದಿಂದ ರಾಜಕೀಯ ಜೀವನ ಆರಂಭಿಸಿದ ಬಿ.ಜಿ.ಪಾಟೀಲ ಹಲಸಂಗಿ ಜೆಡಿಎಸ್‌ನಲ್ಲೇ ಗುರುತಿಸಿಕೊಂಡು, ಅಲ್ಲೇ ಉಳಿದವರು. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಭೀಮಾ ನದಿಗೆ ಬ್ಯಾರೇಜ್‌ ನಿರ್ಮಿಸುವ ಹೋರಾಟದಲ್ಲಿ ಸಕ್ರಿಯರಾಗಿದ್ದವರು.

ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ವಿಧಾನಪರಿಷತ್‌ನ ದ್ವಿಸದಸ್ಯ ಕ್ಷೇತ್ರಕ್ಕೆ 1998ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದವರು. 2005ರಲ್ಲಿ ಮತ್ತೆ ಇದೇ ಚುನಾವಣೆಗೆ ಸ್ಪರ್ಧಿಸಿದರೂ ಎರಡು ಮತಗಳಿಂದ ಪರಾಭವಗೊಂಡ ಬಳಿಕ ರಾಜಕಾರಣದಲ್ಲಿ ಅಷ್ಟೇನು ಸಕ್ರಿಯರಾಗಿರಲಿಲ್ಲ.

ಇದೀಗ ಜಿಲ್ಲೆಯಿಂದ ಇಬ್ಬರು ಜೆಡಿಎಸ್‌ ಶಾಸಕರು ಆಯ್ಕೆಯಾಗಿದ್ದು, ಎಂ.ಸಿ.ಮನಗೂಳಿ ಸಚಿವರಿರುವುದರಿಂದ ಗೆಲುವಿನ ಸಾಧ್ಯಸಾಧ್ಯತೆಯ ಲೆಕ್ಕಾಚಾರ ಹಾಕಿಕೊಂಡು ಹಲಸಂಗಿ ಜೆಡಿಎಸ್‌ ಬಿಫಾರ್ಮ್‌ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !