ನರಗುಂದ: ದೇಶ ಪ್ರಗತಿಪಥದಲ್ಲಿದ್ದರೂ ಲೈಂಗಿಕ ದೌರ್ಜನ್ಯ ನಿಲ್ಲುತ್ತಿಲ್ಲ. ಈ ರೀತಿ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ ಎಂದು ನರಗುಂದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಡಿ.ಗಾಯತ್ರಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ‘ಪೊಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುವುದು ತೀರಾ ಕಡಿಮೆ. ಪೊಕ್ಸೊ ಕಾಯ್ದೆಯಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. 2019ರ ತಿದ್ದುಪಡಿಯ ಬಳಿಕ ಶಿಕ್ಷೆ ಇನ್ನಷ್ಟು ಕಠಿಣಗೊಳಿಸಲಾಗಿದೆ. ಗರಿಷ್ಠ ಕಾಯಿದೆಯಡಿ ದಂಡದೊಂದಿಗೆ ಆರೋಪಿಗೆ 10 ವರ್ಷಕ್ಕಿಂತ ಕಡಿಮೆ ಇಲ್ಲದ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಈ ಕಾಯ್ದೆಯನ್ನು ಎಲ್ಲರೂ ಅರಿಯುವುದು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ರಾಜು ಮಾತನಾಡಿದರು. ಮುಖ್ಯೋಪಾಧ್ಯಾಯ ಆರ್.ಎಸ್.ಪವಾರ, ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಸ್.ಹುಕ್ಕೇರಿ, ಎಂ.ಬಿ. ಕುಲಕರ್ಣಿ, ಆರ್.ಆರ್.ನಾಯ್ಕರ, ಜೆ.ಸಿ.ಬೋಗಾರ, ಶಕುಂತಲಾ ಗಣಿ, ಡಿ.ಕೆ.ಹಾಲವರ ಎಎಸ್‍ಐ, ಕೊಳಿಯವರ, ಆರ್.ಟಿ. ಸೋಮಾಪೂರ ಇದ್ದರು.