ಮತ್ಸ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ, ಬೇಸಿಗೆ ಆರಂಭದಲ್ಲೇ ತರಕಾರಿ ತುಟ್ಟಿ

7
ಮಾರುಕಟ್ಟೆಗೆ ತಗ್ಗಿದ ಆವಕ

ಮತ್ಸ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ, ಬೇಸಿಗೆ ಆರಂಭದಲ್ಲೇ ತರಕಾರಿ ತುಟ್ಟಿ

Published:
Updated:
Prajavani

ಗದಗ: ಕಳೆದೊಂದು ವಾರದಿಂದ ಮೀನಿನ ಧಾರಣೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಮತ್ಸ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಗದಗ ಮಾರುಕಟ್ಟೆಗೆ ಕಾರವಾರ, ಹೊನ್ನಾವರ ಬಂದರಿನಿಂದ ಸಮುದ್ರ ಮೀನುಗಳು ಪೂರೈಕೆಯಾಗುತ್ತದೆ. ಹೊಸಪೇಟೆ ಡ್ಯಾಂನಿಂದ ಮತ್ತು ಸ್ಥಳೀಯ ಕೆರೆಗಳಿಂದಲೂ ಮೀನುಗಳು ಪೂರೈಕೆಯಾಗುತ್ತವೆ.

ಬಂಗುಡೆ, ಬೂತಾಯಿ, ಕಾಣೆ, ರಾಣಿ, ಗೋಡಿ, ಪಾಂಪ್ಲೆಟ್‌, ಅಂಜಲ್‌, ಬೆಳ್ಳಂಜಿ, ದಂಡಸಿ, ಕಾಂಡೆ, ಸಂದಾಳೆ ಮೀನುಗಳ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಶೇ 30ರಷ್ಟು ಹೆಚ್ಚಿದೆ.

‘ಸಾಮಾನ್ಯವಾಗಿ ಶಬರಿಮಲೆ ಸೀಜನ್‌ನಲ್ಲಿ ಅವಳಿ ನಗರದಲ್ಲಿ ಮಾಂಸಾಹಾರ ತ್ಯೆಜಿಸುವವರು ಹೆಚ್ಚು.ಈಗ ಶಬರಿಮಲೆ ಸೀಜನ್‌ ಮುಗಿದಿದ್ದು, ಮೀನು, ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಬೆಲೆಯಲ್ಲೂ ಏರಿಕೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.

ಕಳೆದ ವಾರ 1 ಕೆ.ಜಿಗೆ ₹180ಕ್ಕೆ ಮಾರಾಟವಾಗುತ್ತಿದ್ದ ಬಂಗುಡೆ ಮೀನು ಈ ವಾರ ₹250ಕ್ಕೆ ಏರಿಕೆಯಾಗಿದೆ. ಸಿಲ್ವರ್‌ (ಬೆಳ್ಳಂಜಿ) ಮೀನು ಕೆ.ಜಿಗೆ ₹350 ದಾಟಿದೆ. ಎಲ್ಲ ಋತುವಿನಲ್ಲೂ ಮತ್ಸ್ಯಪ್ರಿಯರ ನೆಚ್ಚಿನ ಆಯ್ಕೆಯಾಗಿರುವ ಕಾಣೆ ಮೀನಿನ ಬೆಲೆ ಕೇಳಿ ಗ್ರಾಹಕರು ಹೌಹಾರುತ್ತಿದ್ದಾರೆ. ಸದ್ಯ ಕಾಣೆ ದರ ಕೆ.ಜಿಗೆ ₹500 ದಾಟಿದೆ. ಸಿಗಡಿಗೆ ಕೆ.ಜಿಗೆ ₹550 ಧಾರಣೆ ಇದೆ. ಸಂದಾಳೆ, ರಾಣಿ ಮೀನಿನ ಬೆಲೆ ಕೆ.ಜಿಗೆ ₹350ರಿಂದ ₹400ರವರೆಗೆ ಇದೆ.

ಸ್ಥಳೀಯವಾಗಿ ಕೆರೆಯಿಂದ ಹಿಡಿಯುವ ಮತ್ತು ತುಂಗಭದ್ರಾ ಡ್ಯಾಂನಿಂದ ಪೂರೈಕೆಯಾಗುವ ರೋಹು, ಕಾಟ್ಲಾ, ಕನ್ನಡಿ, ಮೀರುಗಲ್‌,
ಜಿಲೇಬಿ, ರೇವು ಜಾತಿಯ ಮೀನುಗಳಿಗೆ ಬೇಡಿಕೆ ಹೆಚ್ಚಿದೆ. ಈ ಮೀನುಗಳಿಗೆ ಕೆ.ಜಿಗೆ ಕನಿಷ್ಠ ₹250 ರಿಂದ ₹300ರವರೆಗೆ
ಧಾರಣೆ ಇದೆ.

ತರಕಾರಿಯೂ ತುಟ್ಟಿ:

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಗದಗ ಮಾರುಕಟ್ಟೆಗೆ ತುಮಕೂರು, ದಾವಣಗೆರೆ, ಬಾಗಲಕೋಟೆಯಿಂದ ತರಕಾರಿ ಆವಕ ಪ್ರಮಾಣ ಕಡಿಮೆಯಾಗಿದೆ. ಸ್ಥಳೀಯವಾಗಿ ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡದಿಂದ ಬರುವ ತಾಜಾ ತರಕಾರಿ ಪ್ರಮಾಣವೂ ಕುಸಿದಿದ್ದು, ಬೇಸಿಗೆ ಆರಂಭದಲ್ಲೇ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.

ಈರುಳ್ಳಿ ದರ ಕುಸಿತದ ಲಾಭವು ಗ್ರಾಹಕರಿಗೂ ಇನ್ನೂ ಸಂಪೂರ್ಣವಾಗಿ ವರ್ಗಾವಣೆ ಆಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಹಳೆಯ ಈರುಳ್ಳಿ ಕೆ.ಜಿಗೆ ₹20ರಂತೆ, ಹೊಸ ಈರುಳ್ಳಿ ಕೆ.ಜಿಗೆ ₹15ರಂತೆ ಮಾರಾಟವಾಗುತ್ತಿದೆ. ಗಜ್ಜರಿ, ಬೀನ್ಸ್‌, ಹೀರೇಕಾಯಿ, ಹಾಗಲಕಾಯಿ, ಟೊಮೊಟೊ, ಹೂವು ಕೋಸು, ಎಲೆ ಕೋಸಿನ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !