ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ ಇಂದು

ಗದಗ– ವಾಡಿ ನೂತನ ರೈಲ್ವೆ ಮಾರ್ಗ
Last Updated 24 ಜನವರಿ 2019, 15:03 IST
ಅಕ್ಷರ ಗಾತ್ರ

ಕುಷ್ಟಗಿ: ಗದಗ– ವಾಡಿ ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣದ ಕಾಮಗಾರಿಗೆ ಜ. 25 ರಂದು ಶಂಕುಸ್ಥಾಪನೆ ನೆರವೇರಲಿದೆ.

2013-14ರಲ್ಲಿ ಮಂಜೂರಾಗಿದ್ದ ₹ 2,841.84 ಕೋಟಿ ವೆಚ್ಚದ 257.26 ಕಿಮೀ ರೈಲ್ವೆ ಮಾರ್ಗ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಭರದಿಂದ ಸಾಗಿದೆ. ಈಗ ಪಟ್ಟಣದಲ್ಲಿ ಶರೀಫ್‌ ನಗರದ ಬಳಿ ನಿಲ್ದಾಣ ತಲೆ ಎತ್ತಲಿದ್ದು ಕಟ್ಟಡ ಕಾಮಗಾರಿ ಆರಂಭಗೊಳಿಸಲು ನೈಋತ್ಯ ರೈಲ್ವೆ ವಲಯ ಸಿದ್ಧತೆ ಮಾಡಿಕೊಂಡಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಶಂಕುಸ್ಥಾಪನೆ ನೆರವೇರಿಸವರು. ಶಾಸಕ ಅಮರೇಗೌಡ ಬಯ್ಯಾಪುರ, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್‌, ಉಪ ಪ್ರಧಾನ ವ್ಯವಸ್ಥಾಪಕ ಶ್ರೀಮತಿ ಇ.ವಿಜಯಾ, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌, ಮುಖ್ಯ ಎಂಜಿನಿಯರ್‌ ರಾಮಗೋಪಾಲ್‌ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸುವರು.

ರೈಲು ನಿಲ್ದಾಣದಲ್ಲಿ ಕಚೇರಿ, ಪ್ರಯಾಣಿಕರ ಮೂಲಸೌಲಭ್ಯಗಳಿಗೆ, ಪ್ರಾಂಗಣ, ಗ್ಯಾಲರಿ, ಪ್ರವೇಶದ್ವಾರಗಳು ಸೇರಿದಂತೆ ಮೊದಲ ಹಂತದಲ್ಲಿ ₹ 2.2 ಕೋಟಿ ಮೊತ್ತದ ಕಾಮಗಾರಿ ನಡೆಯಲಿದೆ. ಒಂದು ವರ್ಷದ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಎರಡು ಪ್ರಯಾಣಿಕರ ಪ್ಲಾಟ್‌ಫಾರ್ಮ್, ಶೆಲ್ಟರ್‌ ಅಳವಡಿಕೆ, ಒಂದು ಉಪ ಮಾರ್ಗ, ಮಹಿಳೆಯರ ಮತ್ತು ಪುರುಷರ ನಿರೀಕ್ಷಣಾ ಕೊಠಡಿ ನಿರ್ಮಾಣ ಕಾಮಗಾರಿಗಳು ಪ್ರಸ್ತಾವನೆ ಹಂತದಲ್ಲಿವೆ ಎಂದು ನೈಋತ್ಯ ರೈಲ್ವೆ ವಲಯದ ಮಾಹಿತಿ ತಿಳಿಸಿದೆ.

ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಿಗೆ ಪ್ರಮುಖ ಸಂರ್ಪಕ ಕೊಂಡಿಯಾಗಲಿರುವ ಗದಗ ವಾಡಿ ರೈಲ್ವೆ ಮಾರ್ಗ ನಿರ್ಮಾಣಗೊಂಡರೆ ಗದಗ ಮತ್ತು ಸಿಕೆಂದರಾಬಾದ್ ನಡುವೆ ಒಟ್ಟು 150 ಕಿ.ಮೀ., ಅಂತರ ಕಡಿಮೆಯಾಗಲಿದೆ.

ರೈಲ್ವೆ ಮಾರ್ಗಕ್ಕೆ 3,764 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿ ಹಂತದಲ್ಲಿದ್ದು ಭೀಮಾ ಮತ್ತು ಕೃಷ್ಣಾ ನದಿಗಳಿಗೆ ಅಡ್ಡಲಾಗಿ ಬೃಹತ್‌ ಸೇತುವೆಗಳು ಮತ್ತು 27 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. 2025ರ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ಜನರಿಗೆ ರೈಲ್ವೆ ಸೇವೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

ಈ ವಿಷಯ ಕುರಿತು ಮಾತನಾಡಿದ ಸಂಸದ ಸಂಗಣ್ಣ ಕರಡಿ, ನಿಗದಿತ ಅವಧಿಯಲ್ಲಿ ರೈಲ್ವೆ ಓಡಾಟ ಆರಂಭಗೊಂಡರೆ ಹಿಂದುಳಿದಿರುವ ಈ ಪ್ರದೇಶಕ್ಕೆ ಬಹಳಷ್ಟು ಪ್ರಯೋಜನ ದೊರೆಯುತ್ತದೆ ಎಂದರು.

ರೈಲ್ವೆ ಸಂಪರ್ಕ ಸೇವೆ ಲಭ್ಯವಾದರೆ ಗದಗ ವಾಡಿ, ಹೈದರಾಬಾದ್‌ ಸೇರಿದಂತೆ ಪ್ರಮುಖ ಮಹಾನಗರಗಳಿಗೆ ಸುಲಭ ಸಂಪರ್ಕ ಸಾಧ್ಯವಾಗುತ್ತದೆ. ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಸಣ್ಣಪುಟ್ಟ ವ್ಯಾಪಾರ ವಹಿವಾಟಿಗೂ ಅನುಕೂಲವಾಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT