ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗೆ ಪೌರಾಣಿಕ ಪಾತ್ರಗಳ ದರ್ಶನ

ಬಹುರೂಪಿಗಳ ಆಗಮನ: ಗಮನ ಸೆಳೆಯುವ ವೇಷ, ನಟನೆ
Last Updated 26 ಸೆಪ್ಟೆಂಬರ್ 2022, 3:12 IST
ಅಕ್ಷರ ಗಾತ್ರ

ನರಗುಂದ: ಉದರ ನಿಮಿತ್ತಂ ಬಹುಕೃತವೇಷಂ ಎನ್ನುವ ಗಾದೆಯಂತೆ ಹಲವಾರು ಶತಮಾನಗಳ ಹಿಂದೆ ಇದ್ದ ಪೌರಾಣಿಕ ಪಾತ್ರಗಳನ್ನು ಆಯಾ ವೇಷದ ಮೂಲಕ ಆಕರ್ಷಕ ಸಂಭಾಷಣೆ ಮೂಲಕ ಪ್ರದರ್ಶಿಸುತ್ತಿದ್ದ ಬಹುರೂಪಿಗಳು ಇಂದು ಮರೆಯಾಗುತ್ತಿದ್ದಾರೆ.

ಆದರೂ ಅಲ್ಲಲ್ಲಿ ಉಳಿದ ಕೆಲವು ಬಹುರೂಪಿಗಳು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು ಚಿಣ್ಣರಿಗೆ, ಯುವಕರಿಗೆ ತಮ್ಮ ವೇಷಭೂಷಣದ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. ಆಧುನಿಕ ಸಂದರ್ಭದಲ್ಲಿ ಎಲ್ಲರೂ ಮೊಬೈಲ್‌ಗೆ ಅಂಟಿಕೊಂಡು ರಾಮಾಯಣ, ಮಹಾಭಾರತ ಎಂದರೇನು? ಎಂದು ಕೇಳಿದಾಗ ಪ್ರತಿಕ್ರಿಯೆ ನೀಡದ ಯುವಜನಾಂಗಕ್ಕೆ ಬಹುರೂಪಿಗಳು ಪೌರಾಣಿಕ ಪಾತ್ರಗಳ ಭಂಡಾರವಾಗಿ ಸಂಸ್ಕೃತಿಯ ಸುಧೆ ಹರಿಸುತ್ತಿದ್ದಾರೆ.

ಸುಮಾರು 200 ಕಿ.ಮೀ. ದೂರದ ಕೊಪ್ಪಳ ಜಿಲ್ಲೆ ತಾವರಗೇರಿಯಿಂದ ಬಂದಿರುವ ಇಳಿವಯಸ್ಸಿನ ಗುಂಡಪ್ಪ ನೇತೃತ್ವದ ಐದು ಜನರ ತಂಡ ರಾಮಾಯಣದ ಮುಖ್ಯಪಾತ್ರಗಳ ಸಂಭಾಷಣೆಯನ್ನು ನಟನೆಯೊಂದಿಗೆ ಮಾಡುತ್ತಿರುವುದು ವಿಶೇಷ. ನಿರಂತರ ಒಂದು ವಾರ ಪಟ್ಟಣದ ಓಣಿ, ನಗರಗಳಲ್ಲಿ ಅಂಗಡಿಗಳ, ಮುಂದೆ ಉಚಿತವಾಗಿ ಪ್ರದರ್ಶಿಸಿ ಕೊನೆ ದಿನ ಅಂಗಡಿಯವರು, ಮನೆಯವರು ಕೊಟ್ಟ ಧನ, ಧಾನ್ಯ ಪಡೆದು ಮತ್ತೊಂದು ಊರಿಗೆ ತೆರಳುವ ಇವರ ಕಲೆ ಇಂದಿನ ಯುವಜನಾಂಗಕ್ಕೆ ರಸದೌತಣದಂತಿದೆ. ಆದರೆ, ಈ ಕಲಾವಿದರಿಗೆ ಸರ್ಕಾರ, ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕಿದೆ.

ತಾವರಗೇರಿಯ ಗುಂಡಪ್ಪ ಸೂತ್ರಧಾರರಾದರೆ, ಮುತ್ತಣ್ಣನು ರಾಮನ ಪಾತ್ರದಲ್ಲಿ, ಶ್ಯಾಮ ಅವರು ರಾವಣ ಪಾತ್ರದಲ್ಲಿ, ರೇಣುಕಪ್ಪ ಹನುಮಂತನ ಪಾತ್ರದಲ್ಲಿ, ಅಣ್ಣಪ್ಪನು ಬಾಲ ಹನುಮಂತ ವೇಷಧಾರಿಗಳಾಗಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದಾರೆ.

‘ಈಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಹಲವೆಡೆ ಸುದ್ದಿಯಾಗಿದೆ. ಇದರಿಂದ ನಮ್ಮ ಹೊಟ್ಟೆ ಪಾಡಿಗೆ ಸಂಚಕಾರ ಉಂಟಾಗಿದೆ. ನಾವು ವೇಷಷಧಾರಿಗಳೇ ಹೊರತು ಮಕ್ಕಳ ಕಳ್ಳರಲ್ಲ. ಮೂರು ತಲೆಮಾರಿನಿಂದ ನಮ್ಮ ಮನೆತನದವರು ಈ ರೀತಿ ಬದುಕುತ್ತಿದ್ದೇವೆ. ನೀವೇ ನಮ್ಮನ್ನು ಸಲಹಬೇಕು. ನಮಗೆ ನಮ್ಮ ಕಲೆಯೇ ಬುದುಕಿನ ಆಧಾರ. ನೀವು ಕೊಡುವ ಅನ್ನ, ಪ್ರೋತ್ಸಾಹ ನಿರಂತರವಾಗಿರಬೇಕು’ ಎಂದು ಗುಂಡಪ್ಪ ಪ್ರಾರ್ಥಿಸಿದರು.

ಬಹುರೂಪಿಗಳು ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ ಕುಣಿತ ಮತ್ತು ಹಾಡಿನ ಮೂಲಕ ಭಾರತೀಯ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಮೂಲಕ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಭಾರತದ ಸಂಸ್ಕೃತಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಇಂತಹ ಜನಾಂಗಕ್ಕೆ ಪ್ರತಿಯೊಬ್ಬರು ಆಸರೆ ನೀಡಬೇಕಿದೆ ಎಂದು ಪಟ್ಟಣದ ಚಿತ್ರಕಲಾ ಶಿಕ್ಷಕ ಡಿ.ಬಿ.ಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT