ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ ಪಟ್ಟಣದಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್‌ ಆಸ್ಪತ್ರೆ ಆರಂಭ: ಶ್ಲಾಘನೆ

Last Updated 31 ಮೇ 2021, 15:43 IST
ಅಕ್ಷರ ಗಾತ್ರ

ಗದಗ: ಕೋವಿಡ್‌ ಸೋಂಕಿನಿಂದ ಬಳಲುತ್ತಿರುವ ಬಡ ಜನರಿಗೆ ನೆರವಾಗುವ ಉದ್ದೇಶದಿಂದ ರೋಣ ಪಟ್ಟಣದ ರಾಜೀವ್‌ಗಾಂಧಿ ಆರ್ಯುವೇದ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಕೇರ್‌ ಆಸ್ಪತ್ರೆ ತೆರೆಯಲಾಗಿದ್ದು, ಕಾಂಗ್ರೆಸ್‌ ನಾಯಕರು, ಮಠಾಧೀಶರು ಸೋಮವಾರ ವರ್ಚುವಲ್‌ ವೇದಿಕೆ ಮೂಲಕ ಚಾಲನೆ ನೀಡಿದರು.

ಕೋವಿಡ್‌ ಆಸ್ಪತ್ರೆಗೆ ಆನ್‌ಲೈನ್‌ ಮೂಲಕ ಚಾಲನೆ ನೀಡಿದ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಪಾಟೀಲ ಹಾಗೂ ಅವರ ತಂಡ ಕೋವಿಡ್‌ ಆಸ್ಪತ್ರೆ ತೆರೆದು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ಅಭಿನಂದನೀಯ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎರಡನೇ ಅಲೆ ಬರುತ್ತದೆ ಎಂಬುದು ಮೊದಲೇ ತಿಳಿದಿದ್ದರೂ ಸರ್ಕಾರ ಅದನ್ನು ಎದುರಿಸಲು ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಇದರಿಂದಾಗಿ ಅನೇಕ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಂತಾಯಿತು’ ಎಂದು ದೂರಿದರು.

‘ಕೋವಿಡ್‌ನಿಂದ ಆದ ಸಾವು ನೋವುಗಳಿಗೆ ಸಂಬಂಧಿಸಿದಂತೆ ಸರ್ಕಾರ ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿಲ್ಲ. ಬಡವರಿಗೆ ಆರ್ಥಿಕ ನೆರವು ನೀಡುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸರ್ಕಾರ ಕನಿಷ್ಠ ₹10 ಸಾವಿರ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಮುಖಂಡ ಕೃಷ್ಣ ಬೈರೇಗೌಡ ಮಾತನಾಡಿ, ‘ಸಕಾಲದಲ್ಲಿ ಸ್ಥಳೀಯವಾಗಿಯೇ ಚಿಕಿತ್ಸೆ ಲಭಿಸಿದರೆ ಸಾಕಷ್ಟು ಸೋಂಕಿತರ ಪ್ರಾಣ ಉಳಿಯುತ್ತದೆ. 50 ಹಾಸಿಗೆಗಳ ಈ ಕೋವಿಡ್‌ ಆಸ್ಪತ್ರೆ ಬಡಜನರ ಪ್ರಾಣ ಉಳಿಸಲು ನೆರವಾಗಲಿದೆ. ಜಾತಿ ಧರ್ಮ ನೋಡದೇ ಎಲ್ಲ ವರ್ಗದ ಬಡ ಜನರಿಗೂ ಆಸ್ಪತ್ರೆಯ ಸೇವೆ ಸಿಗುವಂತಾಗಲಿ. ಕಾಂಗ್ರೆಸ್‌ ಕುಟುಂಬದಿಂದ ಜಿ.ಎಸ್‌. ಪಾಟೀಲರಿಗೆ ಅಭಿನಂದನೆ’ ಎಂದು ಹೇಳಿದರು.

ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ‘ಜಿ.ಎಸ್.ಪಾಟೀಲರು ಆಪತ್ಕಾಲದಲ್ಲಿ ಆಸ್ಪತ್ರೆ ಆರಂಭಿಸಿದ್ದು ಶ್ಲಾಘನೀಯ. ರಾಜ್ಯದಲ್ಲಿ ಕೋವಿಡ್‌–19 ಪರಿಸ್ಥಿತಿ ಗಂಭೀರವಾಗಿದೆ. ಬಡವರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡಿರುವ ಈ ಆಸ್ಪತ್ರೆ ಜತೆಗೆ ಮಠವೂ ಕೈಜೋಡಿಸಲಿದೆ’ ಎಂದು ಹೇಳಿದರು.

ಬಡವರಿಗೆ ಉಚಿತ ಚಿಕಿತ್ಸೆ, ಊಟ

‘ರೋಣ ಭಾಗದಲ್ಲಿ ಇಂತಹದ್ದೊಂದು ಆಸ್ಪತ್ರೆಯ ಅವಶ್ಯಕತೆ ಜಾಸ್ತಿ ಇತ್ತು. ಆ ಕೊರತೆಯನ್ನು ಜಿ.ಎಸ್‌.ಪಾಟೀಲರು ನೀಗಿಸಿದ್ದಾರೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ರಾಜ್ಯದಲ್ಲಿ 881 ಮಂದಿ ಕೋವಿಡ್ ಸೋಂಕಿತರು ವೆಂಟಿಲೇಟರ್ ಬೆಡ್‌ಗಾಗಿ ಕಾದು ಕುಳಿತಿದ್ದಾರೆ. ವೆಂಟಿಲೇಟರ್‌ ಹಾಸಿಗೆಗಳ ಸಮಸ್ಯೆ ಇರುವೆಡೆಗಳಲ್ಲಿ ಇಂತಹ ಆಸ್ಪತ್ರೆಗಳು‌ ಸ್ಥಳೀಯವಾಗಿಯೇ ಪರಿಹಾರ ಒದಗಿಸಲಿವೆ’ ಎಂದರು.

‘50 ಹಾಸಿಗೆಗಳ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ ಹಾಸಿಗೆಗಳು, 25 ಆಮ್ಲಜನಕ ಸಹಿತ ಹಾಸಿಗೆಗಳು ಹಾಗೂ 20 ಸಾಮಾನ್ಯ ಹಾಸಿಗೆಗಳು ಇರಲಿವೆ. ಈಗ ಎರಡು ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದ್ದು, ಉಳಿದವು ಮಂಗಳವಾರ ಬರಲಿವೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಎಲ್ಲ ರೋಗಿಗಳಿಗೆ ವೆಂಟಿಲೇಟರ್‌ ಬೆಡ್‌ ಚಿಕಿತ್ಸೆಯನ್ನೂ,ಜೊತೆಗೆ ಊಟವನ್ನು ಉಚಿತವಾಗಿ ನೀಡಲಾಗುವುದು. ಆಸ್ಪತ್ರೆಗೆ ಅಗತ್ಯವಿರುವ ಆಮ್ಲಜನಕ ಪೂರೈಕೆಗೆ 25 ಜಂಬೋ ಸಿಲಿಂಡರ್‌ಗಳು ನೆರವಾಗಲಿವೆ’ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ

‘ರೋಣದ ರಾಜೀವ್‌ಗಾಂಧಿ ಎಜುಕೇಷನ್‌ ಸೊಸೈಟಿ ಮತ್ತು ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು ವತಿಯಿಂದ ತೆರೆದಿರುವ ಕೋವಿಡ್‌ ಕೇರ್‌ ಆಸ್ಪತ್ರೆಯಲ್ಲಿ ಒಬ್ಬ ತಜ್ಞ ವೈದ್ಯರು, ಒಬ್ಬರು ಎಂ.ಡಿ ಜನರಲ್‌ ಮೆಡಿಸನ್‌, ಇಬ್ಬರು ಎಂಬಿಬಿಎಸ್‌ ವೈದ್ಯರು ಹಾಗೂ 10 ಮಂದಿ ಶುಶ್ರೂಷಕಿಯರು ಕಾರ್ಯನಿರ್ವಹಿಸಲಿದ್ದಾರೆ. ರೋಗಿಗಳಿಗೆ ಅಗತ್ಯವಿರುವ ಆಮ್ಲಜನಕ ಪೂರೈಸಲು 25 ಜಂಬೋ ಸಿಲಿಂಡರ್‌ಗಳು, 10 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳು ಇವೆ’ ಎಂದು ಡಾ. ವಾಮನ್‌ ವಿ.ರಾಜಪುರೋಹಿತ ತಿಳಿಸಿದರು.

***

ಬಡಜನರಿಗೆ ಮೀಸಲಾದ ಆಸ್ಪತ್ರೆ ತೆರೆಯಲು ಶಾಸಕ ಎಚ್‌.ಕೆ.ಪಾಟೀಲ ಅವರೇ ಪ್ರೇರಣೆಯಾಗಿದ್ದಾರೆ. ಎರಡು ತಿಂಗಳಿಂದ ಕೋವಿಡ್‌ ನಿರ್ವಹಣೆಯಲ್ಲಿ ತೊಡಗಿರುವ ಅವರ ಮಾರ್ಗದರ್ಶನದಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗಿದೆ.

- ಜಿ.ಎಸ್‌.ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT