ಸಂಸದರ ವಿರುದ್ಧ ಹೋರಾಟ

ಗುರುವಾರ , ಜೂಲೈ 18, 2019
22 °C
ವಿಐಎಸ್‌ಎಲ್‌ ಮಾರಾಟ ಪ್ರಕ್ರಿಯೆಗೆ ಕೇಂದ್ರ ಒತ್ತು

ಸಂಸದರ ವಿರುದ್ಧ ಹೋರಾಟ

Published:
Updated:
Prajavani

ಭದ್ರಾವತಿ: ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಕುರಿತಾಗಿ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವ ನಿರ್ಧಾರ ಮಾಡಿರುವ ಕಾರಣ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕ್ಷೇತ್ರಕ್ಕೆ ಬಾರದಂತೆ ತಡೆಯುವ ಹೋರಾಟ ನಡೆಸಿ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.

20 ವರ್ಷಗಳಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರು ಇಲ್ಲಿನ ಕಾರ್ಖಾನೆಗಳ ವಿಷಯದಲ್ಲಿ ಬರೀ ಸುಳ್ಳಿನ ಭರವಸೆ ನೀಡುತ್ತಾ ಬಂದಿದ್ದು ಒಂದು ಸತ್ಯಾಂಶವನ್ನು ಸಹ ತೆರೆದಿಡದೆ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಇದು ಇಲ್ಲಿನ ಜನರ ಬದುಕಿನ ಪ್ರಶ್ನೆ. ಇದನ್ನರಿತು ಕಾರ್ಖಾನೆಯ ಹಿತವನ್ನು ಕಾಪಾಡಬೇಕಾದ ಅಪ್ಪ, ಮಗ ಅದನ್ನು ಮರೆತು ಇಲ್ಲಸಲ್ಲದ ಸುಳ್ಳಿನ ಮಾತುಗಳನ್ನು ಹೇಳುವ ಮೂಲಕ ಇಲ್ಲಿನ ಜನರಿಗೆ ಮೋಸ ಮಾಡುತ್ತಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ, ಅವರನ್ನು ಕ್ಷೇತ್ರಕ್ಕೆ ಬಾರದಂತೆ ತಡೆಯುವ ಹೋರಾಟದಲ್ಲಿ ಮುಂದೆ ಇರುತ್ತೇನೆ’ ಎಂದು ಭರವಸೆ ಹೇಳಿದರು.

‘ನಾನು ಬಿಜೆಪಿ ವಿರೋಧಿಯಲ್ಲ, ಬದಲಾಗಿ ಅಪ್ಪ, ಮಕ್ಕಳ ಸುಳ್ಳಿನ ರಾಜಕಾರಣದ ವಿರೋಧಿ. ಈಗ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಉಳಿಯಲು ಸಾಧ್ಯವಿಲ್ಲ ಎಂದು ತಿಳಿದಿರುವ ಸಂಸದರು ಅದನ್ನು ಸಹಭಾಗಿತ್ವದಲ್ಲಿ ನಡೆಸಿದರೆ ಒಪ್ಪಿಕೊಳ್ಳುವುದು ಎಂಬ ಮಾತನ್ನು ತಮ್ಮ ಆಪ್ತವಲಯದಲ್ಲಿ ತೇಲಿಬಿಡುವ ಕೆಲಸ ನಡೆಸಿದ್ದಾರೆ. ಈ ರೀತಿ ಮೋಸದ ಸುಳ್ಳಿನ ರಾಜಕಾರಣ ನಡೆಸುವರಿಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಇಲ್ಲಿನ ಜನರು ಮಾಡಬೇಕು’ ಎಂದು ಮನವಿ ಮಾಡಿದರು.

‘ಈ ಇಬ್ಬರು ಕಾರ್ಖಾನೆ ಮುಂಭಾಗವಿಐಎಸ್ಎಲ್ ಮುಂದುವರೆಸಲು ಬದ್ಧರಿದ್ದೇವೆ ಎಂದು ಬಹಿರಂಗವಾಗಿ ಹೇಳಲಿ ಆ ರೀತಿ ಮಾಡಿದಲ್ಲಿ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ’ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ‘ಎಂಪಿಎಂ ಕಾರ್ಖಾನೆಗೆ ಅವಶ್ಯವಿದ್ದ ₹ 300 ಕೋಟಿ ಅನುದಾನ ನೀಡಿದ್ದರೆ ಇಂದಿಗೂ ಅದು ಉತ್ತಮ ಉದ್ದಿಮೆಯಾಗಿ ಮುನ್ನೆಡೆಯುತ್ತಿತ್ತು. ಆದರೆ ಅದನ್ನು ಮಾಡದ ಅವರು ಈಗ ಅದನ್ನು ಮುಚ್ಚುವಂತೆ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಕತ್ತೆಗೆ ಗೆಲುವು: ಹಿಂದೆ ಕಾಂಗ್ರೆಸ್ ಪಕ್ಷದಿಂದ ಕತ್ತೆ ನಿಂತರೂ ಗೆಲ್ಲುತ್ತಿದೆ ಎಂಬ ಮಾತಿತ್ತು. ಈಗ ಅದು ಬಿಜೆಪಿ ಪಕ್ಷಕ್ಕೆ ಅನ್ವಯಿಸುತ್ತದೆ. ಏನೂ ಕೆಲಸ ಮಾಡದ ಸುಳ್ಳಿನ ರಾಜಕಾರಣ ಮಾಡಿದ ಜನರನ್ನು ಮೋದಿ ಹೆಸರಿನಲ್ಲಿ ಇಲ್ಲಿನ ಮತದಾರರು ಗೆಲ್ಲಿಸುವ ಮೂಲಕ ಮೋಸ ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

ಜೆಡಿಎಸ್ ಅದ್ಯಕ್ಷ ಆರ್. ಕರುಣಾಮೂರ್ತಿ, ಟಿ.ಡಿ. ಶ್ರೀಧರ್, ಕರಿಯಪ್ಪ, ಪೀರ್ ಷರೀಫ್, ಎಂ. ರಾಜು, ಬದರಿನಾರಾಯಣ, ಎಪಿಎಂಸಿ ನಿರ್ದೇಶಕಿ ಸುಜಾತ, ನಗರಸಭೆ ಮಾಜಿ ಅಧ್ಯಕ್ಷೆ ಸುಧಾಮಣಿ, ವಿಶಾಲಾಕ್ಷಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !