ಗುರುವಾರ , ಅಕ್ಟೋಬರ್ 21, 2021
29 °C
ಹಿಂಗಾರು ಬೆಳೆಗಳ ಕೃಷಿ ವಿಚಾರ ಸಂಕಿರಣ- ರೈತರೊಂದಿಗೆ ಸಂವಾದ

‘ಸುಧಾರಿತ ಕೃಷಿಯಿಂದ ಆರ್ಥಿಕ ಸಬಲತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಫಲವತ್ತತೆ, ಹೆಚ್ಚು ಇಳುವರಿ ನೀಡಬಲ್ಲ ಹಾಗೂ ಬರ ನಿರೋಧಕ ಶಕ್ತಿಯುಳ್ಳ ಸುಧಾರಿತ ತಳಿಯ ಬೀಜಗಳನ್ನು ಬಿತ್ತುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಗದಗ ಕೃಷಿ ಸಂಶೋಧನಾ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ.ರಫಿ ಹೇಳಿದರು.

ಅಖಿಲ ಕರ್ನಾಟಕ ಕುಡುಒಕ್ಕಲಿಗರ ಸಂಘ, ಕೃಷಿ ಇಲಾಖೆ ಗದಗ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಗದಗ, ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಸಂಯುಕ್ತ ಆಶ್ರಯದಲ್ಲಿ ಕುಡುವಕ್ಕಲಿಗರ ಭವನದಲ್ಲಿ ನಡೆದ ‘ಹಿಂಗಾರು ಬೆಳೆಗಳ ಕೃಷಿ ವಿಚಾರ ಸಂಕಿರಣ ಹಾಗೂ ರೈತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಿಎಚ್ 256 ಶೇಂಗಾ ತಳಿಯು ಮುಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆಯಬಹುದಾದ ಸುಧಾರಿತ ತಳಿಯಾಗಿದ್ದು ಹೆಚ್ಚು ಇಳುವರಿ, ಉತ್ತಮ ಗುಣಮಟ್ಟದ ಮೇವು ಹಾಗೂ ಎಲೆಚಿಕ್ಕಿ ರೋಗ, ತುಕ್ಕು ರೋಗ ನಿರೋಧಕ ಶಕ್ತಿ ಹೊಂದಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಈ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ’ ಎಂದು ಹೇಳಿದರು.

ಡಿಎಚ್ 256 ತಳಿಯ ಶೇಂಗಾ ಬಿತ್ತನೆ ಮಾಡಿದ ನರಗುಂದ ತಾಲ್ಲೂಕಿನ ಭೈರನಹಟ್ಟಿಯ ಪ್ರಗತಿಪರ ರೈತ ಚಿಕ್ಕನಗೌಡ್ರ ಎಕರೆಗೆ 48 ಚೀಲಗಳ ಇಳುವರಿ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ ಎಂದರು.

ಡಿಜಿಜಿವಿ-2 ಹೆಸರು ಬೆಳೆ ಯಾಂತ್ರಿಕ ಕಟಾವಿಗೆ ಸೂಕ್ತವಾದ ತಳಿಯಾಗಿದ್ದು ಹಿಂಗಾರು ಕಡಲೆಯಲ್ಲಿ ಡಿಬಿಜಿವಿ-204, ಎನ್‍ಬಿಇಜಿ-47 ತಳಿ ಯಾಂತ್ರಿಕ ಕಟಾವಿಗೆ ಸೂಕ್ತವಾದ ತಳಿಯಾಗಿದೆ. ಕಳೆದ ವರ್ಷ ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಎ20-20 ಕುಸುಬೆ ತಳಿಯ ಬೀಜಗಳು ಮಾರಾಟಕ್ಕೆ ಲಭ್ಯವಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಿವೃತ್ತ ಸಹಾಯಕ ಕೃಷಿ ನಿರ್ದೆಶಕ ಡಾ.ಎಸ್.ಎ.ಸೂಡಿಶೆಟ್ಟರ, ಹಿಂಗಾರು ಬೆಳೆಗಳಾದ ಶೇಂಗಾ, ಜೋಳ, ಕಡಲೆ, ಕುಸುಬಿ, ಗೋಧಿ ಬೆಳಗಳ ಸಮಗ್ರ ನಿರ್ವಹಣೆ ಕುರಿತು ವಿವರಣೆ ನೀಡಿದರು.

ಹುಲಕೋಟಿಯ ಕೆವಿಕೆ ವಿಶ್ರಾಂತ ವಿಜ್ಞಾನಿ ಎಸ್.ಕೆ.ಮುದ್ಲಾಪೂರ ಅವರು ಕ್ಷೇತ್ರ ಸಮಸ್ಯೆಗಳಿಗೆ ಸ್ಪಂದಿಸಿ ಕೀಟರೋಗದ ಬಾಧೆ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಎನ್.ಎಚ್.ಬಂಡಿ  ಮಣ್ಣಿನ ಫಲವತ್ತತೆ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಕುಡುಒಕ್ಕಲಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರಗೌಡ ಎಚ್.ಪಾಟೀಲ ಮಾತನಾಡಿ, ‘ರೈತರು ವೈಜ್ಞಾನಿಕ ಬೆಳೆಗಳಿಗೆ ಹೆಚ್ಚು ಒತ್ತು ನೀಡಬೇಕು. ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವಂತಾದರೆ ಇನ್ನೂ ಹೆಚ್ಚಿನ ಆರ್ಥಿಕ ಸ್ವಾವಲಂಬನೆ ಹೊಂದಬಹುದು. 8-10 ಪ್ರಗತಿಪರ ರೈತರು ಸೇರಿಕೊಂಡು ಈ ರೀತಿಯ ಕಾರ್ಯಕ್ಕೆ ಮುಂದಾಗಿ ಸಹಕಾರಿ ಸಂಘದ ಮೂಲಕ ಇತರ ರೈತರಿಗೆ ನೆರವಾಗಬೇಕು’ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಪಿ.ಆರ್.ರವಿ, ಮಲ್ಲಯ್ಯ ಕೊರವನವರ, ಪ್ರಗತಿಪರ ರೈತರಾದ ಈರಪ್ಪ ಬಿಸನಳ್ಳಿ, ವಿ.ಜಿ.ಕನಾಜ, ನಿಂಗಪ್ಪ ಹಳ್ಳದ, ಫಕ್ಕೀರಪ್ಪ ಹೆಬಸೂರ, ಬಸಪ್ಪ ಕಲಬಂಡಿ, ಚನ್ನಪ್ಪ ಹಂಚಿನಾಳ,
ಚಂದ್ರು ಕರಿಸೋಮನಗೌಡ್ರ ಉಪಸ್ಥಿತರಿದ್ದರು. ಶರಣಪ್ಪ ದಿಡ್ಡಿಮನಿ ನಿರೂಪಿಸಿ, ವಂದಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಸಾಕಷ್ಟು ಸುಧಾರಣೆಗೊಂಡಿದ್ದು, ರೈತರು ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗುವುದು ಅವಶ್ಯಕ

ಎನ್.ಎಸ್.ಹಿರೇಮನಿಪಾಟೀಲ, ಗದಗ ಎಪಿಎಂಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು