ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕಲರವ: ಬರಮಾಡಿಕೊಂಡ ಶಿಕ್ಷಕರು

ಗದಗ: ಕೋವಿಡ್-19 ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಅಂಗನವಾಡಿಗಳು ಸೋಮವಾರದಿಂದ ಪ್ರಾರಂಭಗೊಂಡಿದ್ದು ಮಕ್ಕಳಿಗೆ ಹೂವು, ಸಿಹಿ ತಿನಿಸುಗಳನ್ನು ನೀಡಿ ಸ್ವಾಗತಿಸಲಾಯಿತು.
‘ಗದಗ ಜಿಲ್ಲೆಯಲ್ಲಿ 1,166 ಅಂಗನವಾಡಿಗಳಿದ್ದು, ಮೂರರಿಂದ ಆರು ವರ್ಷದೊಳಗಿನ 40 ಸಾವಿರ ಮಕ್ಕಳು ಇದ್ದಾರೆ. ಸೋಮವಾರ ನಡೆದ ಪ್ರಾರಂಭೋತ್ಸವದಲ್ಲಿ ಅಂದಾಜು 10 ಸಾವಿರ ಮಕ್ಕಳು ಹಾಜರಿದ್ದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ. ತಿಳಿಸಿದ್ದಾರೆ.
‘ಪ್ರಾರಂಭೋತ್ಸವದ ಅಂಗವಾಗಿ ಅಂಗನವಾಡಿ ಕೇಂದ್ರಗಳನ್ನು ತಳಿರು ತೋರಣ, ರಂಗೋಲಿ ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಅಂಗವಾಗಿ ಸೀಮಿತ ಸಂಖ್ಯೆಯ ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿತ್ತು. ಮಕ್ಕಳಿಗೆ ಉಪಾಹಾರವನ್ನು ಈ ಹಿಂದಿನಂತೆಯೇ ಮನೆಯಲ್ಲಿಯೇ ವಿತರಿಸಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ ಇಲಾಖೆಯ ನಿರ್ದೇಶನ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆಯುವ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಸೋಮವಾರ ಬೆಳಿಗ್ಗೆ 10ಕ್ಕೆ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಬಾಲವಿಕಾಸ ಸಮಿತಿ ಸದಸ್ಯರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಪ್ರೀತಿಯಿಂದ ಬರಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಬೆಟಗೇರಿ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಪುನರಾರಂಭೋತ್ಸವಕ್ಕೆ ಚಾಲನೆ ನೀಡಿದರು.
‘ಸರ್ಕಾರ ಪ್ರಕಟಿಸಿರುವ ಕೋವಿಡ್ ಮಾರ್ಗಸೂಚಿಗಳ ಅನ್ವಯ ಅಂಗನವಾಡಿ ತರಗತಿಗಳನ್ನು ನಡೆಸಬೇಕು. ಪಾಲಕರ ಇಚ್ಛೆ ಅನುಸಾರ ಮಕ್ಕಳನ್ನು ಅಂಗನವಾಡಿಯಲ್ಲಿ ದಾಖಲಿಸಬೇಕು. ಮಕ್ಕಳ ಕಾಳಜಿಗೆ ಹೆಚ್ಚಿನ ಗಮನ ಹರಿಸಬೇಕು. ಅಂಗವಾಡಿಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಿಸಬೇಕು’ ಎಂದು ಸಲಹೆ ನೀಡಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ಮಾತನಾಡಿ, ‘ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಹಿರಿದಾಗಿದೆ’ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುಲಿಗೆವ್ವ ಜೋಗೇರ ಸ್ವಾಗತಿಸಿದರು. ಉಪ ನಿರ್ದೇಶಕ ಉಸ್ಮಾನ್ ಎ. ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.