ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಜೊತೆ ಕೈ‌ಜೋಡಿಸಿದ ಬಿಜೆಪಿ

ಯುವ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ
Last Updated 2 ಆಗಸ್ಟ್ 2022, 2:09 IST
ಅಕ್ಷರ ಗಾತ್ರ

ಗದಗ: ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಗದಗ-ಬೆಟಗೇರಿ ಅವಳಿ‌ ನಗರದ ಜನರ ಸಮಸ್ಯೆ ಪರಿಹಾರಕ್ಕೆ ನಗರಸಭೆಯೊಂದಿಗೆ ಬಿಜೆಪಿ ಕೂಡ ಕೈಜೋಡಿಸಿದೆ. ಯುವ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ.

ಭಾನುವಾರ ರಾತ್ರಿ ಸುರಿದ ಮಳೆಯ ಹಿನ್ನಲೆಯಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರೊಂದಿಗೆ
ಸೋಮವಾರ ಬೆಳಿಗ್ಗೆ ಅವಳಿ ನಗರ ಪ್ರದಕ್ಷಿಣೆ ನಡೆಸಿದ ಅನಿಲ್ ಮೆಣಸಿನಕಾಯಿ ಅವರು ರಸ್ತೆ, ರಾಜಕಾಲುವೆ, ಗಟಾರುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಸುಮಾರು 12 ಜೆಸಿಬಿಗಳನ್ನು ನಿಯೋಜಿಸಿದ್ದಾರೆ.

ಸ್ವಚ್ಛತಾ ಅಭಿಯಾನದ ಕುರಿತು ಮಾತನಾಡಿದ ಅನಿಲ್ ಮೆಣಸಿನಕಾಯಿ, ಅವಳಿ ನಗರದ ಎಸ್.ಎಂ.ಕೃಷ್ಣ‌ನಗರ, ಗಂಗಿಮಡಿ, ಮಂಜುನಾಥ ನಗರ, ಬಣ್ಣದ ನಗರ ಸೇರಿದಂತೆ ಹಲವು ಜನವಸತಿ ಪ್ರದೇಶಗಳಲ್ಲಿ ಅವೈಜ್ಞಾನಿಕ ಸಿಸಿ ರಸ್ತೆಗಳನ್ನು ನಿರ್ಮಿಸಿರುವುದರಿಂದ ಇಲ್ಲಿರುವ ಮನೆಗಳ ಒಳಗೆ ಮಳೆ ನೀರು ಸಂಪೂರ್ಣವಾಗಿ ನುಗ್ಗುತ್ತಿದೆ. ಅಲ್ಲದೆ, ರಾಜಕಾಲುವೆಗಳು, ಗೇಣುದ್ದವಿರುವ ಗಟಾರುಗಳು ಮುಚ್ಚಿಕೊಂಡಿವೆ’ ಎಂದು ಹೇಳಿದರು.

‘ಹೀಗಾಗಿ ಆಡಳಿತ ಪಕ್ಷದ ನಗರಸಭೆ ಸದಸ್ಯರು ಸ್ವಚ್ಛತಾ ಕಾರ್ಯದ ಜತೆಗೆ ಮಳೆ ನೀರು ಮನೆಯೊಳಗೆ ನುಗ್ಗಬಾರದು ಎಂಬ ಕಾರಣಕ್ಕೆ ದಿನದ ಇಪ್ಪತ್ತನಾಲ್ಕು ತಾಸು ಪ್ರಾಮಾಣಿಕವಾಗಿ ಕೆಲಸ‌ ಮಾಡುತ್ತಿದ್ದಾರೆ. ಇದೀಗ ಅವರೊಂದಿಗೆ ಬಿಜೆಪಿಯೂ ಕೈಜೋಡಿಸಿದ್ದು 12 ಜೆಸಿಬಿಗಳ ಮೂಲಕ ಬ್ಲಾಕ್ ಆಗಿರುವ ರಾಜಕಾಲುವೆಗಳ ಸ್ವಚ್ಛತೆ ಹಾಗೂ ಪಕ್ಕದಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತ್ವರಿತವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ’ ಎಂದರು.

ಗದಗ-ಬೆಟಗೇರಿ ಅವಳಿ‌ ನಗರದಲ್ಲಿನ ಇಂತಹ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಸ್ಥಳೀಯ ಶಾಸಕರು, ಗುತ್ತಿಗೆದಾರರು ಮಾಡಿದ ತಪ್ಪಿನಿಂದಾಗಿ ಇಂದಿಗೂ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಆರೋಪಿಸಿದರು.

ನಾಲ್ಕನೇ ವಾರ್ಡ್‌ನ ಬಣ್ಣದ ನಗರದಲ್ಲಿ ರಸ್ತೆ, ಗಟಾರುಗಳು ಇಲ್ಲದಿದ್ದರೂ ರಸ್ತೆ, ಗಟಾರುಗಳನ್ನು ನಿರ್ಮಿಸಲಾಗಿದೆ ಎಂದು ಬಿಲ್ ತೆಗೆಸಿಕೊಂಡಿದ್ದಾರೆ. ಇಂತಹ ಅವ್ಯವಹಾರಗಳು ಅವಳಿ ನಗರದಲ್ಲಿ ಸಾಕಷ್ಟು ‌ನಡೆದಿವೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು ಗಮನಹರಿಸಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.

ಬಿಜೆಪಿಯ ಸ್ವಚ್ಛತಾ ಅಭಿಯಾನದ ಅಂಗವಾಗಿ ಅವಳಿ ನಗರದ ವಾರ್ಡ್ ನಂ.1, 4, 5, 6, 7 ಹಾಗೂ 35ನೇ ವಾರ್ಡ್ ಸೇರಿದಂತೆ ವಿವಿಧೆಡೆ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ಮಾಧುಸಾ ಮೇರವಾಡೆ, ಲಕ್ಷ್ಮೀ ಕಾಕಿ, ಮುಖಂಡರಾದ ಮಹೇಶ ದಾಸರ, ಶಂಕರ್ ಕಾಕಿ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT