ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನ 26ರಿಂದ

ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನ ಕಾಲ ನೋಡುಗರಿಗೆ ಹಬ್ಬ: ಉಚಿತ ಪ್ರವೇಶ
Last Updated 25 ಜನವರಿ 2019, 13:28 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಗೆಬಗೆಯ ಹೂವುಗಳು ನೋಡುಗರ ಗಮನ ಸೆಳೆಯಲಿವೆ. ಜೊತೆಗೆ ಕೃಷಿ ಸಾಧಕರ ಪರಿಚಯ, ಕೃಷಿ ವಿಧಾನಗಳ ಪ್ರಾತ್ಯಕ್ಷಿಕೆಯೂ ಇರಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ತೋಟಗಾರಿಕಾ ಸಂಘದ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಇದೇ 26ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಪ್ರದರ್ಶನಕ್ಕಾಗಿ ಗುರುವಾರ ಬೆಳಗ್ಗೆಯಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ನಡೆದಿತ್ತು. ಸೇವಂತಿಗೆ ಹಾಗೂ ಗುಲಾಬಿ ಹೂಗಳಿಂದ ಕೆಂಗಲ್‌ ಆಂಜನೇಯ ದೇವಸ್ಥಾನ ಗೋಪುರ ಮಾದರಿಗೆ ಕಲಾವಿದರು ಅಂತಿಮ ಸ್ಪರ್ಶ ನೀಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

‘ಈ ಬಾರಿಯ ಪ್ರದರ್ಶನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಾದರಿಗಳು ನೋಡುಗರ ಮನಸೂರೆಗೊಳ್ಳಲಿವೆ. ಆಂಜನೇಯ ಸ್ವಾಮಿ ಹಾಗೂ ಎಂ.ಎಚ್. ಮರಿಗೌಡರ ಸಿರಿಧಾನ್ಯ ಕಲಾಕೃತಿ, ಬಾಳೆದಿಂಡಿನಲ್ಲಿ ಮೂಡಿರುವ ಅಯ್ಯಪ್ಪನ ಪಡಿ, ಪುಷ್ಪ ರಂಗೋಲಿ, ವಿವಿಧ ತರಕಾರಿಗಳಲ್ಲಿ ಚನ್ನಪಟ್ಟಣದ ಗೊಂಬೆಗಳ ಕೆತ್ತನೆ ಕಲಾಕೃತಿಗಳು, ಲಂಬ ವಿದ್ಯಾನಗಳು ಗಮನ ಸೆಳೆಯಲಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮಹಿಲನ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಶನಿವಾರ ಬೆಳಿಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮೂರು ದಿನದಂದು ಸಂಜೆ 6.30ರವರೆಗೆ ಪ್ರದರ್ಶನವು ಇರಲಿದೆ. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನಾ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ ರೈತರಿಗೆ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಾಂತ್ರಿಕ ಮಾಹಿತಿ ನೀಡಲಾಗುವುದು. ಹೈಡ್ರೋಪೋನಿಕ್ಸ್ ಮಾದರಿ, ಅಣಬೆ ಕೃಷಿ, ಜೇನು ಸಾಕಾಣಿಕೆ, ಕೈತೋಟ ಹಾಗೂ ತಾರಸಿ ತೋಟದ ನಿರ್ವಹಣೆ ಗಳ ಪ್ರಾತ್ಯಕ್ಷಿಕೆಗಳು ಇರಲಿವೆ. ತೋಟಗಾರಿಕೆ ಕಸಿಗಿಡಗಳ ಮಾರಾಟ ಮಾಡಲು ಸಸ್ಯ ಸಂತೆ, ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ ನಡೆಯಲಿದೆ. ವಿವಿಧ ಮಳಿಗೆಗಳ ಮೂಲಕ ರೈತರಿಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಾಂತ್ರಿಕ ಮಾಹಿತಿ ಒದಗಿಸಲಾಗುವುದು. ತೋಟಗಾರಿಕೆಯಲ್ಲಿ ಬಳಸುವ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ದ್ರಾಕ್ಷರಸ ಮಂಡಳಿಯಿಂದ ವಿವಿಧ ವೈನ್ಸ್‌ಗಳ ಪ್ರದರ್ಶಿಕೆ, ಮಾವು ಅಭಿವೃದ್ಧಿ ಮಂಡಳಿಯಿಂದ ಮಳಿಗೆ ಸ್ಥಾಪಿಸಿ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೆಲ್ಫಿ ಸ್ಪಾಟ್‌: ಪ್ರದರ್ಶನದಲ್ಲಿ ವೀಕ್ಷಕರಿಗಾಗ ಸೆಲ್ಫಿ ಸ್ಪಾಟ್‌ ತೆಗೆಯುವ ಬಗ್ಗೆಯೂ ಚಿಂತನೆ ನಡೆದಿದೆ. ಸ್ಥಳೀಯ ರೈತರ ಜೊತೆಗೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರು ವೀಕ್ಷಣೆ ಮಾಡಬಹುದಾಗಿದೆ ಎಂದರು.

ಜಿ.ಪಂ. ಸದಸ್ಯ ಶಂಕರ್, ಉಪ ಕಾರ್ಯದರ್ಶಿ ಉಮೇಶ್‌, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ ಇದ್ದರು.

ಸುಗ್ಗಿ ಉತ್ಸವ
ಕಾರ್ಯಕ್ರಮದ ವೇದಿಕೆಯಲ್ಲಿಯೇ ಸುಗ್ಗಿ ಉತ್ಸವವು ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಯಶಸ್ವಿ ಕೃಷಿಕರ ಸಾಧನೆಗಳನ್ನು ಇತರರಿಗೆ ಪರಿಚಯ ಮಾಡಿಕೊಡಲಾಗುವುದು. ಅಂತಹ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಿಇಒ ಮಾಹಿತಿ ನೀಡಿದರು.

ಪ್ರದರ್ಶನದ ವಿಶೇಷತೆಗಳು
* ಹೂವುಗಳಿಂದ ಅಲಂಕರಿಸಿದ ಕೆಂಗಲ್‌ ಆಂಜನೇಯ ದೇಗುಲದ ಮಾದರಿ
* ಸಿರಿಧಾನ್ಯದಲ್ಲಿ ಗಣ್ಯರ ಕಲಾಕೃತಿ ರಚನೆ
* ಆಕರ್ಷಕ ತರಕಾರಿ ಕೆತ್ತನೆ ಕೃತಿಗಳ ಪ್ರದರ್ಶನ
* ಕೃಷಿ, ತೋಟಗಾರಿಕೆ ಸಂಬಂಧಿ ಪ್ರಾತ್ಯಕ್ಷಿಕೆಗಳು
* ಸಿರಿಧಾನ್ಯ ಮೇಳ: ವಿವಿಧ ವೈನ್‌ಗಳ ಪ್ರಾತ್ಯಕ್ಷಿಕೆ
* ಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT