ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವ ಪ್ರಸಾರದಲ್ಲಿ ಸಂಘದ ಪಾತ್ರ ಪ್ರಮುಖ

ಲಿಂಗಾಯತ ಪ್ರಗತಿಶೀಲ ಸಂಘದ ಸೇವಾ ಹಸ್ತಾಂತರ ಕಾರ್ಯಕ್ರಮದಲ್ಲಿ ಸಿದ್ಧರಾಮ ಶ್ರೀ ಅಭಿಮತ
Last Updated 25 ಏಪ್ರಿಲ್ 2019, 13:16 IST
ಅಕ್ಷರ ಗಾತ್ರ

ಗದಗ: ‘ತೋಂಟದ ಶ್ರೀಗಳ ಮಾರ್ಗದರ್ಶನದಲ್ಲಿ ಕಳೆದ 49 ವರ್ಷಗಳಿಂದ ಲಿಂಗಾಯತ ಪ್ರಗತಿಶೀಲ ಸಂಘವು ಮಠದ ಮುಖವಾಣಿ ಶಿವಾನುಭವ ಕಾರ್ಯಕ್ರಮಗಳ ಮೂಲಕ ಜನಮಾನಸವನ್ನು ತಿದ್ದಿ ತೀಡುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಧರ್ಮ, ಸಾಹಿತ್ಯ, ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ’ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಸೇವಾ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತೋಂಟದ ಶ್ರೀಗಳಿಗೆ ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ ಹಾಗೂ ಬಸವ ಪುರಸ್ಕಾರ ದೊರೆಯುವಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಪಾತ್ರ ಮಹತ್ವದ್ದಾಗಿದ್ದು, ವರ್ಗ, ವರ್ಣ, ಜಾತಿ, ಮತಗಳ ಸೀಮೆಯನ್ನು ದಾಟಿ ಎಲ್ಲ ಕ್ಷೇತ್ರಗಳ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವುದಲ್ಲದೇ ಉಪನ್ಯಾಸಗಳ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಸಂಘ ಕಟಿಬದ್ಧವಾಗಿದೆ. ಈಗಾಗಲೇ 2,428 ಶಿವಾನುಭವ ಕಾರ್ಯಕ್ರಮಗಳು ನಡೆದಿವೆ. ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಇದೇ ರೀತಿ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಂಘದ ಹಿರಿಮೆ, ಗರಿಮೆಯನ್ನು ಮತ್ತಷ್ಟು ಹೆಚ್ಚಿಸಬೇಕು’ ಎಂದರು.

‘ಕಳೆದ 5 ದಶಕಗಳಿಂದ ಸಂಸ್ಕೃತಿ, ಸಾಹಿತ್ಯ, ಕಲೆ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಲಿಂಗಾಯತ ಪ್ರಗತಿಶೀಲ ಸಂಘವು ನಾಡಿನಲ್ಲೇ ಅಪರೂಪ ಹಾಗೂ ವಿಶಿಷ್ಠವಾದ ಸಂಸ್ಥೆಯಾಗಿದೆ. ವೈದಿಕತೆಯ ವಿರೋಧಿಯಾಗಿ ಉದಿಸಿಬಂದ ಬಸವೇಶ್ವರರಿಂದ ಸ್ಥಾಪನೆಗೊಂಡ ಲಿಂಗಾಯತ ಧರ್ಮವು ಕಾಯಕ, ದಾಸೋಹದಂತಹ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿದೆ. ನಾಡಿನ ಕೆಲವು ಮಠಾಧೀಶರು ಬಸವಣ್ಣನ ಹೆಸರಿನಲ್ಲಿ ವೈದಿಕ ಆಚರಣೆಗಳನ್ನು ಆಚರಿಸುತ್ತಿರುವುದು ಅವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಲಿಂಗಾಯತ ಪ್ರಗತಿಶೀಲ ಸಂಘವು ಲಿಂಗಾಯತ ಧರ್ಮದ ನಿಜಾಚರಣೆಗಳನ್ನು ಪಸರಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ಶಿವಾನಂದ ಹೇಳಿದರು.

ಪ್ರಸಕ್ತ ಸಾಲಿಗೆ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಐಲಿ, ಉಪಾಧ್ಯಕ್ಷರಾಗಿ ಸಂಗಮೇಶ ದುಂದೂರ, ಗೌರಕ್ಕ ಬಡಿಗಣ್ಣವರ,ಕಾರ್ಯದರ್ಶಿ ವೀರಣ್ಣ ಗೊಡಚಿ, ಸಹ ಕಾರ್ಯದರ್ಶಿಯಾಗಿ ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಕೋಶಾಧ್ಯಕ್ಷ ಶಶಿಧರ ಬೀರನೂರ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಸುಂಡಿ, ಶಿವಾನುಭವ ಸಮಿತಿ ಅಧ್ಯಕ್ಷರಾಗಿ ವಿವೇಕಾನಂದಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಿಗೆ ಡಾ.ತೋಂಟದ ಸಿದ್ಧರಾಮ ಶ್ರೀ ಪ್ರಮಾಣವಚನ ಬೋಧಿಸಿದರು.

ದೀಪ್ತಿ ಪಾಠಕ ಹಾಗೂ ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಶೇಖಣ್ಣ ಕವಳಿಕಾಯಿ, ಪ್ರೊ.ಬಾಹುಬಲಿ ಜೈನರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT