ಬಾಗಿನ ಅರ್ಪಣೆಗೆ ಬಾರದ ಸಿಎಂ; ರೈತರ ಪ್ರತಿಭಟನೆ

7

ಬಾಗಿನ ಅರ್ಪಣೆಗೆ ಬಾರದ ಸಿಎಂ; ರೈತರ ಪ್ರತಿಭಟನೆ

Published:
Updated:

ಆಲಮಟ್ಟಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಲಮಟ್ಟಿಯಲ್ಲಿನ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಏಕಾಏಕಿ ರದ್ದಾಗಿದ್ದರಿಂದ; ರೈತರೆಲ್ಲಾ ಒಟ್ಟಾಗಿ ನಾವೇ ಬಾಗಿನ ಅರ್ಪಿಸುವುದಾಗಿ ಪಟ್ಟು ಹಿಡಿದು ಜಲಾಶಯದ ಅಣೆಕಟ್ಟೆಯ ಪ್ರವೇಶ ದ್ವಾರದ ಬಳಿ ಭಾನುವಾರ ಪ್ರತಿಭಟಿಸಿದರು.

ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ಕೊಲ್ಹಾರದ ಕಲ್ಲಿನಾಥ ದೇವರ ನೇತೃತ್ವದಲ್ಲಿ ಪ್ರತಿಭಟಿಸಿ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲಿನಾಥ ದೇವರು, ಈರಣ್ಣ ಹಂಚನಾಳ ಪ್ರತಿಭಟನಾಕಾರರನ್ನುದ್ದೇಶಿಸಿ ‘ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಎಂದು ಒಡೆದು ಆಳುವ ನೀತಿಯನ್ನು ಕುಮಾರಸ್ವಾಮಿ ಅನುಸರಿಸುತ್ತಿದ್ದಾರೆ, ಕಾವೇರಿಗೆ ಬಾಗಿನ ಅರ್ಪಿಸಿ, 20 ದಿನ ಕಳೆದ ಮೇಲೆ ಆಲಮಟ್ಟಿಗೆ ಬರುವುದಾಗಿ ಹೇಳಿ, ಕೊನೆ ಗಳಿಗೆಯಲ್ಲಿ ಹವಾಮಾನ ವೈಪರೀತ್ಯ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾರು ಮೂಲಕವಾದರೂ ಬಂದು ಬಾಗಿನ ಅರ್ಪಿಸಿ ವಸತಿ ಇದ್ದು, ಇಲ್ಲಿಯ ರೈತರ ಸಮಸ್ಯೆ ಅರಿತು ಹೋಗಬೇಕಿತ್ತು. ಅವರ ಬದಲಾಗಿ ನಾವೇ ಬಾಗಿನ ಅರ್ಪಿಸುತ್ತೇವೆ’ ಎಂದು ಹೇಳಿದರು.

ಈ ಸಂದರ್ಭ ನೆರೆದಿದ್ದ ರೈತ ಸಮೂಹ ಆಕ್ರೋಶಗೊಂಡು ಜಲಾಶಯದ ಪ್ರವೇಶದ್ವಾರದ ಮೂಲಕ ಒಳನುಗ್ಗಲು ಯತ್ನಿಸಿತು. ತಕ್ಷಣವೇ ಜಲಾಶಯದ ಭದ್ರತೆಗೆ ನಿಯೋಜನೆಗೊಂಡ ಕೆಎಸ್‌ಐಎಸ್‌ಎಫ್‌ ತುಕಡಿ, ಪೊಲೀಸರು ತಡೆದರು. ಸಿಪಿಐ ಎಂ.ಎನ್‌.ಶಿರಹಟ್ಟಿ ಹಾಗೂ ಕಲ್ಲಿನಾಥ ದೇವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರುದ್ಧವೂ ಧಿಕ್ಕಾರದ ಘೋಷಣೆ ಮೊಳಗಿದವು.

ಸಚಿವ ಶಿವಾನಂದ ಪಾಟೀಲ ಸ್ಥಳಕ್ಕೆ ಬಂದು ರೈತರ ಮನವೊಲಿಸಿದರು. ಈ ಸಂದರ್ಭ ಪ್ರತಿಭಟನಾ ನಿರತ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ ‘ಪ್ರವಾಸಕ್ಕೆ ಎಂಬಂತೆ ಬಂದು ಹೋಗದೆ, ಸ್ಥಳೀಯ ರೈತರ, ಜನರ ಸಮಸ್ಯೆ ಅರಿಯಬೇಕು, ಈ ಭಾಗದಲ್ಲಿ ಒಂದೆರೆಡು ದಿನ ವಸತಿ ಇರಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !