ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ದೇಶ ಆಳುತ್ತಿದೆ: ಪ್ರಿಯಾಂಕ್ ಖರ್ಗೆ

ಓತಿಹಾಳದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ
Last Updated 7 ಜನವರಿ 2020, 15:41 IST
ಅಕ್ಷರ ಗಾತ್ರ

ಸಿಂದಗಿ: ‘ನಮ್ಮ ದೇಶದ ಆಡಳಿತ ನವದೆಹಲಿಯಿಂದ ನಡೆಯುತ್ತಿಲ್ಲ. ನಾಗಪುರದ ಆರ್‌ಎಸ್‌ಎಸ್‌ ನಮ್ಮ ದೇಶವನ್ನು ಆಳುತ್ತಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ತಾಲ್ಲೂಕಿನ ಓತಿಹಾಳ ಗ್ರಾಮದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ದೇಶಭಕ್ತಿ ಪಾಠ ಹೇಳುವ ಇವರು ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿರುವುದು 2002 ರಲ್ಲಿ. ಇವರಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಪರ ಧ್ವನಿ ಎತ್ತಿದ ಪ್ರಗತಿಪರ ಚಿಂತಕರನ್ನು ಹತ್ಯೆಗೈಯಲಾಗುತ್ತಿದೆ. ಹಿಂದೂ ರಾಷ್ಟ್ರ, ಅಖಂಡ ಭಾರತ ಕಟ್ಟಲು ಸಾಧ್ಯವೇ. ಇವರಿಗೆ ಇತಿಹಾಸ ಗೊತ್ತಿಲ್ಲ. ಹೀಗಾಗಿ ಇತಿಹಾಸ ತಿರುಚಿ ವೀರ್ ಸಾವರಕರ್ ಅಂಥವರನ್ನು ಇತಿಹಾಸದಲ್ಲಿ ಸೇರಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

‘ದೇಶದಲ್ಲಿ ಭಯ–ಭೀತಿಯ ವಾತಾವರಣ ಕಾಣುತ್ತಿದ್ದೇವೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಆತಂಕದಲ್ಲಿದ್ದಾರೆ. ಬಡವರು, ಶ್ರಮಿಕರು ಭಯದಿಂದ ಬದುಕಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಶಾಲೆ–ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಹೋರಾಟ ಪ್ರಾರಂಭವಾಗಿದೆ. ವಿದ್ಯಾರ್ಥಿ ಕ್ರಾಂತಿ ಆರಂಭವಾದಾಗಲೇ ದೇಶಕ್ಕೆ ಹೊಸ ಸ್ವರೂಪ ಬರುತ್ತದೆ’ ಎಂದರು.

ಭಗವದ್ಗೀತೆ, ಕುರಾನ್, ಬೈಬಲ್‌ಗಳು ನಮ್ಮ ದೇಶದ ಸಂವಿಧಾನಗಳಲ್ಲ. ಆಧುನಿಕ ಭಾರತದ ಕಲ್ಪನೆ ಹೊಂದಿದ್ದ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನವೇ ನಮ್ಮ ದೇಶದ ಸಂವಿಧಾನ. ಇದರಲ್ಲಿ ಬುದ್ಧನ ವಿಚಾರಗಳು ಅಡಕವಾಗಿವೆ. ಭಯೋತ್ಪಾದಕರನ್ನು, ಅಕ್ರಮ ವಲಸಿಗರನ್ನು ಹೊರಗೆ ಕಳುಹಿಸಿ. ಆದರೆ, ಸಂವಿಧಾನದ ಕಲಂ 14ರ ವಿರುದ್ಧವಾದ ಪೌರತ್ವ (ತಿದ್ದು‍ಪಡಿ) ಮತ್ತು ಎನ್‌ಆರ್‌ಸಿ ಕಾಯ್ದೆಗೆ ನಮ್ಮ ವಿರೋಧವಿದೆ. ಎನ್‌ಆರ್‌ಸಿ ಅಪಾಯಕಾರಿ ಕಾನೂನಾಗಿದ್ದು, ಇದು ಮುಸ್ಲಿಮರ ಹೋರಾಟವಾಗದೇ ಎಲ್ಲರ ಹೋರಾಟವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ‘ಪ್ರತಿಮೆ ಅನಾವರಣ ಮಾಡುವುದಷ್ಟೇ ಮುಖ್ಯವಲ್ಲ. ಅಂಬೇಡ್ಕರ್‌ರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮೀಸಲಾತಿಗಾಗಿ ಮಾತ್ರ ಅಂಬೇಡ್ಕರ್ ಬೇಕೇ, ಅವರ ಧರ್ಮ, ತತ್ವಾದರ್ಶ ಬೇಡವೇ’ ಎಂದು ಪ್ರಶ್ನಿಸಿದರು.

‘ಶಾಸಕ ಎಂ.ಸಿ.ಮನಗೂಳಿ ಅವರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಅವರ ತತ್ವಗಳನ್ನು ನೆನಪಿಸಿ ಕೊಡುತ್ತಿರುವ ಕಾರ್ಯ ಅಭಿನಂದನೀಯ’ ಎಂದರು.

ಬಿಎಸ್‌ಪಿ ಕಾರ್ಯದರ್ಶಿ ದಸ್ತಗೀರ್ ಮುಲ್ಲಾ ಮಾತನಾಡಿದರು.ಶಾಸಕ ಎಂ.ಸಿ.ಮನಗೂಳಿ ಮಾತನಾಡಿ, ‘ಸರ್ಕಾರದ ಯೋಜನೆಗಳನ್ನು ಸಮಾಜದ ಎಲ್ಲ ವರ್ಗದವರಿಗೆ ತಲುಪಿಸುವಲ್ಲಿ ಅಂಬೇಡ್ಕರ್ ಶ್ರಮವಹಿಸಿದ್ದಾರೆ. ಅವರ ಜೀವನ, ಆದರ್ಶ ದಾರಿದೀಪವಾಗಲಿ’ ಎಂದರು.

ಸಂಘಪಾಲ ಭಂತೇಜಿ, ಶಾಂತಗಂಗಾಧರ ಸ್ವಾಮೀಜಿ, ವೇದಮೂರ್ತಿ ಶಿವಾನಂದ ಸಾಲಿಮಠ ಸಾನ್ನಿಧ್ಯ ವಹಿಸಿದ್ದರು. ಗುರನಗೌಡ ಪಾಟೀಲ ನಾಗಾವಿ, ಶಿವನಗೌಡ ಯಾತಗಿರಿ, ಶಿವಪುತ್ರ ಶಂಕ್ರಪ್ಪ ಬೂದಿಹಾಳ ಇದ್ದರು.

ವೈ.ಸಿ.ಮಯೂರ ಸ್ವಾಗತಿಸಿ, ಚಂದ್ರಕಾಂತ ಸಿಂಗೆ ನಿರೂಪಿಸಿದರು. ಪರುಶರಾಮ ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT