ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ ಶಾಸಕ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು

Last Updated 27 ಡಿಸೆಂಬರ್ 2019, 16:05 IST
ಅಕ್ಷರ ಗಾತ್ರ

ವಿಜಯಪುರ: ಚುನಾವಣೆ ಸಂದರ್ಭದಲ್ಲಿ ಸೂಚಕರ ನಕಲಿ ಸಹಿ ಮಾಡಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪದ ಮೇಲೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸೇರಿ ಮೂರು ಮಂದಿಯ ವಿರುದ್ಧ ಇಂಡಿ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಶಾಸಕರು ಪ್ರಮುಖ ಆರೋಪಿಯಾಗಿದ್ದು, ಇವರ ಬೆಂಬಲಿಗರಾದ ಮಲ್ಲನಗೌಡ ಪಾಟೀಲ, ಜೆಟ್ಟೆಪ್ಪ ರವಳಿ ಅವರನ್ನು ಎರಡು ಮತ್ತು ಮೂರನೇ ಆರೋಪಿಗಳನ್ನಾಗಿಸಲಾಗಿದೆ.

ಏನಿದು ಪ್ರಕರಣ?: ಇಂಡಿ ತಾಲ್ಲೂಕು ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ 2019ರ ಫೆಬ್ರುವರಿಯಲ್ಲಿ ಚುನಾವಣೆ ನಡೆದಿತ್ತು. ನಿರ್ದೇಶಕರ ಮೂರು ಸ್ಥಾನಗಳಿಗೆ, ಮೂವರು ಆರೋಪಿತರು ಹಾಗೂ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರ ಪುತ್ರ ಸಂಕೇತ ಬಗಲಿ ಕಣದಲ್ಲಿದ್ದರು.

‘ನಾಮಪತ್ರ ಹಿಂಪಡೆಯಲು ಫೆ. 18 ಕೊನೆಯ ದಿನವಾಗಿತ್ತು. ಆ ದಿನ ಮಲ್ಲನಗೌಡ ಪಾಟೀಲ ಅವರು ವಿಜಯಪುರದಲ್ಲಿರುವ ನಮ್ಮ ನಿವಾಸಕ್ಕೆ ತೆರಳಿ, ನಿಮ್ಮ ಪುತ್ರ ಸಂಕೇತ ಅವರ ನಾಮಪತ್ರ ಹಿಂಪಡೆಯಬೇಕು’ ಎಂದು ತಂದೆಯ ಮೇಲೆ ಒತ್ತಡ ಹಾಕಿದ್ದಾರೆ. ಇದಕ್ಕೆ ಅವರು ನಿರಾಕರಿಸಿದಾಗ, ‘ಶಾಸಕರು ನಿಮ್ಮನ್ನು ನೋಡಿಕೊಳ್ಳುತ್ತಾರೆ’ ಎಂದು ಜೀವಬೆದರಿಕೆ ಹಾಕಿದ್ದಾರೆ. ನಾಮಪತ್ರ ಹಿಂಪಡೆಯದಿದ್ದರೂ ಮೂವರು ಆರೋಪಿಗಳು ಸೇರಿಕೊಂಡು, ನನ್ನ ಸೂಚಕ ಹಾಗೂ ಸಹೋದರ ಡಾ.ಸಂತೋಷ ಬಗಲಿ ಇವರ ಸಹಿಯನ್ನು ತಾವೇ ಮಾಡಿ, ನಾಮಪತ್ರವನ್ನು ಹಿಂಪಡೆದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಸಂಕೇತ ಬಗಲಿ ದೂರಿನಲ್ಲಿ ತಿಳಿಸಿದ್ದಾರೆ.

‘ಫೆಬ್ರುವರಿಯಲ್ಲೇ ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದೆವು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆಗ ನಾವು ಕರ್ನಾಟಕ ಹೈಕೋರ್ಟ್‌ ಕಲಬುರ್ಗಿ ಪೀಠದ ಮೆಟ್ಟಿಲೇರಿದ್ದೆವು. ಇದೀಗ ಹೈಕೋರ್ಟ್‌ ಸೂಚನೆಯಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಸಂಕೇತ ಬಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT