ಗುರುವಾರ , ಜೂನ್ 30, 2022
24 °C
ಬಿತ್ತನೆ ಬೀಜ ಉತ್ಪಾದಕರು, ಮಾರಾಟಗಾರರ ಜೊತೆ ಡಿ.ಸಿ ಸಭೆ

‘ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮುಂಗಾರು ಹಂಗಾಮು ಸಮೀಪಿಸಿದ್ದು, ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ, ರಸಗೊಬ್ಬರ, ಬಿತ್ತನೆ ಬೀಜ ಉತ್ಪಾದಕರು ಹಾಗೂ ಮಾರಾಟಗಾರರೊಂದಿಗೆ ಶನಿವಾರ ನಡೆದ ಮುಂಗಾರು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರ ಕೃಷಿ ಜಮೀನುಗಳಲ್ಲಿ ಬಿತ್ತನೆಗೆ ಬೇಕಾದಂತಹ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆಯಾಗುವಂತೆ ನಿಗಾವಹಿಸಬೇಕು. ಬಿತ್ತನೆ ಬೀಜ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮ ಜರುಗಿಸಲು ಮುಂದಾಗಬೇಕು’ ಎಂದು ನಿರ್ದೇಶನ ನೀಡಿದರು.

ಕೃಷಿ ಇಲಾಖೆ ಅಧಿಕಾರಿಗಳು ಪ್ರತಿದಿನ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಲ್ಲದೇ, ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ವಿವರ ಹಾಗೂ ದರಗಳನ್ನು ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಿರುವ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದರು.

ರೈತರ ಕೃಷಿ ಚಟುವಟಿಕೆಗಳ ಅನುಕೂಲಕ್ಕೆ ತಕ್ಕಂತೆ ರೈತ ಸಂಪರ್ಕ ಕೇಂದ್ರಗಳನ್ನು ಬೇಗನೆ ತೆರೆಯಬೇಕು. ರೈತರ ಕೃಷಿ ಚಟುವಟಿಕೆಗಳಿಗೆ ಏನೂ ಕೊರತೆಯಾಗದಂತೆ ನಿಗಾವಹಿಸಬೇಕು. ರೈತರಿಂದ ಯಾವುದೇ ದೂರು ಬರದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

‘ಜಿಲ್ಲೆಗೆ ಸರಬರಾಜು ಆಗಬೇಕಾದ ರಸಗೊಬ್ಬರವನ್ನು ವಿಳಂಬವಾಗದಂತೆ ನಿಗದಿತ ಪ್ರಮಾಣದಲ್ಲಿ ವಿತರಿಸಬೇಕು. ರೈತರಿಗೆ ಮತ್ತೊಂದು ಕಂಪನಿಯ ರಸಗೊಬ್ಬರ ಖರೀದಿಸುವಂತೆ ಒತ್ತಡ ಹೇರಬಾರದು. ನಿಗದಿತ ದರಕ್ಕೆ ಮಾರಾಟ ಮಾಡಬೇಕು. ರಸಗೊಬ್ಬರದ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾತನಾಡಿ, ‘2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,77,603 ಹೆಕ್ಟೇರ್‌‌ ಪ್ರದೇಶದಲ್ಲಿ 3,56,048 ಟನ್‌ಗಳಷ್ಟು ಆಹಾರ ಹಾಗೂ ಎಣ್ಣೆ ಕಾಳುಗಳನ್ನು, ಹಿಂಗಾರು ಹಂಗಾಮಿನಲ್ಲಿ 2,52,336 ಹೆಕ್ಟೇರ್‌ ಪ್ರದೇಶದಲ್ಲಿ 2,46,293 ಟನ್‌ಗಳಷ್ಟು ಆಹಾರ ಹಾಗೂ ಎಣ್ಣೆ ಕಾಳುಗಳನ್ನು ಉತ್ಪಾದಿಸಲಾಗಿದೆ’ ಎಂದರು.

ಕೃಷಿ ಮಾರಾಟ ಮಂಡಳಿ ಅಧಿಕಾರಿಗಳು, ತಾಲ್ಲೂಕು ಕೃಷಿ ಅಧಿಕಾರಿಗಳು, ಬಿತ್ತನೆ ಬೀಜ, ರಸಗೊಬ್ಬರ ಉತ್ಪಾದಕರು ಹಾಗೂ ಮಾರಾಟಗಾರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.