ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನೀಡಿ

7
ಬೆಳೆಗಾರರ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರ ಆಗ್ರಹ

ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನೀಡಿ

Published:
Updated:
ಸುದ್ದಿಗೋಷ್ಠಿಯಲ್ಲಿ ಗೌತಮ್‌ ಗೌಡ ಮಾತನಾಡಿದರು

ರಾಮನಗರ: ರೇಷ್ಮೆ ಗೂಡಿಗೆ ಕನಿಷ್ಠ ವೈಜ್ಞಾನಿಕ ಬೆಲೆ ಮತ್ತು ಬೆಂಬಲ ಬೆಲೆ ನಿಗದಿಪಡಿಬೇಕು ಎಂದು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಗೌತಮ್‌ಗೌಡ ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಷ್ಟಪಟ್ಟು ಹುಳು ಸಾಕಾಣಿಕೆ ಮಾಡಿ, ಗೂಡು ಕಟ್ಟಿಸಿ, ಮಾರುಕಟ್ಟೆಗೆ ತಂದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಲಿದ್ದಾರೆ ಎಂದು ಎಚ್ಚರಿಸಿದರು.

ರೇಷ್ಮೆ ಗೂಡಿನ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಿಂದೆ ಬೆಲೆ ಕುಸಿತವಾದಾಗ ರಾಜ್ಯ ಸರ್ಕಾರ ಸಲಹಾ ಸಮಿತಿಯನ್ನು ರಚಿಸಿತ್ತು. ಇದರಿಂದ ರೈತರಿಗೆ ಯಾವುದೇ ರೀತಿಯ ಅನುಕೂಲವಾಗಲಿಲ್ಲ. ಬಸವರಾಜ್‌ ಸಮಿತಿ ವರದಿಯ ಪ್ರಕಾರ ಒಂದು ಕೆ.ಜಿ ರೇಷ್ಮೆಗೂಡನ್ನು ಉತ್ಪಾದನೆ ಮಾಡಲು ₹300 ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈಗ ಒಂದು ಕೆ.ಜಿ ರೇಷ್ಮೆಗೂಡಿಗೆ ₹120 ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಜಣ್ಣ ಮಾತನಾಡಿ, ರಾಮನಗರವನ್ನು ರೇಷ್ಮೆ ನಗರ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ರೇಷ್ಮೆ ಬೆಳೆಗಾರರಿಗೆ ಯಾವುದೇ ಅನುಕೂಲಗಳು ಸಿಗುತ್ತಿಲ್ಲ. ಗುಣಮಟ್ಟದ ರೇಷ್ಮೆಗೂಡನ್ನು ಬೆಳೆದರೂ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂದು ತಿಳಿಸಿದರು.

ಕಾರ್ಯದರ್ಶಿ ಕೆ. ರವಿ ಮಾತನಾಡಿ ಸರ್ಕಾರದಿಂದ ನೂಲು ಬಿಚ್ಚಾಣಿಕೆ ಕೇಂದ್ರಗಳನ್ನು ತೆರೆಯಬೇಕು. ರೇಷ್ಮೆ ಬೆಳೆಗಾರರು ಸರ್ಕಾರ, ಮಧ್ಯವರ್ತಿಗಳು, ನೂಲು ಬಿಚ್ಚಾಣಿಕೆದಾರರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ಸಮಿತಿ ವತಿಯಿಂದ ಇದೇ 21ರಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂಭಾಗದಲ್ಲಿ ಅನಿರ್ದಿಷ್ಟಾವದಿ ಕಾಲ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮಿತಿಯ ಪದಾಧಿಕಾರಿಗಳಾದ ಸಿದ್ದರಾಜು, ಕೃಷ್ಣಪ್ಪ, ಲೀಲಾಮೂರ್ತಿ, ಕುಮಾರಸ್ವಾಮಿ, ಮಹೇಶ, ಶಿವರಾಮ್, ಚಂದ್ರಯ್ಯ, ಶೇಖರ್, ಸಂಜಯ್‌, ಉಮೇಶ್, ಅನಿಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !