ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಿಂಡು ಓಡಿಸಿದ ಅರಣ್ಯಾಧಿಕಾರಿ ತಂಡ

Last Updated 25 ಡಿಸೆಂಬರ್ 2018, 13:49 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಮುನೇಶ್ವರ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾಡಿಗೆ ಓಡಿಸಿದೆ.

ಮೂರು ದಿನಗಳಿಂದ 16 ಕಾಡಾನೆಗಳು ಹೂಕುಂದ, ಚಿಕ್ಕೊಪ್ಪ, ದೊಡ್ಡಕೊಪ್ಪ, ಚನ್ನಸಂದ್ರ ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತರು ಬೆಳೆದಿದ್ದ ರಾಗಿ, ಅವರೆ, ತೊಗರಿ, ಜೋಳ, ತೆಂಗಿನ ಸಸಿ, ಬಾಳೆ ತೋಟ ನಾಶಪಡಿಸಿದ್ದವು.

ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನು ಓಡಿಸುವಂತೆ ಮನವಿ ಮಾಡಿದ್ದರು. ವಲಯ ಅರಣ್ಯಾಧಿಕಾರಿ ದಿನೇಶ್‌ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ಅರುಣ್‌, ಅರಣ್ಯ ರಕ್ಷಕರಾದ ನರಸಿಂಹ, ರಾಜು ತಂಡ ರೈತರ ನೆರವಿನೊಂದಿಗೆ ಪಟಾಕಿ ಸಿಡಿಸಿ ಮುನೇಶ್ವರಬೆಟ್ಟದ ಮಧ್ಯಭಾಗಕ್ಕೆ ಆನೆಗಳನ್ನು ಓಡಿಸಿದ್ದಾರೆ.

ಅರ್ಜಿ: ಆನೆ ದಾಳಿಯಿಂದ ನೂರಾರು ಎಕರೆ ಪ್ರದೇಶದ ಬೆಳೆ ನಾಶವಾಗಿದ್ದು ರೈತರು ಪರಿಹಾರಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಪರಿಹಾರ ಕ್ರಮ: ರೈತರಿಂದ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಿ, ನಷ್ಟದ ಅಂದಾಜಿನ ವರದಿ ತಯಾರಿಸಿ ಸೂಕ್ತ ಪರಿಹಾರ ಶೀಘ್ರವಾಗಿ ನೀಡುವ ಭರವಸೆಯನ್ನು ಅರಣ್ಯ ಅಧಿಕಾರಿಗಳು ನೀಡಿದ್ದಾರೆ.

ಒತ್ತಾಯ: ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಬಿತ್ತನೆ ಮಾಡಿದ ದಿನದಿಂದ ಕಟಾವು ಮಾಡಿ ಮನೆಗೆ ತರುವ ತನಕ ರಾತ್ರಿ ವೇಳೆಯಲ್ಲಿ ನಿರಂತರವಾಗಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದೇವೆ. ಆದರೂ, ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶಗೊಳಿಸಿವೆ. ಕಾಡಾನೆಗಳು ಕಾಡಿನಿಂದ ಶಾಶ್ವತವಾಗಿ ಹೊರಬರದಂತೆ ಕ್ರಮ ಕೈಗೊಳ್ಳಬೇಕೆಂಬುದು ನೊಂದ ರೈತರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT