100 ಅಡಿ ಆಳದ ಪುರಾತನ ಬಾವಿ ಪತ್ತೆ..!

7

100 ಅಡಿ ಆಳದ ಪುರಾತನ ಬಾವಿ ಪತ್ತೆ..!

Published:
Updated:
Deccan Herald

ಲಕ್ಷ್ಮೇಶ್ವರ: ಪಟ್ಟಣದ ಗಡ್ಡದೇವರಮಠದ ಹಿಂಭಾಗದಲ್ಲಿ 100 ಅಡಿ ಆಳದ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಬುಧವಾರ ಇಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿದ್ದ ವೇಳೆ ನೀರಿಲ್ಲದ ಈ ಬಾವಿ ಗೋಚರಿಸಿದೆ.

ಲಕ್ಷ್ಮೇಶ್ವರದಲ್ಲಿ 700ಕ್ಕೂ ಹೆಚ್ಚು ಬಾವಿಗಳಿದ್ದವು ಎನ್ನುತ್ತದೆ ಇತಿಹಾಸ. ಹಲವು ಬಾವಿಗಳಲ್ಲಿ ನೀರು ಬತ್ತಿದ್ದರಿಂದ, ಅದರ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಮುಚ್ಚಲಾಗಿದೆ. ರಸ್ತೆ ಮತ್ತು ಒಳಚರಂಡಿ ಕಾಮಗಾರಿ ನಡೆಯುವಾಗ ಹಲವು ಬಾವಿಗಳು ಮತ್ತೆ ಬೆಳಕಿಗೆ ಬರುತ್ತಿವೆ.

ಗುರುಶಾಂತಯ್ಯ ಗಡ್ಡದೇವರಮಠ ಅವರಿಗೆ ಸೇರಿದ ಮೂಲ ಆಸ್ತಿಯು ಭೂ ಪರಿವರ್ತನೆ ಆದಾಗ, ಅಲ್ಲಿದ್ದ ಬಾವಿಯನ್ನು ಮುಚ್ಚಲಾಗಿತ್ತು. ಸದ್ಯ ಈ ಸ್ಥಳದಲ್ಲಿ ರಸ್ತೆ ಹಾಗೂ ಮನೆಗಳು ನಿರ್ಮಾಣಗೊಂಡಿವೆ. ಇಲ್ಲಿ, ಇಷ್ಟು ಆಳವಾದ ಬಾವಿ ಇದೆ ಎನ್ನುವುದು ನಿವಾಸಿಗಳಿಗೆ ತಿಳಿದಿರಲಿಲ್ಲ. ಪತ್ತೆಯಾಗಿರುವ ಬಾವಿಯು ರಸ್ತೆ ಮಧ್ಯದಲ್ಲೇ ಇರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಚಿಕ್ಕ ಮಕ್ಕಳು ಬಾವಿ ಹತ್ತಿರ ಸುಳಿಯದಂತೆ, ಮನೆ ಬಾಗಿಲು ಹಾಕಿಕೊಂಡು ಕಾಯುವ ಪರಿಸ್ಥಿತಿ ಪಾಲಕರಿಗೆ ಬಂದಿದೆ.

‘ನಮ್ಮ ಮನಿ ಮುಂದ ಹಳೆ ಬಾವಿ ಪತ್ತೆ ಆಗೇತಿ. ಅದನ್ನ ನೋಡಾಕಂತ ಮಂದಿ ಬರಾಕತ್ತಾರ. ಅವರ ಕೂಡ ನಮ್ಮ ಮಕ್ಕಳೂ ಬಾವಿ ಸಮೀಪ ಹೊಂಟಾವು, ಈ ಬಾವಿನ ಲಗೂನ ಮುಚ್ಚಸ್ರೀ’ ಎಂದು ಅಲ್ಲಿನ ನಿವಾಸಿ ಶಂಭುಲಿಂಗಯ್ಯ ಕೂಸನೂರಮಠ ಆಗ್ರಹಿಸಿದರು.

ಪುರಸಭೆ ಹಾಗೂ ಒಳಚರಂಡಿ ಯೋಜನೆ ಗುತ್ತಿಗೆದಾರರು, ಈ ಬಾವಿಯನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚಿ, ಜನರ ಆತಂಕ ದೂರ ಮಾಡಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !