ಮಂಗಳವಾರ, ನವೆಂಬರ್ 29, 2022
29 °C
ಎಸ್.ಆರ್.ಫೌಂಡೇಷನ್ ಡೇ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ

‘ಬಸವಣ್ಣನ ಹೆಸರಲ್ಲಿ ರಾಜಕೀಯ ಸಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶರಣರ ವಚನಗಳನ್ನು ಧಾರ್ಮಿಕ ಸಾಹಿತ್ಯದ ನೆಲೆಗಟ್ಟಿನಲ್ಲಿ
ಕಾಣುವುದು ಸರಿಯಲ್ಲ ಮತ್ತು ಬಸವಣ್ಣನ ಹೆಸರಿನಲ್ಲಿ ರಾಜಕೀಯ ಸಲ್ಲದು’ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ ಎಸ್.ಆರ್.ಫೌಂಡೇಷನ್ ಡೇ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಚನಗಳು ಯುವಜನತೆಯ ಸಾಕ್ಷಿಪ್ರಜ್ಞೆ ಇದ್ದಂತೆ’ ಎಂದರು. ಮಹಾತ್ಮ ಗಾಂಧಿ ಅವರ ‘ಮೈ ಲೈಫ್‌ ಈಸ್‌ ಮೈ ಮೆಸೇಜ್‌’ ಕೃತಿಯನ್ನು ಉದಾಹರಿಸಿ, ‘ಬದುಕಿನ ದರ್ಶನ ಇರುವುದೇ ಮಾನವೀಯತೆಯ ಆಧಾರದ ಮೇಲೆ. ಇಂತಹ ಅಮೂಲ್ಯ ತತ್ವಗಳನ್ನು ಶರಣರ ವಚನಗಳು ನೀಡಿವೆ’ ಎಂದರು.

‘ಪ್ರಧಾನಿ ಮೋದಿಯವರೂ ಬಸವಣ್ಣನ ವಿಚಾರಧಾರೆಗಳ ಬಗ್ಗೆ ಅತೀವ ಆಕರ್ಷಣೆ ಹೊಂದಿದ್ದಾರೆ. ಬಸವಣ್ಣನ ತತ್ವ ಎಂದೆಂದಿಗೂ ಪ್ರಸ್ತುತ. 12ನೇ ಶತಮಾನದ ಶರಣರ ಹೋರಾಟ, ಚಳವಳಿಗಳು, ಜೀವತತ್ವದ ಸಾಹಿತ್ಯ ಈಗಲೂ ಯುವ ಜನತೆಗೆ ಬೆಳಕಿನ ಹಾದಿಯಾಗಿವೆ’ ಎಂದರು.

ಶಸ್ತ್ರಚಿಕಿತ್ಸಾ ತಜ್ಞ ಡಾ.ಟಿ.ಎಚ್. ಅಂಜನಪ್ಪ ಅವರು ಮಾತನಾಡಿ, ‘ಯುವಜನತೆ ತಪ್ಪು, ಒಪ್ಪುಗಳ ವಿವೇಚನೆ ಮಾಡಿ ಬದುಕು ನಡೆಸಬೇಕು. ಮೌಢ್ಯಗಳ ವಿಚಾರದಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವ ಸಂದರ್ಭಗಳಿವೆ. ಆದ್ದರಿಂದ, ಜೀವನದಲ್ಲಿ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು. ಶರೀರದ ಅಂಗಗಳ ಪ್ರಾಮುಖ್ಯವನ್ನೂ ಅರಿಯಬೇಕು. ಬದುಕಿನ ಬಗ್ಗೆ
ಸ್ಪಷ್ಟತೆ ಇರಿಸಿಕೊಂಡು ಅರಿವಿನ ಹಾದಿಯಲ್ಲಿ ನಡೆಯಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.