ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ

Last Updated 14 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಗದಗ: ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸಬೇಕು, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕೆಂಬ ಆಶಯದೊಂದಿಗೆ ಬೆಟಗೇರಿ ಬಸ್‌ ನಿಲ್ದಾಣದ ಸಮೀಪ ಆರಂಭವಾದ ‘ಇಂದಿರಾ ಕ್ಯಾಂಟೀನ್’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಹತ್ತು ದಿನಗಳ ಹಿಂದೆ (ಅ.5ರಂದು) ಪ್ರಾರಂಭವಾದ ‘ಇಂದಿರಾ ಕ್ಯಾಂಟೀನ್’ ಕಟ್ಟಡ ಕಾರ್ಮಿಕರ, ಕೂಲಿ ಕಾರ್ಮಿಕರ, ಬೀದಿ ಬದಿಯ ವ್ಯಾಪಾರಿಗಳ ಹಸಿವು ನೀಗಿಸುತ್ತಿದೆ. ಸಮೀಪದಲ್ಲೇ ಇರುವ ಐಟಿಐ ಕಾಲೇಜು, ಸರ್ಕಾರಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ, ಮಧ್ಯಾಹ್ನದ ವೇಳೆ ಉಪಾಹಾರ ಮತ್ತು ಊಟ ಮಾಡಿ ಹೋಗುತ್ತಿದ್ದಾರೆ.

ಕ್ಯಾಂಟೀನ್‌ನಲ್ಲಿ ಪ್ರತಿದಿನ ಬೇರೆ ಬೇರೆ ತಿನಿಸು ತಯಾರಿಸಲಾಗುತ್ತಿದೆ. ಬೆಳಿಗ್ಗೆ ಶಿರಾ–ಉಪ್ಪಿಟ್ಟು, ಪೂರಿ– ಬೆಟಗೇರಿ ಚಟ್ನಿ, ಮಂಡಕ್ಕಿ ವಗ್ಗರಣೆ, ಅವಲಕ್ಕಿ ವಗ್ಗರಣೆ ಸಿದ್ಧಪಡಿಸಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಪಲಾವ್, ಅನ್ನ ಸಂಬಾರ್, ಮೊಸರನ್ನ, ಚಿತ್ರಾನ್ನವನ್ನು ಬಡಿಸಲಾಗುತ್ತಿದೆ. ತರಕಾರಿ ಸಂಗ್ರಹಿಸಿ ಇಡಲು ದೊಡ್ಡ ಗಾತ್ರದ ಪ್ರಿಡ್ಜ್, ಹೆಚ್ಚಿನ ಪ್ರಮಾಣದಲ್ಲಿ ಅನ್ನ ಸಿದ್ಧಪಡಿಸಲು 2 ಬಾಯ್ಲರ್‌, 2 ಮಿಕ್ಸರ್‌, 2 ರುಬ್ಬುವ ಯಂತ್ರ, ದೊಡ್ಡ ಇಡ್ಲಿ ಪಾತ್ರೆ ಹಾಗೂ ನೀರು ಶುದ್ಧಿಕರೀಸುವ ಯಂತ್ರವನ್ನು ಕ್ಯಾಂಟೀನ್‌ನಲ್ಲಿ ಅಳವಡಿಸಲಾಗಿದೆ.

ಗುಣಮಟ್ಟದ ಆಹಾರ ವಿತರಣೆ: ಬೆಟಗೇರಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ರುಚಿ ರುಚಿಯಾದ ಗುಣಮಟ್ಟದ ಆಹಾರ ನೀಡುವುದರ ಜತೆಗೆ, ಒಳಾವರಣ ಮತ್ತು ಹೊರಾವರಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲಾಗಿದೆ.

ಬೆಳಗಿನ ಉಪಾಹಾರದಲ್ಲಿ 4 ಪೂರಿ, ಊಟಕ್ಕೆ ಅನ್ನ ಸಾಂಬರ್– ಮೊಸರನ್ನ ಅಥವಾ 2 ರೊಟ್ಟಿಯೊಂದಿಗೆ(ಬಿಸಿ, ಖಡಕ್). ಅನ್ನ ಸಂಬಾರ್– ಪಲಾವ್, ಪಾಯಸ (ಹೆಸರು ಬೇಳೆ, ಕಡ್ಲೆ ಬೇಳೆ, ಗೋಧಿ ಹುಗ್ಗಿ) ನೀಡಬೇಕು. ಆದರೆ, ರೊಟ್ಟಿ, ಬಿಸಿಬೇಳೆ ಬಾತ್, ವಾಂಗಿಬಾತ್, ಟೊಮೊಟೊಬಾತ್, ಪಾಯಸವನ್ನು ಈವರೆಗೂ ನೀಡಿಲ್ಲ. ಇನ್ನು ಉಪಾಹಾರಕ್ಕೆ ನೀಡಬೇಕಿದ್ದ 4 ಪೂರಿಗಳಲ್ಲಿ ಎರಡೇ ವಿತರಿಸಲಾಗುತ್ತಿದೆ. ಆರಂಭದಲ್ಲಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇದನ್ನು ಕೊನೆಯವರೆಗೆ ಮುಂದುವರಿಸಿಕೊಂಡು ಹೋಗಬೇಕಿದೆ. ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ ಎನ್ನುವುದನ್ನು ಕ್ಯಾಂಟೀನ್‌ನಲ್ಲಿರುವ ಫಲಕದಲ್ಲಿ ಬರೆಸಬೇಕು’ ಎನ್ನುತ್ತಾರೆ ಸಾರ್ವಜನಿಕರು.

‘ಪ್ರತಿನಿತ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವೇಳೆಯಲ್ಲಿ 1,200ಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಜನರಿಗೆ ಒಳ್ಳೆಯ ಆಹಾರ ನೀಡುವುದರೊಂದಿಗೆ ಶುಚಿತ್ವ ಕಾಯ್ದುಕೊಳ್ಳುತ್ತಿದ್ದೇವೆ. ಸಾರ್ವಜನಿಕರಿಂದ ಒಳ್ಳೆಯ ಸ್ಪಂದನೆ ಲಭಿಸುತ್ತಿದೆ. ಮುಂಬರುವ ದಿನಗಳಲ್ಲಿ ಇಡ್ಲಿ, ರೊಟ್ಟಿ, ಚೌಚೌಬಾತ್ ನೀಡಲು ನಿರ್ಧರಿಸಿದ್ದೇವೆ’ ಎಂದು ಕ್ಯಾಂಟೀನ್‌ನ ಮೇಲ್ವಿಚಾರಕ ರವಿ ಕರ್ಕಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

*ನಾಲ್ಕು ದಿನಗಳಿಂದ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಸವಿಯಲು ಇಂದಿರಾ ಕ್ಯಾಂಟೀನ್‌ಗೆ ಬರುತ್ತಿದ್ದೇನೆ. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ
–ವಿಶ್ವಾಸ ಶ್ಯಾವೀರ್,ಗದುಗಿನ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT