ಮುಂಡರಗಿ: ತಾಲ್ಲೂಕಿನಲ್ಲಿ ಅತ್ಯುತ್ತಮ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಮೆಕ್ಕೆಜೋಳ ಬೆಳೆಯಲ್ಲಿ ಅಧಿಕ ಇಳುವರಿ ಪಡೆದಿರುವ ರೈತರಿಗೆ ಕೃಷಿ ಪ್ರಶಸ್ತಿ ಯೋಜನೆಯ ಅಡಿ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕನಿಷ್ಟ 1 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಿರುವ ಆಸಕ್ತ ರೈತರು ತಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಕುರಿತು ಮಾಸಾಂತ್ಯದೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲ್ಲೂಕಿನಾದ್ಯಂತ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟ ಸುಧಾರಿಸುವುದರೊಂದಿಗೆ ಬರ ಉಪಶಮನದ ಗುರಿ ಹೊಂದಿರುವ ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿಯೂ ಸಹಾಯಧನಕ್ಕಾಗಿ ತಾಲ್ಲೂಕಿನ ರೈತರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆಗಾಗಿ ಬದು ನಿರ್ಮಾಣ, ಕೃಷಿಹೊಂಡ, ಕೃಷಿಹೊಂಡದ ಸುತ್ತಲೂ ತಂತಿ ಬೇಲಿ, ಪಾಲಿಥಿನ್ ಹೊದಿಕೆ, ಡಿಸೇಲ್ ಪಂಪ್‍ಸೆಟ್ ಮತ್ತು ತುಂತುರು ನೀರಾವರಿ ಘಟಕಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಘಟಕಗಳಿಗೆ ಸಹಾಯಧನ ಲಭ್ಯವಿರುತ್ತದೆ. ಆಸಕ್ತ ರೈತರು ಸೆ.5ರೊಳಗಾಗಿ ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.
ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆಗಳ ಅಡಿ ಸಾಮಾನ್ಯ ವರ್ಗದ ರೈತರು ಯಂತ್ರೋಪಕರಣಗಳಾದ ರೋಟವೇಟರ್, ಕಲ್ಟಿವೇಟರ್, ನೇಗಿಲು, ಕೂರಿಗೆ, ಸ್ಲಾಶರ್, ಮಲ್ಚರ್, ಒಕ್ಕಣೆಯಂತ್ರ, ಕಳೆ ಕೊಚ್ಚುವ ಯಂತ್ರ, ಸ್ಟ್ರೇಯರ್, ಮೋಟಾರ್ ಚಾಲಿತ ಸಣ್ಣ ಎಣ್ಣೆ ಗಾಣಗಳು ಶೇ 50ರ ಸಹಾಯಧನದಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ಈ ಹಿಂದಿನ 7 ವರ್ಷದಲ್ಲಿ ಈ ಯೋಜನೆಯ ಲಾಭ ಪಡೆಯದ ರೈತರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ಕೃಷಿ ಬೆಳೆಗಳಿಗೆ ನೀರು ಹಾಯಿಸಿಕೊಳ್ಳಲು ತುಂತುರು ನೀರಾವರಿ ಘಟಕಗಳನ್ನು (ಸ್ಪ್ರೀಂಕ್ಲರ್) ರೈತರಿಗೆ ಶೇ 90ರ ಸಹಾಯಧನದಲ್ಲಿ ನೀಡಲು ಅವಕಾಶವಿದ್ದು, ಈ ಹಿಂದಿನ 7 ವರ್ಷದಲ್ಲಿ ಯೋಜನೆಯ ಲಾಭ ಪಡೆಯದ ರೈತರು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.