ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ವಿರೋಧಿ ಆಶಯ ಸಲ್ಲದು’

ಜಿಲ್ಲಾ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ; ಸಚಿವ ತಿಮ್ಮಾಪುರ್ ಧ್ವಜಾರೋಹಣ
Last Updated 26 ಜನವರಿ 2019, 15:09 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬರ ನಿರ್ವಹಣೆಗೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು,ಕುಡಿಯುವ ನೀರು, ಕೂಲಿಕಾರ್ಮಿಕರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿರಂತರ ನಿಗಾ ವಹಿಸಲಾಗುತ್ತಿದೆ’ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ವಿವಿಧ ರಕ್ಷಣಾ ದಳಗಳ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಎನ್‌.ಮಹೇಶ್‌ ಅವರ ರಾಜೀನಾಮೆ ನಂತರ ಗದಗ ಜಿಲ್ಲೆಗೆ ಹೊಸ ಉಸ್ತುವಾರಿ ಮಂತ್ರಿ ನೇಮಕವಾಗಿಲ್ಲ. ಉಸ್ತುವಾರಿ ಮಂತ್ರಿ ಇಲ್ಲದ ಕಾರಣ,ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕಾಗಿ ಸಚಿವ ತಿಮ್ಮಾಪುರ್‌ ಅವರನ್ನು ಸರ್ಕಾರ ನೇಮಿಸಿತ್ತು.

‘ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಆದರೆ, ಕೆಲವರು ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. `ಆಪರೇಷನ್ ಕಮಲ'ವೂ ಇದರಿಂದ ಹೊರತಾಗಿಲ್ಲ’ ಎಂದರು.

‘ರಾಜ್ಯ ಸರ್ಕಾರವು ರೈತರ ಒಳಿತಿಗಾಗಿ ಕೃಷಿಸಾಲ ಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಭಿವೃದ್ಧಿಗೆ ಜನರ ಸಹಭಾಗಿತ್ವವೂ ಮುಖ್ಯ. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಮ್ಮಿಶ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಈಗಾಗಲೇ ಶೇ 45ರಷ್ಟು ಬಾಕಿ ಮೊತ್ತವನ್ನು ಬೆಳೆಗಾರರಿಗೆ ಪಾವತಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಬೇಟಿಬಚಾವೋ ಬೇಟಿ ಪಢಾವೊ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಗದಗ ಜಿಲ್ಲೆ ವಿಶೇಷ ಸಾಧನೆ ಮಾಡಿದೆ.ಸ್ವಚ್ಛ ಭಾರತ ಅಭಿಯಾನದಡಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು, ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅತ್ಯುತ್ತಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಕರ್ಷಕ ಪಥಸಂಚಲನ:
ಪಥಸಂಚಲನದನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ಎಸ್.ಧನಗರ ವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡಿನ 'ಮೇರೆ ದೇಶ ಕಿ ಧರತಿ' ಹಾಡಿನ ಹಿಮ್ಮೇಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಪೊಲೀಸ್ ಪಡೆ, ಹೋಮಗಾರ್ಡ್‌, ಅಗ್ನಿಶಾಮಕ ದಳ, ಅರಣ್ಯ ರಕ್ಷಕ ದಳ ಆಕರ್ಷಕ ಪಥಸಂಚಲನ ನಡೆಸಿತು. ವಿ.ಡಿ.ಎಸ್.ಟಿ, ಸಿ.ಡಿ.ಓ ಎಸ್.ಎಂ.ಕೆ. ನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಸೆಂಟ್‌ ಜಾನ್ಸ್‌ ಪ್ರಾಥಮಿಕ ಶಾಲೆ, ಸಿ.ಎಸ್.ಪಾಟೀಲ ಶಾಲೆ, ತೊಂಟದಾರ್ಯ ಗಂಡು ಮಕ್ಕಳ ಪ್ರೌಢ ಶಾಲೆ, ಲೋಯಲಾ ಶಾಲೆ, ಸಿ.ಎಸ್.ಪಾಟೀಲ ಪ್ರಾಥಮಿಕ ಶಾಲೆ, ಶಾಸ್ತ್ರೀಜಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸನ್ಮಾನಿತರು: ಜಯದೇವ ಮೆಣಸಗಿ, ಎಸ್.ವಿ. ಶಿವಪ್ಪಯ್ಯನಮಠ, ಬಸವ್ವ ಮಾದರ, ಯಮನಪ್ಪ ಚಿತ್ರಗಾರ, ಸಾವಿತ್ರಿ ಗೌಡರ, ಪವಿತ್ರಾ ಮಾಯಪ್ಪನವರ, ರಕ್ಷಿತಾ ರಾಜೂರ, ದರ್ಶನಾ ಛೇಡ್ಡಾ, ಭೂಮಿಕಾ ಮಟ್ಟ, ಅನೀಲ ಹಕ್ಕಾಪಕ್ಕಿ, ಅಭಿಷೇಕ ವಜ್ರಭಂಡಿ, ಕಾರ್ತಿಕ ಗುರಿಕಾರ, ವಿಜಯ ಮೋಹರೆ, ಪುಷ್ಪಾ ಹುಯಿಲಗೋಳ,ಅಂಜಲಿ ಹರಿಜನ, ಪವಿತ್ರಾ ಕುರ್ತಕೋಟಿ, ನೇತ್ರಾವತಿ, ಶ್ವೇತಾ ಸಂಡೂರ, ಶ್ರೀಕಾಂತ ಐಲಿ, ನಾಗರಾಜ ಹಿಟ್ಟನಳ್ಳಿ, ಕೃಷ್ಣ ಬಡಿಗೇರ,ವಿರೂಪಾಕ್ಷ ಅರಳಿ, ಸಂತೋಷ ಪತ್ತಾರ, ಅನಿತಾ ಅರವಟಗಿ, ಪೂನಂ ಬಸವಾ, ಶಾಲಿನಿ ಫಾಣಿಬಾತ, ಸಹನಾ ಕಲಾಲ, ಪೂಜಾ ಜಕ್ಕಲ, ರಿತಿಕಾ ಸುಲಾಖೆ, ವಿನಯ ಅಕ್ಕಿ ಅವರನ್ನು ಸಚಿವ ಆರ್.ಬಿ.ತಿಮ್ಮಾಪುರ ಸನ್ಮಾನಿಸಿದರು.

ಸರ್ವೋತ್ತಮ ಸೇವಾ ಪ್ರಶಸ್ತಿ: ಸರ್ಕಾರಿ ನೌಕರರಿಗಾಗಿ ನೀಡುವ ಸರ್ವೋತ್ತಮ ಪ್ರಶಸ್ತಿಯು ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಎಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅಕ್ಕಮಹಾದೇವಿ ಕೆ.ಎಚ್, ರೋಣ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ಎಸ್.ಪವಾಡಿಗೌಡರ, ಕೃಷಿ ಅಧಿಕಾರಿ ಮಲ್ಲಯ್ಯ.ಸಿ. ಕೊರವನವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಬಸವರಾಜ ಬಿ.ಗೂಳೇರ, ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಶಿವಯ್ಯ ಕುಲಕರ್ಣಿ ಅವರಿಗೆ ಲಭಿಸಿದೆ.

ಕಾಂಗ್ರೆಸ್‍ಗೆ ಭೀಮ ಬಲ
‘ಪ್ರಿಯಾಂಕಾ ಗಾಂಧಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರಿಂದ ಕಾಂಗ್ರೆಸ್‍ಗೆ ಭೀಮ ಬಲ ಬಂದಂತಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಪಕ್ಷಕ್ಕೆ ನಡುಕ ಪ್ರಾರಂಭವಾಗಿದೆ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.

‘ದೇಶದಲ್ಲಿ ಮತ್ತೆ ಇಂದಿರಾ ಗಾಂಧಿ ಅವರನ್ನು ನೆನಪಿಸುವ ವಾತಾವರಣ ಸೃಷ್ಟಿಯಾಗಲಿದೆ ಎಂದ ಅವರು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್- ಕಾಂಗ್ರೆಸ್ ಸೀಟು ಹಂಚಿಕೆ ಕುರಿತು ರಾಜ್ಯ ಉಸ್ತುವಾರಿ ವೇಣುಗೋಪಾಲ ಹಾಗೂ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರಾಥಮಿಕ ಹಂತದ ಚರ್ಚೆಗಳು ಶುರುವಾಗಿವೆ’ ಎಂದರು.

‘ಬಿಜೆಪಿ ಪ್ರತಿಪಕ್ಷದ ಜವಾಬ್ದಾರಿಯನ್ನು ಬಿಟ್ಟು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ರಾಜ್ಯದ ಮತದಾರರೇ ಬಿಜೆಪಿಗೆ ತಕ್ಕ ಉತ್ತರ ನೀಡುವರು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT