ನಿಸರ್ಗ ಚಿಕಿತ್ಸೆಗೆ ಬಸವನಾಡಿನತ್ತ ವಿದೇಶಿಗರು

7
ಬಿಎಲ್‌ಡಿಇ ಸಂಸ್ಥೆಯ ಎವಿಎಸ್‌ ಆಯುರ್ವೇದ ಮಹಾವಿದ್ಯಾಲಯ

ನಿಸರ್ಗ ಚಿಕಿತ್ಸೆಗೆ ಬಸವನಾಡಿನತ್ತ ವಿದೇಶಿಗರು

Published:
Updated:
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್‌ ಆಯುರ್ವೇದ ಮಹಾವಿದ್ಯಾಲಯ ಕಟ್ಟಡ

ವಿಜಯಪುರ: ಆರೂವರೆ ದಶಕಗಳಿಂದ ಅವಿಭಜಿತ ಜಿಲ್ಲೆಯ ಜನರಿಗೆ ಆಯುರ್ವೇದ ಚಿಕಿತ್ಸೆ ಒದಗಿಸುತ್ತಿರುವ ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್‌ ಆಯುರ್ವೇದ ಮಹಾವಿದ್ಯಾಲಯ, ಇದೀಗ ರಾಜ್ಯದ ಗಣ್ಯರೂ ಸೇರಿದಂತೆ ವಿದೇಶಿಗರಿಗೂ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿದೆ.

1955ರಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಬಾಗಲಕೋಟ ರಸ್ತೆಯ ವಿದ್ಯಾನಗರದಲ್ಲಿ ಜನ್ಮತಾಳಿದ ಮಹಾವಿದ್ಯಾಲಯ ಕಾರಣಾಂತರಗಳಿಂದ ಸ್ಥಗಿತಗೊಂಡಿತು. ನಂತರ 2011ರಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ವಿಲೀನಗೊಂಡು, ಹಂತ ಹಂತವಾಗಿ ಪುನಶ್ಚೇತನಗೊಳ್ಳುತ್ತ, ಇಂದು ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಆಯುರ್ವೇದಿಕ ಮಹಾವಿದ್ಯಾಲಯವಾಗಿ ಹೊರಹೊಮ್ಮಿದೆ.

ಈ ಭಾಗದ ಜನರು ಆಯುರ್ವೇದಿಕ ಚಿಕಿತ್ಸೆಗಾಗಿ ದೂರದ ಕೇರಳ, ಉಜಿರೆ, ಘಟಪ್ರಭಾ ಪ್ರದೇಶಗಳಿಗೆ ಹೋಗುತ್ತಿದ್ದರು. ಇದನ್ನು ಅರಿತು, ಮಹಾವಿದ್ಯಾಲಯದಲ್ಲಿ ಆಯುರ್ವೇದ ಶಾಸ್ತ್ರದ ವಿಶಿಷ್ಟ ಚಿಕಿತ್ಸೆಯಾದ ‘ಪಂಚಕರ್ಮ’ ಚಿಕಿತ್ಸೆಯೊಂದಿಗೆ ಯೋಗ ಹಾಗೂ ನಿಸರ್ಗೋಪಚಾರಗಳನ್ನೊಳಗೊಂಡ ‘ಆರೋಗ್ಯ ಧಾಮ’ ಎನ್ನುವ ತ್ರಿವಿಧ ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಗಣ್ಯರಲ್ಲದೇ, ವಿದೇಶದ ಜನರು ಇಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ಸಂಸ್ಥೆ ನಿರ್ದೇಶಕ ಸುನೀಲಗೌಡ ಪಾಟೀಲ ತಿಳಿಸಿದರು.

‘ಅಲೋಪತಿಯಿಂದ ಆಗದ ಕಾಯಿಲೆಗಳನ್ನು ನಮ್ಮ ಆಸ್ಪತ್ರೆಯಲ್ಲಿ ಗುಣಪಡಿಸಲಾಗಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಕರುಳ ಬಳ್ಳಿ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕಾದ ಬ್ರಾಡ್‌ಲೀ ಯಾಂಟ್ಜರ್‌ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ ಅಧಿಕ ಮನೋದ್ವೇಗ ಕಾಯಿಲೆಯಿಂದ ಬಳಲುತ್ತಿರುವ ಸ್ಯಾನ್‌ ಫ್ರಾನ್ಸಿಸ್ಕೊ ನಿವಾಸಿ ಕಿಂಬರ್ಲಿ ಅರ್ನಾಲ್ಡ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ, ಜಿಲ್ಲಾಧಿಕಾರಿ ಶಿವಕುಮಾರ, ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು, ಗಣ್ಯ ವ್ಯಕ್ತಿಗಳು ಸಹ ಇಲ್ಲಿನ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ’ ಎಂದು ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ತಿಳಿಸಿದರು.

‘ಸ್ವಂತ ಗುಣಮಟ್ಟದ ಔಷಧ ತಯಾರಿಸುವ ಮಹತ್ತರ ಉದ್ದೇಶದಿಂದ ಮಹಾವಿದ್ಯಾಲಯ ಆವರಣದ ನಾಲ್ಕು ಎಕರೆ ಪ್ರದೇಶದಲ್ಲಿ ಸುಮಾರು 200 ಪ್ರಜಾತಿಯ ಔಷಧಿಯ ಸಸ್ಯಗಳನ್ನೊಳಗೊಂಡ ಸಸ್ಯ ವನ ನಿರ್ಮಿಸಿದೆ. ಈ ಸಸ್ಯ ಬಳ್ಳಿಯಿಂದ ಅವಶ್ಯಕ 100 ಬಗೆಯ ಗುಣಮಟ್ಟದ ಔಷಧ ಸಿದ್ಧಪಡಿಸಲಾಗುತ್ತಿದೆ’ ಎನ್ನುತ್ತಾರೆ ಪ್ರಾಚಾರ್ಯ ಕಡ್ಲಿಮಟ್ಟಿ.

‘ಅಧಿಕ ಮನೋದ್ವೇಗ ರೋಗದಿಂದ ಬಳಲುತ್ತಿದ್ದೆ, ಅಮೆರಿಕಾದ ಹಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೂ ಗುಣಮುಖವಾಗಿರಲಿಲ್ಲ. ನಮ್ಮ ದೇಶದಲ್ಲಿ ಭೇಟಿಯಾದ ಡಾ.ಸಂಜಯ ಸೂಚನೆ ಮೇರೆಗೆ ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬಂದೆ. ಪಂಚಕರ್ಮ ಮೊದಲಾದ ಚಿಕಿತ್ಸೆಗಳ ಮೂಲಕ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಕೊಂಡಿದ್ದೇನೆ. ಮೆಟ್ಟಿಲು ಏರಲಾಗದ ನನಗೆ ವಾಕರ್ ಸಹಾಯವಿಲ್ಲದೇ ಗೋಳಗುಮ್ಮಟ ಸಲೀಸಾಗಿ ಹತ್ತುತ್ತಿದ್ದೇನೆ’ ಎಂದು ಸ್ಯಾನ್‌ ಫ್ರಾನ್ಸಿಸ್ಕೊ ನಿವಾಸಿ ಕಿಂಬರ್ಲಿ ಅರ್ನಾಲ್ಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ್ಯಾವ ಚಿಕಿತ್ಸೆಗಳು

ಯೋಗ ಆಧಾರಿತ ಚಿಕಿತ್ಸೆ, ಪಂಚಕರ್ಮ, ನಿಸರ್ಗ ಚಿಕಿತ್ಸೆ, ಜಲ ಚಿಕಿತ್ಸೆ, ಅಗ್ನಿ ಚಿಕಿತ್ಸೆ, ಪೃಥ್ವಿ ಚಿಕಿತ್ಸೆ, ವಾಯು ಚಿಕಿತ್ಸೆ, ಶರೀರ ಶುದ್ಧೀಕರಣ, ಆಕಾಶ ಚಿಕಿತ್ಸೆ ಸೇರಿದಂತೆ ಆಯುರ್ವೇದ ಪದ್ಧತಿ ಆಧರಿಸಿದ ಹಲವಾರು ಚಿಕಿತ್ಸೆಗಳು ಒಂದೇ ಸೂರಿನಡಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಇಲ್ಲಿ ಲಭ್ಯವಿದೆ.

ಮೆಟ್ಟಿಲು ಹತ್ತಲಾಗದ ನನಗೆ ಇಲ್ಲಿನ ಪಂಚಕರ್ಮ ಮೊದಲಾದ ಚಿಕಿತ್ಸೆಗಳಿಂದ ವಾಕರ್ ಸಹಾಯವಿಲ್ಲದೇ ಸಲಿಸಾಗಿ ಗೋಳಗುಮ್ಮಟ ಹತ್ತುತ್ತಿದ್ದೇನೆ.
- ಕಿಂಬರ್ಲಿ ಅರ್ನಾಲ್ಡ್‌, ಸ್ಯಾನ್‌ ಫ್ರಾನ್ಸಿಸ್ಕೋ ನಿವಾಸಿ

ಸೇವಾ ಮನೋಭಾವ ದೃಷ್ಟಿಯಿಂದ ಹಾಗೂ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಆರೋಗ್ಯ ಧಾಮ ಸೇವೆ ಆರಂಭಿಸಲಾಗಿದೆ. ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
- ಸುನೀಲಗೌಡ ಪಾಟೀಲ, ನಿರ್ದೇಶಕರು, ಬಿಎಲ್‌ಡಿಇ ಸಂಸ್ಥೆ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !