ರಾಜ್ಯದ ಅರಣ್ಯ ಶೇ 12ರಷ್ಟು ಹೆಚ್ಚಿಸಲು ಕ್ರಮ: ಸಚಿವ ಶಂಕರ್

7

ರಾಜ್ಯದ ಅರಣ್ಯ ಶೇ 12ರಷ್ಟು ಹೆಚ್ಚಿಸಲು ಕ್ರಮ: ಸಚಿವ ಶಂಕರ್

Published:
Updated:
ಶಿವಮೊಗ್ಗ ಸಮೀಪದ ಸಕ್ರೆಬೈಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋಟಿ ಬೀಜದುಂಡೆ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಆರ್. ಶಂಕರ್ ಚಾಲನೆ ನೀಡಿದರು.

ಶಿವಮೊಗ್ಗ: ರಾಜ್ಯದ ಅರಣ್ಯ ಪ್ರದೇಶವನ್ನು ಶೇ 12ರಷ್ಟು ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ಮಾಹಿತಿ ನೀಡಿದರು.

ತಾಲ್ಲೂಕಿನ ಸಕ್ರೆಬೈಲ್‌ನಲ್ಲಿ ಭಾನುವಾರ ಉತ್ತಿಷ್ಟ ಭಾರತ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಒಪನ್‌ ಮೈಂಡ್ ವರ್ಲ್ಡ್ ಸ್ಕೂಲ್, ಅರಣ್ಯ ಇಲಾಖೆ ಆಯೋಜಿಸಿದ್ದ ಕೋಟಿ ಬೀಜದುಂಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೀಜದುಂಡೆ ಅಭಿಯಾನ ಅತ್ಯುತ್ತಮ ಕಾರ್ಯಕ್ರಮ. ಈ ಅಭಿಯಾನವನ್ನು ಮಲೆನಾಡಿಗಿಂತ ಬಯಲು ಸೀಮೆಯಲ್ಲಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಸರ್ಕಾರದಿಂದ ಎಲ್ಲಾ ಸಹಾಯ, ಸಹಕಾರ ನೀಡಲಾಗುವುದು. ಸಂಘ ಸಂಸ್ಥೆಗಳು, ಶಾಲೆ ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದು ಕೋರಿದರು.

ಜನರು ತಮ್ಮ ಜಮೀನಿನಲ್ಲಿ ಗಿಡ ನೆಟ್ಟರೆ ಅದಕ್ಕೂ ಸರ್ಕಾರ ನೆರವು ನೀಡುತ್ತದೆ. ಒಂದು ಎಕರೆ ಜಮೀನಲ್ಲಿ ಗಿಡ ನೆಡಲು 500 ಸಸಿ ಒದಗಿಸಲಾಗುವುದು. ಹಾಗೂ ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ಗಿಡಕ್ಕೆ ₨ 100 ಪ್ರೋತ್ಸಾಹ ಧನ ಒದಗಿಸಲಾಗುವುದು. ಅರಣ್ಯೀಕರಣ ಯೋಜನೆಗಳ ಜಾರಿಗಾಗಿ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ₨ 560 ಕೋಟಿ ಅನುದಾನ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 10 ಕೋಟಿ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವನ್ಯಜೀವಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಹಾವಳಿ ತಪ್ಪಿಸಲು ಸಮಗ್ರ ಯೋಜನೆ ರೂಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅರಣ್ಯೀಕರಣದ ಜತೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧ, ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳಿಗೆ ಕಡಿವಾಣ ಜಾರಿಗೊಳಿಸುವ ಅಗತ್ಯವಿದೆ ಎಂದರು.

ಸಾಧಕ-ಬಾಧಕ ಪರಿಶೀಲನೆ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಸಾಧಕ, ಬಾಧಕಗಳ ಪರಿಶೀಲನೆ ನಡೆಸುವ ಅಗತ್ಯವಿದೆ. ಕುಡಿಯುವ ನೀರು ಪೂರೈಕೆ ಅನಿವಾರ್ಯ. ಹಾಗೆಯೇ ಅರಣ್ಯ ಸಂರಕ್ಷಣೆಯೂ ಅಗತ್ಯ. ಈ ಎಲ್ಲಾ ಆಯಾಮಗಳ ಪರಿಶೀಲನೆ ನಡೆಸಬೇಕಾಗಿದೆ ಎಂದು ಪ್ರತಿಕ್ರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !