ಗಜೇಂದ್ರಗಡ: ಹೆದ್ದಾರಿಗಾಗಿ 52 ಮರಗಳ ಸ್ಥಳಾಂತರ

ಗಜೇಂದ್ರಗಡ (ಗದಗ ಜಿಲ್ಲೆ): ಭಾನಾಪುರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ರಾಮಾಪುರ ರಸ್ತೆಯಲ್ಲಿ ತೆರವುಗೊಳಿಸಬೇಕಿದ್ದ 52 ಮರಗಳನ್ನು ಸ್ಥಳಾಂತರಿಸಿ ಟ್ರೀ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ. ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ರೋಣ ಶಾಸಕ ಕಳಕಪ್ಪ ಬಂಡಿ ಇದಕ್ಕೆ ನೆರವಾಗುತ್ತಿದ್ದಾರೆ.
ಜುಲೈ 5ರಿಂದ ಈ ಮರಗಳ ಸುತ್ತ ಗುಂಡಿ ತೆಗೆದು ಬೇರುಗಳಿಗೆ ಹಾನಿಯಾಗದಂತೆ ರಾಸಾಯನಿಕ ಸಿಂಪಡಿಸಿ ಆರೈಕೆ ಮಾಡಲಾಗುತ್ತಿದೆ. ಕೆರೆಯ ಪಕ್ಕದ ಜಾಗಕ್ಕೆ ಈ ಮರಗಳನ್ನು ಸ್ಥಳಾಂತರಿಸಲಿದ್ದು, ಅಲ್ಲಿ ಗುಂಡಿಗಳನ್ನು ತೆಗೆದು ಗೊಬ್ಬರ, ನೀರು ಹಾಕಿ ತಯಾರಿ ಕೈಗೊಳ್ಳಲಾಗುತ್ತಿದೆ. ಸೋಮವಾರದಿಂದ ಮರಗಳನ್ನು ಕ್ರೇನ್ ಮೂಲಕ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಈಗಾಗಲೇ ಗಜೇಂದ್ರಗಡದಿಂದ ಕಾತ್ರಾಳ ಕ್ರಾಸ್‌ವರೆಗಿನ ರಸ್ತೆ ಪಕ್ಕದಲ್ಲಿದ್ದ 334 ವಿವಿಧ ಜಾತಿಯ ಮರಗಳನ್ನು ಹನನ ಮಾಡಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮರಗಳನ್ನು ಕಡಿಯುವ ಬದಲು, ಸ್ಥಳಾಂತರಿಸಿ ಟ್ರೀ ಪಾರ್ಕ್ ಮಾಡುವ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
‘52 ಅರಳಿ, ಆಲದ ಮರಗಳನ್ನು ಗಜೇಂದ್ರಗಡದ ಕೆರೆ ಪಕ್ಕಕ್ಕೆ ಸ್ಥಳಾಂತರಿಸಿ ಟ್ರೀ ಪಾರ್ಕ್ ಮಾಡಲು ಉದ್ದೇಶಿಸಿದ್ದು, ಈ ಕಾರ್ಯಕ್ಕೆ ಹೆಚ್ಚಿನ ಖರ್ಚಾಗುತ್ತದೆ. ಈ ಕಾರ್ಯದಲ್ಲಿ ಸ್ಥಳೀಯ ಶಾಸಕರು, ಪುರಸಭೆ ಆಡಳಿತ ಮಂಡಳಿ ಹಾಗೂ ಸ್ಥಳೀಯರು ನೆರವು ನೀಡುತ್ತಿದ್ದಾರೆ’ ಎಂದು ಗದಗ ಡಿಸಿಎಫ್ ಸೂರ್ಯಸೇನ್ ಎ.ವಿ. ತಿಳಿಸಿದರು.
‘ಗಜೇಂದ್ರಗಡಕ್ಕೆ ಸದ್ಯದಲ್ಲೇ ಟ್ರೀ ಪಾರ್ಕ್ ಮಂಜೂರಾಗಲಿದೆ. ರಾಮಾಪುರ ರಸ್ತೆಯಲ್ಲಿ 35-40 ವರ್ಷಗಳಿಂದ ಇದ್ದ ಮರಗಳನ್ನು ಸ್ಥಳಾಂತರಿಸಲು ಕ್ರಮವಹಿಸಲಾಗಿದೆ. ಸದ್ಯ ಮರಗಳ ಸ್ಥಳಾಂತರಕ್ಕೆ ನನ್ನ ಕೈಲಾದ ಸಹಕಾರ ನೀಡುತ್ತಿದ್ದೇನೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
‘ದೀರ್ಘಕಾಲ ಬಾಳುವ ಅರಳಿ, ಆಲದ ಮರಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸಿ ಒಂದು ತಿಂಗಳು ನೀರು, ಗೊಬ್ಬರ ನೀಡಿದರೆ ಮತ್ತೆ ಬೆಳೆಯುತ್ತವೆ. ಮರಗಳನ್ನು ಬೆಳೆಸುವ, ಬೆಳೆದಿರುವ ಮರಗಳನ್ನು ಉಳಿಸುವ ಮನೋಭಾವ ಜನರಲ್ಲೂ ಮೂಡಬೇಕಿದೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ರಾಜು ಗೋಂದಕರ.
***
ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ ಮರಗಳನ್ನು ಬೇರೆಡೆ ಸ್ಥಳಾಂತರಿಸಲು ನೆರವಾಗಬೇಕು.ಮರ ಸ್ಥಳಾಂತರಸುವ ಕಾಯ್ದೆ ಜಾರಿಯಾಗಬೇಕು
- ಸೂರ್ಯಸೇನ್ ಎ.ವಿ., ಗದಗ ಡಿಸಿಎಫ್
***
ಕಡಿಯಬೇಕಿದ್ದ ಮರಗಳನ್ನು ಸ್ಥಳಾಂತರಿಸುವುದರಿಂದ ಹೊಸದಾಗಿ ಗಿಡಗಳನ್ನು ನೆಟ್ಟು ಹಲವು ವರ್ಷಗಳವರೆಗೆ ಆರೈಕೆ ಮಾಡಿ ಬೆಳೆಸುವ ಖರ್ಚು, ಸಮಯ ಉಳಿಯುತ್ತದೆ.
- ಕಳಕಪ್ಪ ಬಂಡಿ, ರೋಣ ಶಾಸಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.