ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆದ ಹಂಪಿಯ ಗತವೈಭವ

Last Updated 6 ಫೆಬ್ರವರಿ 2011, 8:30 IST
ಅಕ್ಷರ ಗಾತ್ರ

ಗದಗ:  ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ನಾಟಕ ಕಲೆಗಳಿಗೆ ಜಗತ್ಪ್ರಸಿದ್ಧಿ ಹೊಂದಿದ ವಿಜಯನಗರ ಸಾಮ್ರಾಜ್ಯದ ಗತವೈಭವ ಗದುಗಿನಲ್ಲಿ ಶನಿವಾರ ಮರುಸೃಷ್ಟಿಯಾಗಿತ್ತು.ಧ್ವನಿ-ಬೆಳಕಿನಾಟದ ಮೂಲಕ ಸುಮಾರು 5 ಶತಮಾನಗಳ ಹಿಂದಕ್ಕೆ ಕರೆದುಕೊಂಡು ಹೋಗಿ ಇತಿಹಾಸದ ವೈಭವ, ಹಿಂದೂ ಸಂಸ್ಕೃತಿಯನ್ನು ಈಗಿನವರಿಗೆ ಉಣಬಡಿಸಲಾಯಿತು.

ಕೃಷ್ಣದೇವರಾಯನ 500ನೇ ವರ್ಷದ ಪೀಠಾರೋಹಣ ಸ್ಮರಣೆಯ ಅಂಗವಾಗಿ ನಗರದ ಸಿ.ಎಸ್. ಪಾಟೀಲ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಯರಥ ಧ್ವನಿ-ಬೆಳಕು ಕಾರ್ಯಕ್ರಮ ಸಹಸ್ರಾರು ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ವಿನೂತನ ಮಾದರಿಯ ಸಂಚಾರಿ ಧ್ವನಿ ಮತ್ತು ಬೆಳಕು ಪ್ರದರ್ಶನದ ಮೂಲಕ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಬಗ್ಗೆ ಆಗಿನ ಪರಂಪರೆ, ಇತಿಹಾಸಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

ಕೃತಕವಾಗಿ ರೂಪಿಸಲಾಗಿದ್ದ ಹಂಪಿಯ ಕಲ್ಲಿನ ರಥ, ವಿಠ್ಠಲ ದೇವಸ್ಥಾನ, ಲೋಟಸ್ ಮಹಲ್, ಉಗ್ರನರಸಿಂಹ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ವಿರೂಪಾಕ್ಷ ದೇವಸ್ಥಾನ, ಹಂಪಿ ಬಝಾರ್, ಮಹಾನವಮಿ ದಿಬ್ಬ, ಆನೆಗಳ ಲಾಯ, ಕಿಂಗ್ಸ್ ಬ್ಯಾಲೆನ್ಸ್, ಅಂಜನಾದ್ರಿ ಬೆಟ್ಟ, ಅಕ್ಕಾತಂಗಿ ಬಂಡೆ, ತುಂಗಭದ್ರೆ ನದಿ, ಬಸವಣ್ಣ, ಬಡವಿಲಿಂಗ, ತಳವಾರ ಘಟ್ಟ ಮತ್ತು ಎರಡು ಅಂತಸ್ತಿನ ಮಂಟಪ ಜನರನ್ನು ಹೆಚ್ಚು ಆಕರ್ಷಿತಗೊಳಿಸಿ, ಹಂಪಿಯಲ್ಲಿಯೇ ಇದ್ದೇವೆ ಎನ್ನುವ ಹಾಗೇ ಭಾವನೆ ಮೂಡಿಸಿತ್ತು.

ಆಯಕಟ್ಟಿನ ಸ್ಥಳಗಳಲ್ಲಿ ಕುಶಲತೆಯಿಂದ ಅಳವಡಿಸಲಾದ ವಿದ್ಯುತ್ ದೀಪಗಳು, ಚಾರಿತ್ರಿಕ ಪ್ರಮುಖ ಘಟನೆಗಳನ್ನು ಕುರಿತು ತಯಾರಿಸಲಾದ ಹಿಮ್ಮೇಳನದ ಧ್ವನಿಗಳು ಈ ಪ್ರದರ್ಶನದ ಪ್ರಮುಖ ಸಾಧನವಾಗಿದ್ದವು. ಧ್ವನಿ ಮತ್ತು ಬೆಳಕು ಪ್ರದರ್ಶನ ಪರಿಣಾಮಕಾರಿಗೆ ಐತಿಹಾಸಿಕ ಸ್ಮಾರಕಗಳು ಬೆಂಬಲ ನೀಡಿದವು. ಸ್ಮಾರಕಗಳ ಹಿನ್ನಲೆಯನ್ನು ಬಳಸಿಕೊಂಡು ಚಾರಿತ್ರಿಕ ಘಟನೆಗಳ ವರ್ಣನೆ ನೀಡಲಾಗಿತ್ತು. ಇದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ವಿಜಯನಗರ ಸಾಮ್ರಾಜ್ಯದ ವೈಭವದ ಅನುಭವ ಪಡೆದರು.

ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಆಡಳಿತದ ಸಹಕಾರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧಿಕಾರಿ ಎಸ್.ಶಂಕರನಾರಾಯಣ, ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯಿತಿ ಸಿಇಓ ವೀರಣ್ಣ ಜಿ.ತುರಮರಿ, ಎಸ್‌ಪಿ ರವಿಕುಮಾರ ನಾಯಕ ಸೇರಿದಂತೆ ಹಲವಾರು ಗಣ್ಯರು ಸಾಕ್ಷೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT